ನಾಯಕತ್ವಕ್ಕೆ ಹರ್ಮನ್‌ಪ್ರೀತ್ ರಾಜೀನಾಮೆ ಹಿಂದಿನ ಅಸಲಿ ಕಾರಣ ಬಯಲು: ಹೊರಬಿತ್ತು ಡ್ರೆಸ್ಸಿಂಗ್ ರೂಮ್‌ ಸೀಕ್ರೆಟ್​...! Harmanpreet Kaur

ಹರ್ಮನ್‌ಪ್ರೀತ್ ಕೌರ್ ಅವರು ಎಲ್ಲಾ ಮಾದರಿಯ ಕ್ರಿಕೆಟ್​ ನಾಯಕತ್ವಕ್ಕೆ ನಿನ್ನೆ (ಅ.06) ದಿಢೀರ್​ ರಾಜೀನಾಮೆ ಘೋಷಿಸಿದರು. ಇದರ ಬೆನ್ನಲ್ಲೇ ಟೀಮ್​ ಇಂಡಿಯಾದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರಿಗೆ ಎಲ್ಲರೂ ನಿರೀಕ್ಷೆ ಮಾಡಿದಂತೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಲಾಯಿತು.
Harmanpreet Kaur
ಭಾರತೀಯ ಕ್ರಿಕೆಟ್​ನ ಮಹಿಳಾ ತಂಡದ ನೂತನ ನಾಯಕಿ ಸ್ಮೃತಿ ಮಂಧಾನ ಹಾಗೂ ಮಾಜಿ ನಾಯಕಿ ಹರ್ಮನ್​ಪ್ರೀತ್​ ಕೌರ್​
Published on: 

ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಇಬ್ಬರು ದಿಗ್ಗಜರಾದ ಹರ್ಮನ್‌ಪ್ರೀತ್ ಕೌರ್ ( Harmanpreet Kaur ) ಹಾಗೂ ಸ್ಮೃತಿ ಮಂಧಾನ ( Smriti Mandhana ) ನಡುವೆ ಎಲ್ಲವೂ ಸರಿಯಿಲ್ಲ ಎಂಬ ಗುಸುಗುಸುಗಳಿಗೆ ಅಂತಿಮವಾಗಿ ತೆರೆಬಿದ್ದಿದೆ. ನಾಯಕತ್ವದ ಗದ್ದುಗೆಯ ವಿಚಾರದಲ್ಲಿ ಇಬ್ಬರ ನಡುವೆ ಉಂಟಾದ ಶೀತಲ ಸಮರ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಒಡಕಿನ ಕಾರಣದಿಂದಲೇ ಹರ್ಮನ್‌ಪ್ರೀತ್ ನಾಯಕತ್ವ ತೊರೆಯಬೇಕಾಯಿತು ಎಂಬ ಸ್ಫೋಟಕ ಮಾಹಿತಿ ಇದೀಗ ಹೊರಬಿದ್ದಿದೆ. ಇದರ ನಡುವೆ ನೂತನ ನಾಯಕಿಯಾಗಿ ಅಧಿಕಾರ ಸ್ವೀಕರಿಸಿರುವ ಸ್ಮೃತಿ ಮಂಧಾನ ಮುಂದಿನ ದಿನಗಳಲ್ಲಿ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬ ಕುತೂಹಲವೂ ಗರಿಗೆದರಿದೆ.

ಅಂದಹಾಗೆ, ಹರ್ಮನ್‌ಪ್ರೀತ್ ಕೌರ್ ಅವರು ಎಲ್ಲಾ ಮಾದರಿಯ ಕ್ರಿಕೆಟ್​ ನಾಯಕತ್ವಕ್ಕೆ ನಿನ್ನೆ (ಅ.06) ದಿಢೀರ್​ ರಾಜೀನಾಮೆ ಘೋಷಿಸಿದರು. ಇದರ ಬೆನ್ನಲ್ಲೇ ಟೀಮ್​ ಇಂಡಿಯಾದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಅವರಿಗೆ ಎಲ್ಲರೂ ನಿರೀಕ್ಷೆ ಮಾಡಿದಂತೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಲಾಯಿತು. 2016ರಲ್ಲಿ ಮೊದಲ ಬಾರಿಗೆ ಭಾರತ ತಂಡವನ್ನು ಮುನ್ನಡೆಸಿದ 37 ವರ್ಷದ ಹರ್ಮನ್‌ಪ್ರೀತ್ ಕೌರ್, ಜಪಾನ್​​​ನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ತಂದುಕೊಡುವ ಮೂಲಕ ತಮ್ಮ ಅದ್ಭುತ ನಾಯಕತ್ವದ ಹಾದಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದ್ದಾರೆ.

Also Read
ಈ ನಿರ್ಧಾರ ಎಳ್ಳಷ್ಟೂ ಸುಲಭವಾಗಿರಲಿಲ್ಲ...ನಾಯಕತ್ವಕ್ಕೆ ದಿಢೀರ್​ ಗುಡ್‌ಬೈ ಹೇಳಿದ ಹರ್ಮನ್‌ಪ್ರೀತ್ ಕೌರ್! ಕಾರಣ ಏನು? Harmanpreet Kaur
Harmanpreet Kaur

ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಗೆಲುವಿನ ಬಳಿಕವೂ ಆಯ್ಕೆ ಸಮಿತಿಯು ನಾಯಕತ್ವದ ವಿಚಾರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಆದರೆ, ಸತತ ಟಿ20 ವಿಶ್ವಕಪ್‌ಗಳಲ್ಲಿ ತಂಡವು ನಿರೀಕ್ಷಿತ ಪ್ರದರ್ಶನ ನೀಡದೆ ಮುಂಚಿತವಾಗಿಯೇ ಟೂರ್ನಿಯಿಂದ ಹೊರಬಿದ್ದಿದ್ದು ನಾಯಕತ್ವದ ಬದಲಾವಣೆಯ ಚರ್ಚೆಗೆ ನಾಂದಿ ಆಡಿತು. ಅಂತಿಮವಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರ ನೇತೃತ್ವದಲ್ಲಿ ಇತ್ತೀಚೆಗೆ ಅಸ್ಸಾಂನ ಗುವಾಹಟಿಯಲ್ಲಿ ಬಿಸಿಸಿಐ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ನಾಯಕತ್ವ ಬದಲಾವಣೆ ಅನಿವಾರ್ಯ ಎಂಬ ಕೂಗು ಕೇಳಿಬಂತು. ಈ ಸಭೆ ನಡೆದ ಕೆಲವೇ ದಿನಗಳಲ್ಲಿ ಹರ್ಮನ್‌ಪ್ರೀತ್ ಸ್ವಯಂಪ್ರೇರಿತರಾಗಿ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ.

ಸ್ಮೃತಿ ಮಂಧಾನ ನೇಮಕ

2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಎಡಗೈ ಬ್ಯಾಟರ್ ಸ್ಮೃತಿ ಮಂಧಾನ, ಎಲ್ಲಾ ಮಾದರಿಗಳಿಂದ ಒಟ್ಟು 10,000ಕ್ಕೂ ಅಧಿಕ ರನ್‌ಗಳನ್ನು ಗಳಿಸಿ ದೇಶದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೌಶಲ್ಯದ ಜೊತೆಗೆ ತಮ್ಮ ಆಟಕ್ಕೆ ಬಲ ತುಂಬಿಕೊಂಡಿರುವ ಮಂಧಾನಗೆ ಹಲವು ವರ್ಷಗಳ ಹಿಂದೆಯೇ ನಾಯಕತ್ವ ನೀಡಬೇಕಿತ್ತು ಎಂಬ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ಆಟದ ಮೇಲಿನ ವಿಶ್ವಾಸದೊಂದಿಗೆ ದೊಡ್ಡ ಟೂರ್ನಿಗಳನ್ನು ಗೆಲ್ಲುವ ಗುರಿಯನ್ನು ಮಂಧಾನ ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು.

ಡ್ರೆಸ್ಸಿಂಗ್ ರೂಮ್ ಒಡಕು ಹಾಗೂ ನಾಯಕತ್ವದ ವಿವಾದ

ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ನಡುವೆ ನಾಯಕತ್ವದ ವಿಚಾರವಾಗಿ ಕೆಲವು ಕಾಲದಿಂದ ಅಂತರವಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈ ಇಬ್ಬರು ದಿಗ್ಗಜರ ನಡುವೆ ಸಾಮರಸ್ಯದ ಕೊರತೆಯು ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ಸ್ವಲ್ಪ ಮಟ್ಟಿನ ಅಸ್ಥಿರತೆಗೆ ಕಾರಣವಾಗಿತ್ತು ಎಂದು ತಂಡದ ಆಂತರಿಕ ಮೂಲಗಳು ತಿಳಿಸಿವೆ. ಒಂದು ಹಂತದಲ್ಲಿ ಇಬ್ಬರು ಒಬ್ಬರೊನ್ನೊಬ್ಬರು ನೋಡುತ್ತಲೇ ಇರಲಿಲ್ಲ. ಇದರಿಂದ ತಂಡದ ಸಂಯೋಜನೆ ಮೇಲೆ ಭಾರಿ ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಮಿಥಾಲಿ ರಾಜ್ ಮತ್ತು ಹರ್ಮನ್‌ಪ್ರೀತ್ ನಡುವೆಯೂ ಇಂತಹದೇ ಸನ್ನಿವೇಶಗಳು ಎದುರಾಗಿದ್ದವು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Also Read
ನಾಯಕತ್ವಕ್ಕೆ ಹರ್ಮನ್​ ಗುಡ್​ಬೈ ಬೆನ್ನಲ್ಲೇ ಭಾರತ ಮಹಿಳಾ ತಂಡದ ನೂತನ ಕ್ಯಾಪನ್​ ಆಗಿ ಸ್ಮೃತಿ ಮಂಧಾನ ನೇಮಕ | Smriti Mandhana
Harmanpreet Kaur

ಹರ್ಮನ್‌ಪ್ರೀತ್ ಕೌರ್ ಅವರ ಮುಂದಿನ ಪ್ರಯಾಣ

ನಾಯಕತ್ವದ ಜವಾಬ್ದಾರಿಯಿಂದ ಮುಕ್ತರಾಗಿರುವ ಹರ್ಮನ್‌ಪ್ರೀತ್ ಕೌರ್, ಮುಂದಿನ ಎರಡು-ಮೂರು ವರ್ಷಗಳ ಕಾಲ ಕೇವಲ ಶುದ್ಧ ಬ್ಯಾಟರ್ ಆಗಿ ತಂಡದಲ್ಲಿ ಮುಂದುವರಿಯಲು ಬಯಸಿದ್ದಾರೆ. ಆದರೆ, ಇತ್ತೀಚಿನ ಪಂದ್ಯಗಳಲ್ಲಿ ಅವರ ಫಾರ್ಮ್ ಅಷ್ಟು ಉತ್ತಮವಾಗಿಲ್ಲದಿರುವುದರಿಂದ, ನಾಯಕತ್ವದ ಒತ್ತಡವಿಲ್ಲದೆ ಅವರು ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಗಮನಾರ್ಹವಾಗಿ ಸುಧಾರಿಸಿಕೊಳ್ಳಬೇಕಾದ ದೊಡ್ಡ ಸವಾಲು ಎದುರಾಗಿದೆ.

ಹೊಸ ನಾಯಕಿಯ ಸಾರಥ್ಯ

ಸ್ಮೃತಿ ಮಂಧಾನ ಅವರ ನಾಯಕತ್ವದ ಯುಗವು ಆರಂಭವಾಗುತ್ತಿರುವುದರಿಂದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಹೊಸ ಉತ್ಸಾಹದೊಂದಿಗೆ ಮುನ್ನಡೆಯಲು ಸಜ್ಜಾಗಿದೆ. ತಂಡದ ಹಳೆಯ ಭಿನ್ನಾಭಿಪ್ರಾಯಗಳನ್ನು ಮರೆತು, ಎಲ್ಲರೂ ಒಗ್ಗಟ್ಟಾಗಿ ದೇಶದ ಕೀರ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಂಧಾನ ಯಾವ ರೀತಿಯ ರಣತಂತ್ರ ರೂಪಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net