

ದುಬೈ: ಮೂರು ಆವೃತ್ತಿಗಳ ಬಳಿಕ ಪ್ಲೇ-ಆಫ್ ಖಾತ್ರಿಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-13ರ ತನ್ನ 11ನೇ ಪಂದ್ಯದಲ್ಲಿ ಈಗಾಗಲೇ ಲೀಗ್ನಿಂದ ಹೊರಬಿದ್ದಿರುವ ಮೂರು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಪಂದ್ಯ ಧೋನಿ ಬಳಗಕ್ಕೆ ಔಪಚಾರಿಕವಾದರೂ ಅಂಕಪಟ್ಟಿಯಲ್ಲಿ ಮೇಲೇರುವ ದೃಷ್ಟಿಯಿಂದ ಕೊಹ್ಲಿ ಪಡೆ ಪಾಲಿಗೆ ಮಹತ್ವ ಪಡೆದಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್ಸಿಬಿ ಬಹುತೇಕ ಪ್ಲೇ-ಆಫ್ ಹಂತವನ್ನು ಖಚಿತಪಡಿಸಿಕೊಂಡಿದೆ. ಮೊದಲ ಮುಖಾಮುಖಿಯಲ್ಲಿ ಆರ್ಸಿಬಿ 37 ರನ್ಗಳಿಂದ ಜಯ ದಾಖಲಿಸಿತ್ತು.
ಆತ್ಮವಿಶ್ವಾಸದಲ್ಲಿ ವಿರಾಟ್ ಕೊಹ್ಲಿ ಬಳಗ
ಲೀಗ್ನಲ್ಲಿ ಇದುವರೆಗೂ ಆಡಿರುವ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, 3ರಲ್ಲಿ ಸೋಲು 14 ಅಂಕ ಹೊಂದಿರುವ ಆರ್ಸಿಬಿ, ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಭರ್ಜರಿ ಲಯದಲ್ಲಿದೆ. ಆರಕ್ಕೇರದ, ಮೂರಕ್ಕೀಳಿಯದ ಆರಂಭಿಕರ ನಿರ್ವಹಣೆ ನಡುವೆಯೂ ಮಧ್ಯಮ ಕ್ರಮಾಂಕ ಹಾಗೂ ಬೌಲರ್ಗಳ ಮಾರಕ ದಾಳಿಯಿಂದ ಆರ್ಸಿಬಿ ಇದುವರೆಗೂ ಯಶ ಸಾಧಿಸಲು ಯಶಸ್ವಿಯಾಗಿದೆ. ಅಂಕಪಟ್ಟಿಯಲ್ಲಿ ಮೇಲೇರುವ ದೃಷ್ಟಿಯಿಂದ ಆರ್ಸಿಬಿ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ.ರಾಜಸ್ಥಾನ ರಾಯಲ್ಸ್ ಹಾಗು ಕೆಕೆಆರ್ ಎದುರು ಭರ್ಜರಿ ಜಯ ದಾಖಲಿಸಿರುವ ಆರ್ಸಿಬಿ, ಬಲಿಷ್ಠ ಬೌಲಿಂಗ್ ಪಡೆ ಹೊಂದಿದೆ. ಕೆಕೆಆರ್ ಎದುರು ಮಿಂಚಿದ್ದ ಮೊಹಮದ್ ಸಿರಾಜ್, ಕ್ರಿಸ್ ಮಾರಿಸ್, ಇಸುರು ಉದಾನ, ಯಜುವೇಂದ್ರ ಚಾಹಲ್ ಹಾಗೂ ವಾಷಿಂಗ್ಟನ್ ಸುಂದರ್ ಒಳಗೊಂಡ ಬೌಲಿಂಗ್ ಉತ್ತಮ ಲಯದಲ್ಲಿದ್ದರೆ, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆಯುತ್ತಿದ್ದಾರೆ.
ಸಿಎಸ್ಕೆ ಪಾಲಿಗೆ ಕಾಟಾಚಾರದ ಹೋರಾಟ
ಲೀಗ್ ಇತಿಹಾಸದಲ್ಲಿ ಮೊದಲ ಬಾರಿಗೆ 8 ಪಂದ್ಯ ಸೋತು ಅಂತಿಮ ನಾಲ್ಕರ ಪೈಪೋಟಿಯಿಂದ ಹೊರಬಿದ್ದಿರುವ ಧೋನಿ ಬಳಗಕ್ಕೆ ಈ ಕದನ ಆಟಕ್ಕುಂಟು ಲೆಕ್ಕಕ್ಕಿಲ್ಲ. ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿ ಮತ್ತೊಮ್ಮೆ ಯುವ ಆಟಗಾರರನ್ನು ಕಣಕ್ಕಿಳಿಸುವ ಯೋಜನೆಯಲ್ಲಿದೆ ಸಿಎಸ್ಕೆ. ಶುಕ್ರವಾರ ಮುಂಬೈ ಎದುರು ಹೀನಾಯ ನಿರ್ವಹಣೆ ನೀಡಿದ್ದ ಸಿಎಸ್ಕೆ, ಅಂತಿಮ ಪಂದ್ಯಗಳಲ್ಲಿ ಸುಧಾರಿತ ನಿರ್ವಹಣೆ ತೋರುವ ವಿಶ್ವಾಸದಲ್ಲಿದೆ. ಜತೆಗೆ ಯುವ ಆಟಗಾರರಿಗೆ ಅವಕಾಶ ನೀಡಿ ಮತ್ತೊಂದು ಪ್ರಯೋಗಕ್ಕೆ ಮುಂದಾಗಲಿದೆ.
ಟೀಮ್ ನ್ಯೂಸ್:
ಆರ್ಸಿಬಿ:
ಸತತ ಎರಡು ಗೆಲುವು ದಾಖಲಿಸಿರುವ ಆರ್ಸಿಬಿ ತಂಡದಲ್ಲಿ ಹೆಚ್ಚಿನ ಬದಲಾವಣೆ ನಿರೀಕ್ಷಿಸುವಂತಿಲ್ಲ. ಗುರುಕೀರತ್ ಮಾನ್ ಸಿಂಗ್ ಬದಲಿಗೆ ಆಲ್ರೌಂಡರ್ ಶಿವಂ ದುಬೆ ತಂಡಕ್ಕೆ ವಾಪಸಾಗಬಹುದು.
ಸಂಭಾವ್ಯ ತಂಡ: ದೇವದತ್ ಪಡಿಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಶಿವಂ ದುಬೆ/ಗುರುಕೀರತ್ ಮಾನ್ ಸಿಂಗ್, ಕ್ರಿಸ್ ಮಾರಿಸ್, ವಾಷಿಂಗ್ಟನ್ ಸುಂದರ್, ಇಸುರು ಉದಾನ್, ಮೊಹಮದ್ ಸಿರಾಜ್, ನವದೀಪ್ ಸೈನಿ, ಯಜುವೇಂದ್ರ ಚಾಹಲ್.
ಕಳೆದ ಪಂದ್ಯ: ಕೆಕೆಆರ್ ಎದುರು 8 ವಿಕೆಟ್ ಜಯ
ಸಿಎಸ್ಕೆ:
ಮುಂಬೈ ಇಂಡಿಯನ್ಸ್ ಎದುರು ಮೂರು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಸಿಎಸ್ಕೆ, ಈ ಪಂದ್ಯದಲ್ಲೂ ಬದಲಾವಣೆ ಮಾಡಿಕೊಳ್ಳಲಿದೆ. ತಂಡದ ಪಾಲಿಗೆ ಈ ಪಂದ್ಯ ಔಪಚಾರಿಕವಾಗಿರುವುದರಿಂದ ಇದುವರೆಗೂ ಆಡದಿರುವ ಅಟಗಾರರಿಗೆ ಅವಕಾಶ ನೀಡಬಹುದು.
ಸಂಭಾವ್ಯ ತಂಡ: ಋತುರಾಜ್ ಗಾಯಕ್ವಾಡ್, ಪ್ಲೆಸಿಸ್, ಅಂಬಟಿ ರಾಯುಡು, ಎನ್. ಜಗದೀಶ್, ಧೋನಿ (ನಾಯಕ, ವಿಕೀ), ಆರ್.ಜಡೇಜಾ/ಸಾಯಿ ಕಿಶೋರ್, ಸ್ಯಾಮ್ ಕರನ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್, ಜೋಸ್ ಹ್ಯಾಸಲ್ವುಡ್/ಲುಂಗಿ ಎನ್ಗಿಡಿ. ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ಎದುರು 10 ವಿಕೆಟ್ ಸೋಲು
ಪಂದ್ಯ ಆರಂಭ: ರಾತ್ರಿ: 3.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಮುಖಾಮುಖಿ: 25, ಆರ್ಸಿಬಿ: 9, ಸಿಎಸ್ಕೆ: 15, ರದ್ದು: 1.