ಭಾರತದ ರೈಸಿಂಗ್​ ಸ್ಟಾರ್ಸ್​ಗೆ ಏಷ್ಯಾಕಪ್​ ಕಿರೀಟ

ಭಾರತದ ರೈಸಿಂಗ್​ ಸ್ಟಾರ್ಸ್​ಗೆ ಏಷ್ಯಾಕಪ್​ ಕಿರೀಟ
ಭಾರತದ ರೈಸಿಂಗ್​ ಸ್ಟಾರ್ಸ್​ಗೆ ಏಷ್ಯಾಕಪ್​ ಕಿರೀಟ
Published on
ಬ್ಯಾಂಕಾಕ್​: ತೇಜಲ್​ ಹಸಬ್ನಿಸ್​ (51*ರನ್​, 34 ಎಸೆತ, 3 ಬೌಂಡರಿ, 2 ಸಿಕ್ಸರ್​) ಅರ್ಧಶತಕದ ಆಸರೆ ಮತ್ತು ಸ್ಪಿನ್ನರ್​ಗಳ ಬಿಗಿ ಬೌಲಿಂಗ್​ ದಾಳಿಯ ಬಲದಿಂದ ಭಾರತ ಎ ತಂಡ ಮಹಿಳೆಯರ ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ (Asia Cup Rising Stars) ಟಿ20 ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟಕ್ಕೇರಿದೆ. ಬಾಂಗ್ಲಾದೇಶ ಎ ವಿರುದ್ಧ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ರಾಧಾ ಯಾದವ್ (Radha Yadav)​ ನೇತೃತ್ವದ ಭಾರತ ಎ ತಂಡ 46 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿದೆ. ಈ ಹಿಂದೆ ಎಮರ್ಜಿಂಗ್​ ಏಷ್ಯಾಕಪ್​ ಎಂಬ ಹೆಸರು ಹೊಂದಿದ್ದ ಈ ಟೂರ್ನಿಯಲ್ಲೂ ಭಾರತ ಪ್ರಶಸ್ತಿ ಜಯಿಸಿತ್ತು.
ಟೆರ್ಡ್​ಥಾಯಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆದ ಪ್ರಶಸ್ತಿ ಹೋರಾಟದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದ ಭಾರತ ತಂಡ, 44 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಪರದಾಡಿತು. ಆಗ ಜತೆಗೂಡಿದ ತೇಜಲ್​ ಮತ್ತು ನಾಯಕಿ ರಾಧಾ ಯಾದವ್​ (36) 5ನೇ ವಿಕೆಟ್​ಗೆ 69 ರನ್​ ಜತೆಯಾಟವಾಡುವ ಮೂಲಕ ಭಾರತಕ್ಕೆ ಆಸರೆಯಾದರು. ಅಂತಿಮವಾಗಿ ಭಾರತ 7 ವಿಕೆಟ್​ಗೆ 134 ರನ್​ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಪ್ರೇಮಾ ರಾವತ್​ (12ಕ್ಕೆ 3), ತನುಜಾ ಕನ್ವರ್​ (11ಕ್ಕೆ 2) ಮತ್ತು ಸೋನಿಯಾ ಮೆಂಧಿಯಾ (21ಕ್ಕೆ 2) ಸ್ಪಿನ್​ ದಾಳಿಗೆ ನಲುಗಿದ ಬಾಂಗ್ಲಾ 19.1 ಓವರ್​ಗಳಲ್ಲಿ 88 ರನ್​ಗಳಿಗೆ ಆಲೌಟ್​ ಆಗಿ ಶರಣಾಯಿತು. ಅಜೇಯವಾಗಿ ೈನಲ್​ಗೇರಿದ್ದ ಬಾಂಗ್ಲಾ, ಭಾರತೀಯರ ಸರ್ವಾಂಗೀಣ ಆಟದ ಎದುರು ಮಂಕಾಯಿತು. ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಆಘಾತಕಾರಿ ಸೋಲು ಕಂಡಿದ್ದ ಭಾರತ, ನಂತರ ಸತತ 4 ಜಯದೊಂದಿಗೆ ಪ್ರಶಸ್ತಿ ಒಲಿಸಿಕೊಂಡಿರುವುದು ವಿಶೇಷ.

2023ರಲ್ಲಿ ನಡೆದ ಎಮರ್ಜಿಂಗ್​ ಏಷ್ಯಾಕಪ್​ನಲ್ಲೂ ಭಾರತ ತಂಡ ಫೈನಲ್​ನಲ್ಲಿ ಬಾಂಗ್ಲಾದೇಶ ವಿರುದ್ಧವೇ ಗೆಲುವು ಸಾಧಿಸಿತ್ತು.

ಭಾರತ ಎ: 7 ವಿಕೆಟ್​ಗೆ 134 (ನಂದಿನಿ 8, ವೃಂದಾ ದಿನೇಶ್​ 19, ಅನುಷ್ಕಾ ಶರ್ಮ 8, ತೇಜಲ್​ 51*, ರಾಧಾ 36, ಪ್ರೇಮಾ 4, ಹಿಮಾ ಖತುನ್​ 25ಕ್ಕೆ 4, ರ್ಜಾನಾ 30ಕ್ಕೆ 1),
ಬಾಂಗ್ಲಾದೇಶ ಎ: 19.1 ಓವರ್​ಗಳಲ್ಲಿ 88 (ಶಮಿಮಾ ಸುಲ್ತಾನಾ 20, ಸರ್ಮಿನ್​ ಸುಲ್ತಾನಾ 18, ಸಾದಿಯಾ ಅಖ್ತೆರ್​ 10, ಹಿಮಾ ಖತುನ್​ 14, ಪ್ರೇಮಾ ರಾವತ್​ 12ಕ್ಕೆ 3, ತನುಜಾ ಕನ್ವರ್​ 11ಕ್ಕೆ 2, ಸೋನಿಯಾ 21ಕ್ಕೆ 2, ಮಿನ್ನು ಮಣಿ 17ಕ್ಕೆ 1, ರಾಧಾ 16ಕ್ಕೆ 1, ಸೈಮಾ 11ಕ್ಕೆ 1). ಪಂದ್ಯಶ್ರೇಷ್ಠ: ತೇಜಲ್​ ಹಸಬ್ನಿಸ್​.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net