RCB ವಿರುದ್ಧ ಸೋಲು... ನಮ್ಮ ಸೋಲಿಗೆ ನಾವು ಮಾಡಿದ ಆ ಒಂದೇ ಒಂದು ಮಿಸ್ಟೇಕ್​ ಕಾರಣ ಎಂದ ಕೌರ್​! Harmanpreet Kaur

ಮುಂಬೈ ಇಂಡಿಯನ್ಸ್​ ತಂಡಕ್ಕೆ ಆರ್​ಸಿಬಿ ವಿರುದ್ಧ ಸೋಲು
ಮುಂಬೈ ಇಂಡಿಯನ್ಸ್​ ತಂಡಕ್ಕೆ ಆರ್​ಸಿಬಿ ವಿರುದ್ಧ ಸೋಲು
Published on

ಪ್ರಮುಖ ಮುಖ್ಯಾಂಶಗಳು

  • ನಿನ್ನೆ ನಡೆದ ಮಹಿಳಾ ಪ್ರೀಮಿಯರ್​​ ಲೀಗ್​ನ 4ನೇ ಆವೃತ್ತಿಯ ಉದ್ಘಾಟನಾ ಪಂದ್ಯ
  • ರೋಚಕ ಪಂದ್ಯದಲ್ಲಿ ಮುಂಬೈ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಾರಿ ಪಡೆಗೆ ಗೆಲುವು
  • ಕೊನೆಯ ಎಸೆತದಲ್ಲಿ ಮುಂಬೈ ವಿರುದ್ಧ ಮೂರು ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದ ಆರ್​ಸಿಬಿ
WPL 2026: ಮಹಿಳಾ ಪ್ರೀಮಿಯರ್​​ ಲೀಗ್​ ( WPL ) ನ 4ನೇ ಆವೃತ್ತಿಯ ಉದ್ಘಾಟನಾ ಪಂದ್ಯವೇ ಅಭಿಮಾನಿಗಳಿಗೆ ಸಖತ್​ ಕಿಕ್ ನೀಡಿತು. ನಿನ್ನೆ ನಡೆದ ರೋಚಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ( RCB ) ತಂಡದ ನಾರಿ ಪಡೆ, ಕೊನೆಯ ಎಸೆತದಲ್ಲಿ ಮುಂಬೈ ವಿರುದ್ಧ ಮೂರು ವಿಕೆಟ್​ಗಳಿಂದ ಭರ್ಜರಿ ಗೆಲುವು ದಾಖಲಿಸಿತು. 
ಮೆಗಾ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ತಮ್ಮ ತಂಡದ ಸೋಲಿನ ಬಗ್ಗೆ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಪ್ರತಿಕ್ರಿಯಿಸಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಲೇಡಿ ಸೂಪರ್​ ಸ್ಟಾರ್ ಆಗಿ ಮಿಂಚಿದ​ ನಾಡಿನ್ ಡಿ ಕ್ಲರ್ಕ್ ಅವರನ್ನು ಔಟ್ ಮಾಡುವ ಅವಕಾಶಗಳನ್ನು ಕಳೆದುಕೊಂಡಿದ್ದೇ ನಮ್ಮ ಸೋಲಿಗೆ ಕಾರಣ ಎಂದು ಕೌರ್​ ಹೇಳಿದರು. ಕೊನೆಯ ಓವರ್‌ನಲ್ಲಿ ಒಂದೇ ಒಂದು ಉತ್ತಮ ಎಸೆತವನ್ನು ಎಸೆದಿದ್ದರೂ ಪಂದ್ಯದ ಫಲಿತಾಂಶವೇ ವಿಭಿನ್ನವಾಗಿರುತ್ತಿತ್ತು ಎಂದು ತಿಳಿಸಿದರು. 
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 154 ರನ್ ಗಳಿಸಿತು. ಸಜೀವನ್ ಸಜ್ಜನ್ (45 ರನ್​, 25 ಎಸೆತ, 7 ಬೌಂಡರಿ, 1 ಸಿಕ್ಸರ್), ನಿಕೋಲಾ ಕ್ಯಾರಿ (40 ರನ್​, 29 ಎಸೆತ, 4 ಬೌಂಡರಿ) ಮತ್ತು ಜಿ ಕಮಲಿನಿ (32 ರನ್​, 28 ಎಸೆತ, 5 ಬೌಂಡರಿ) ಮುಂಬೈ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕಿ ಹರ್ಮನ್‌ಪ್ರೀತ್ ಕೌರ್ 20 ರನ್​ಗೆ ವಿಕೆಟ್​ ಒಪ್ಪಿಸಿದರು. ಆರ್‌ಸಿಬಿ ಬೌಲರ್‌ಗಳಲ್ಲಿ ನಾಡಿನ್ ಡಿ ಕ್ಲರ್ಕ್ ನಾಲ್ಕು ವಿಕೆಟ್ ಪಡೆದರು. ಲಾರೆನ್ ಬೆಲ್ ಮತ್ತು ಶ್ರೇಯಾಂಕ ಪಾಟೀಲ್ ತಲಾ ಒಂದು ವಿಕೆಟ್ ಪಡೆದರು.
ಬಳಿಕ ಗುರಿ ಬೆನ್ನತ್ತಿದ ಆರ್​ಸಿಬಿ ಪರ ನಾಡಿನ್ ಡಿ ಕ್ಲರ್ಕ್ (ಅಜೇಯ 63 ರನ್​, 44 ಎಸೆತ, 7 ಬೌಂಡರಿ, 2 ಸಿಕ್ಸರ್) ಅದ್ಭುತ ಇನ್ನಿಂಗ್ಸ್ ಆಡಿದರು. ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 155 ರನ್‌ಗಳ ಗುರಿಯನ್ನು ತಲುಪಿತು. ಗ್ರೇಸ್ ಹ್ಯಾರಿಸ್ (25), ಅರುಂಧತಿ ರೆಡ್ಡಿ (20) ಮತ್ತು ಸ್ಮೃತಿ ಮಂಧಾನ (18) ಉಪಯುಕ್ತ ಕಾಣಿಕೆ ನೀಡಿದರು. ಮುಂಬೈ ಬೌಲರ್‌ಗಳಲ್ಲಿ, ನಿಕೋಲಾ ಕ್ಯಾರಿ ಮತ್ತು ಅಮೆಲಿಯಾ ಕೆರ್ ತಲಾ ಎರಡು ವಿಕೆಟ್ ಪಡೆದರು.
ಪಂದ್ಯದ ನಂತರ ಮಾತನಾಡಿದ ಮುಂಬೈ ನಾಯಕಿ ಹರ್ಮನ್​ಪ್ರೀತ್​ ಕೌರ್, ನಾಡಿನ್ ಡಿ ಕ್ಲರ್ಕ್ ಅವರು ಕೊನೆಯ ಓವರ್​ನಲ್ಲಿ ಅಗತ್ಯವಿರುವಷ್ಟು ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆಂದು ನನಗೆ ತಿಳಿದಿದೆ. ಕೊನೆಯ ಓವರ್​ನಲ್ಲಿ ನಮಗೆ ಒಂದೇ ಒಂದು ಉತ್ತಮ ಚೆಂಡನ್ನು ಎಸೆಯಲು ಸಾಧ್ಯವಾಗಲಿಲ್ಲ. ಟಿ20 ಕ್ರಿಕೆಟ್​ನಲ್ಲಿ ಕೆಲವೊಮ್ಮೆ ಇದು ಸಂಭವಿಸುತ್ತದೆ ಎಂದು ಹೇಳಿದರು.
ನಾಡಿನ್ ಡಿ ಕ್ಲರ್ಕ್ ಅವರನ್ನು ಮೂರು ಬಾರಿ ಔಟ್ ಮಾಡುವ ಅವಕಾಶಗಳನ್ನು ನಾವು ಕಳೆದುಕೊಂಡೆವು. ಇಂತಹ ಚಾನ್ಸ್​ ಬ್ಯಾಟರ್‌ಗಳ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಈ ಪಂದ್ಯವನ್ನು ಗೆಲ್ಲಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು. ಬಂದ ಅವಕಾಶಗಳನ್ನು ಬಳಸಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ಕೊನೆಯ ಓವರ್‌ನಲ್ಲಿ ಒಂದು ಉತ್ತಮ ಚೆಂಡು ಬೌಲ್ ಮಾಡಿದ್ದರೆ, ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಈ ಪಂದ್ಯದ ಬಗ್ಗೆ ಹೆಚ್ಚು ಯೋಚಿಸುತ್ತೇವೆ ಮತ್ತು ಈ ಸೋಲಿನಿಂದ ಕಲಿಯುತ್ತೇವೆ ಎಂದರು, (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net