

IPL 2027 Auction: ಕಳೆದ 2 ವರ್ಷಗಳಲ್ಲಿ ಬ್ಯಾಕ್ ಟು ಬ್ಯಾಕ್ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಇತಿಹಾಸ ಸೃಷ್ಟಿಸಿರುವುದು ನಮಗೆಲ್ಲ ಗೊತ್ತೇ ಇದೆ. ಈಗಾಗಲೇ ಮೂರನೇ ಅಂದರೆ 20ನೇ ಆವೃತ್ತಿಯನ್ನೂ ಆರ್ಸಿಬಿಯೇ ಗೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸಲಿದೆ ಎಂದು ಕ್ರಿಕೆಟ್ ಪ್ರೇಮಿಗಳು ಭವಿಷ್ಯ ನುಡಿದಿದ್ದಾರೆ. ಎರಡು ತಿಂಗಳ ಕಾಲ ನಡೆಯಲಿರುವ ಟಿ20 ಹಬ್ಬಕ್ಕೆ ಕಾದು ಕುಳಿತಿರುವ ಫ್ಯಾನ್ಸ್ಗಳಿಗೆ, ಇದೀಗ ಬಿಸಿಸಿಐ ಮಹತ್ವದ ಅಪ್ಡೇಟ್ವೊಂದನ್ನು ಹಂಚಿಕೊಂಡಿದೆ. ಅದುವೇ ಐಪಿಎಲ್ 2027ರ ಹರಾಜು ಪ್ರಕ್ರಿಯೆ.
20ನೇ ಆವೃತ್ತಿಯಲ್ಲಿ ಯಾವ ಆಟಗಾರರನ್ನು ತಮ್ಮ ತಂಡಕ್ಕೆ ಕರೆದುಕೊಳ್ಳಬೇಕು? ಯಾರಿಗೆಲ್ಲ ಗೇಟ್ಪಾಸ್ ಕೊಡಬೇಕು ಹಾಗೂ ಯಾವ ವಿಭಾಗಕ್ಕೆ ಯಾರನ್ನು ಆಯ್ಕೆ ಮಾಡಿಕೊಂಡರೆ ಉತ್ತಮ ಎಂಬುದನ್ನು ಆಯಾ ಫ್ರಾಂಚೈಸಿಗಳು ನಿರ್ಧರಿಸುವುದೇ ವರ್ಷದ ಕೊನೆಯ ಎರಡು ತಿಂಗಳಲ್ಲಿ. 10 ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಹಾಗೂ ತಂಡದ ಇತರೆ ಸದಸ್ಯರು, ಒಂದಷ್ಟು ಕ್ರಿಕೆಟಿಗರಿಗೆ ಗುಡ್ಬೈ ಹೇಳಿ, ನಂತರ ನಡೆಯುವ ಹರಾಜಿನಲ್ಲಿ ಎಷ್ಟು ಜನ ಪ್ರತಿಭಾವಂತ ಹಾಗೂ ಯುವ ಆಟಗಾರರಿಗೆ ಸ್ಥಾನ ಕೊಡಬೇಕು ಎಂಬುದನ್ನು ಚರ್ಚಿಸಿ, ಒಮ್ಮತದಿಂದ ನಿರ್ಧಾರ ತೆಗೆದುಕೊಳ್ಳುವ ವೇದಿಕೆಗೆ ಇದೀಗ ಅಧಿಕೃತ ದಿನಾಂಕ ಘೋಷಣೆ ಕೂಡ ಆಗಿದೆ.
ಜಾಗತಿಕವಾಗಿ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡುವ ಈ ಶಾರ್ಟ್ ಫಾರ್ಮ್ ಕ್ರಿಕೆಟ್ ಲೀಗ್, ಈ ಬಾರಿಯ ಹರಾಜು ಪ್ರಕ್ರಿಯೆಯನ್ನು ಇದೇ ಡಿಸೆಂಬರ್ 16ರಂದು ಗೋವಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಈ ಕುರಿತಾಗಿ ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದೆ. ಐಟಿಸಿ ಗ್ರ್ಯಾಂಡ್ ಗೋವಾದಲ್ಲಿ ಈ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಕ್ರಿಕೆಟ್ ವರದಿಗಳು ಉಲ್ಲೇಖಿಸಿವೆ. ಕಳೆದ ಆವೃತ್ತಿಗಳ ಪ್ರಕ್ರಿಯೆಗಳು ದುಬೈ, ಸೌದಿ ಅರೇಬಿಯಾ ಮತ್ತು ಅಬುಧಾಬಿಯಂತಹ ವಿದೇಶಿ ನೆಲದಲ್ಲಿ ನಡೆದಿತ್ತು. ಆದರೆ, 20ನೇ ಸೀಸನ್ ಭಾರತದಲ್ಲಿ ನಡೆಯುತ್ತಿರುವುದು ಖುಷಿಯ ಸಂಗತಿ.
ಸಾಮಾನ್ಯವಾಗಿ, ಮೆಗಾ ಹರಾಜುಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಆಟಗಾರರನ್ನು ಮಾತ್ರ ತಂಡದಲ್ಲಿ ಉಳಿಸಿಕೊಳ್ಳಲು ಅವಕಾಶವಿರುತ್ತದೆ. ಆದರೆ, ಈ ಮಿನಿ ಹರಾಜುಗಳಲ್ಲಿ ಅಂತಹ ನಿರ್ಬಂಧಗಳಿರುವುದಿಲ್ಲ ಎಂಬುದು ಗಮನಾರ್ಹ. ಫ್ರಾಂಚೈಸಿಗಳು ತಮಗೆ ಬೇಕಾದಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು. ಆದಾಗ್ಯೂ, ಪ್ರತಿ ತಂಡವು ತಮ್ಮ ತಂಡದಲ್ಲಿ ಗರಿಷ್ಠ 25 ಆಟಗಾರರನ್ನು ಮಾತ್ರ ಹೊಂದಿರಲು ಅವಕಾಶವಿದೆ. ಇದರಲ್ಲಿ ವಿದೇಶಿ ಆಟಗಾರರ ಸಂಖ್ಯೆ 8ಕ್ಕಿಂತ ಹೆಚ್ಚಿರಬಾರದು. ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಮತ್ತು ಕೈಬಿಡುವ ಆಟಗಾರರ ಪಟ್ಟಿಯನ್ನು ನವೆಂಬರ್ 15ರೊಳಗೆ ಬಿಸಿಸಿಐಗೆ ಅಂತಿಮ ಪಟ್ಟಿ ಮಾಡಿ ಸಲ್ಲಿಸುವುದು ಕಡ್ಡಾಯ.
ಹರಾಜು ಪ್ರಾರಂಭವಾಗುವ ಮೊದಲು, ತಂಡಗಳು ಪರಸ್ಪರ ಆಟಗಾರರನ್ನು ಬದಲಾಯಿಸಿಕೊಳ್ಳಲು ಒಂದು ವಿಶೇಷ ಅವಕಾಶ ಇರುತ್ತದೆ. ಈ ಪ್ರಕ್ರಿಯೆಯ ಮೂಲಕ, ತಂಡಗಳು ತಮಗೆ ಬೇಕಾದ ಆಟಗಾರರನ್ನು ನೇರ ಒಪ್ಪಂದಗಳ ಮೂಲಕ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬಹುದು. ಈ ಟ್ರೇಡಿಂಗ್ ವಿಂಡೋ, ಹರಾಜು ಪ್ರಾರಂಭವಾಗುವ ಒಂದು ವಾರದ ಮೊದಲು ಮುಕ್ತಾಯಗೊಳ್ಳುತ್ತದೆ. ನಂತರ, ಆಕ್ಷನ್ ಮುಗಿದ ಒಂದು ವಾರದ ಬಳಿಕ ಮತ್ತೆ ತೆರೆಯಲಿದ್ದು, ಟೂರ್ನಮೆಂಟ್ ಪ್ರಾರಂಭವಾಗಲು ಒಂದು ತಿಂಗಳು ಬಾಕಿ ಇರುವವರೆಗೂ ಮುಂದುವರಿಯುತ್ತದೆ. ಇದಲ್ಲದೆ, ಪ್ರತಿ ಆವೃತ್ತಿಯಲ್ಲಿ ಆಟಗಾರರನ್ನು ಖರೀದಿಸಲು ಬಿಸಿಸಿಐ ನಿಗದಿಪಡಿಸಿದ ಒಟ್ಟು ಬಜೆಟ್ ಮಿತಿಯು ಕ್ರಮೇಣ ಹೆಚ್ಚಾಗುತ್ತಿದೆ. ಮುಂಬರುವ ಸೀಸನ್ಗಾಗಿ ಪ್ರತಿ ಫ್ರಾಂಚೈಸಿಗೆ ಲಭ್ಯವಿರುವ ವೇತನ ಮಿತಿಯನ್ನು ಇದೀಗ 157 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).