ಕಿವೀಸ್ ನೆಲದಲ್ಲಿ ರಿಷಭ್ ಪಂತ್ ಐತಿಹಾಸಿಕ ಶತಕ: 45 ವರ್ಷಗಳ ಹಳೆಯ ದಾಖಲೆ ಮುರಿದ ಟೀಮ್ ಇಂಡಿಯಾ ಸ್ಟಾರ್! | Rishabh Pant

ಕಿವೀಸ್ ನೆಲದಲ್ಲಿ ರಿಷಭ್ ಪಂತ್ ಐತಿಹಾಸಿಕ ಶತಕ
ಕಿವೀಸ್ ನೆಲದಲ್ಲಿ ರಿಷಭ್ ಪಂತ್ ಐತಿಹಾಸಿಕ ಶತಕ
Published on: 

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅಮೋಘ ಶತಕ ಸಿಡಿಸಿ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಬೇಸಿನ್ ರಿಸರ್ವ್ ಮೈದಾನದಲ್ಲಿ ಕಿವೀಸ್ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ಪಂತ್, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ (SENA) ಈ ನಾಲ್ಕೂ ರಾಷ್ಟ್ರಗಳಲ್ಲಿ ಟೆಸ್ಟ್ ಶತಕ ಬಾರಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

135 ಎಸೆತಗಳಲ್ಲಿ ತಮ್ಮ ವೃತ್ತಿಜೀವನದ 9ನೇ ಟೆಸ್ಟ್ ಶತಕ ಪೂರೈಸಿದ ಪಂತ್, ನ್ಯೂಜಿಲೆಂಡ್ ವಿರುದ್ಧ ಹಾಗೂ ಕಿವೀಸ್ ನೆಲದಲ್ಲಿ ತಮ್ಮ ಚೊಚ್ಚಲ ಶತಕ ದಾಖಲಿಸಿದರು. ಸ್ಪಿನ್ನರ್ ಎಸೆತವನ್ನು ಮುನ್ನುಗ್ಗಿ ಬಂದು ಲಾಂಗ್-ಆಫ್ ಮೇಲಿಂದ ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ಪಂತ್ ಮೂರಂಕಿಯ ಗಡಿ ದಾಟಿದರು. 153 ಎಸೆತಗಳಲ್ಲಿ 12 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 128 ರನ್ ಗಳಿಸಿದ್ದ ಪಂತ್, ನಾಥನ್ ಸ್ಮಿತ್ ಹಿಡಿದ ಅದ್ಭುತ ಕ್ಯಾಚ್‌ಗೆ ತಮ್ಮ ವಿಕೆಟ್​ ಒಪ್ಪಿಸಿದರು. ಟೀಮ್​ ಇಂಡಿಯಾ ಮುನ್ನಡೆ ತಂದುಕೊಟ್ಟು ಪೆವಿಲಿಯನ್‌ಗೆ ಮರಳುವಾಗ ಇಡೀ ಕ್ರೀಡಾಂಗಣದಲ್ಲಿ ನೆರೆದಿದ್ದ ಪಂತ್​ ಎದ್ದುನಿಂತು ಚಪ್ಪಾಳೆ ತಟ್ಟಿ ಗೌರವ ಸೂಚಿಸಿತು.

45 ವರ್ಷಗಳ ಹಳೆಯ ದಾಖಲೆ ಧೂಳೀಪಟ!

ಈ ಶತಕದೊಂದಿಗೆ ಪಂತ್, ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡರು. 1981ರ ಮಾರ್ಚ್‌ನಲ್ಲಿ ಆಕ್ಲೆಂಡ್‌ನಲ್ಲಿ ಸೈಯದ್ ಕಿರ್ಮಾನಿ ಗಳಿಸಿದ್ದ ಅಜೇಯ 78 ರನ್‌ಗಳ 45 ವರ್ಷಗಳ ಹಳೆಯ ದಾಖಲೆಯನ್ನು ಪಂತ್ ಅಳಿಸಿಹಾಕಿದರು. ಅಲ್ಲದೆ, ವಿಶ್ವ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ ಮತ್ತು ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ನಂತರ ಸೇನಾ ರಾಷ್ಟ್ರಗಳಲ್ಲಿ ಶತಕ ಬಾರಿಸಿದ ವಿಶ್ವದ ಮೂರನೇ ವಿಕೆಟ್ ಕೀಪರ್ ಎಂಬ ಕೀರ್ತಿಗೂ ಪಂತ್ ಭಾಜನರಾಗಿದ್ದಾರೆ.

ಭಾರತದ ಪರ ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ನಂತರ ಈ ಸಾಧನೆ ಮಾಡಿದ ಆರನೇ ಬ್ಯಾಟರ್ ಪಂತ್ ಆಗಿದ್ದು, 29 ವರ್ಷದ ಪಂತ್ ತಮ್ಮ 9 ಟೆಸ್ಟ್ ಶತಕಗಳಲ್ಲಿ 7 ಶತಕಗಳನ್ನು ವಿದೇಶಿ ನೆಲದಲ್ಲೇ ಗಳಿಸಿರುವುದು ವಿಶೇಷ.

ಮೆಕ್ಕಲಂ ದಾಖಲೆ ಮುರಿದ ಪಂತ್!

ತಮ್ಮ ಸ್ಫೋಟಕ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ರಿಷಭ್ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಂ (107 ಸಿಕ್ಸರ್) ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ್ದಾರೆ. ಪಂತ್ ಖಾತೆಯಲ್ಲಿ ಈಗ 108 ಸಿಕ್ಸರ್‌ಗಳಿದ್ದು, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (138 ಸಿಕ್ಸರ್) ಅಗ್ರಸ್ಥಾನದಲ್ಲಿದ್ದಾರೆ.

ಇದರೊಂದಿಗೆ ಪಂತ್ 9 ಟೆಸ್ಟ್ ಶತಕಗಳ ಮೂಲಕ ವಿಕೆಟ್ ಕೀಪರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಲೆಸ್ ಏಮ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ (ಗಿಲ್‌ಕ್ರಿಸ್ಟ್-17, ಆಂಡಿ ಫ್ಲವರ್-12). ಜೊತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ 3,000 ರನ್ ಪೂರೈಸಿದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆಯನ್ನೂ ಪಂತ್ ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಧೂಳೀಪಟವಾದ ಹಳೆಯ ದಾಖಲೆಗಳು!

ನ್ಯೂಜಿಲೆಂಡ್ ವಿರುದ್ಧ ಗರಿಷ್ಠ ಮೊತ್ತ: ಭಾರತ ಗಳಿಸಿದ 720/9 ರನ್, ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಯಾವುದೇ ತಂಡ ಗಳಿಸಿದ ಗರಿಷ್ಠ ಮೊತ್ತವಾಗಿದೆ. 1995ರಲ್ಲಿ ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ಗಳಿಸಿದ್ದ 660/5 ಡಿಕ್ಲೇರ್ ದಾಖಲೆಯನ್ನು ಭಾರತ ಅಳಿಸಿಹಾಕಿತು.

ಕಿವೀಸ್ ನೆಲದಲ್ಲಿ ಅತಿ ದೊಡ್ಡ ಸ್ಕೋರ್: ನ್ಯೂಜಿಲೆಂಡ್ ನೆಲದಲ್ಲಿ ದಾಖಲಾದ ಗರಿಷ್ಠ ತಂಡದ ಮೊತ್ತ ಇದಾಗಿದೆ. 2019ರಲ್ಲಿ ಹ್ಯಾಮಿಲ್ಟನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್ ಗಳಿಸಿದ್ದ 715/6 ಡಿಕ್ಲೇರ್ ದಾಖಲೆ ಈಗ ಇತಿಹಾಸ ಸೇರಿದೆ.

ಭಾರತದ ಶ್ರೇಷ್ಠ ಸಾಧನೆ: ನ್ಯೂಜಿಲೆಂಡ್ ನೆಲದಲ್ಲಿ ಭಾರತದ ಹಿಂದಿನ ಗರಿಷ್ಠ ಮೊತ್ತ 520 ರನ್ (2009, ಹ್ಯಾಮಿಲ್ಟನ್) ಆಗಿತ್ತು. ಪಂದ್ಯದ 131ನೇ ಓವರ್‌ನಲ್ಲೇ ಭಾರತ ಈ ದಾಖಲೆಯನ್ನು ಮುರಿದು ಮುನ್ನಡೆಯಿತು. ಒಟ್ಟಾರೆಯಾಗಿ, ಟೀಮ್ ಇಂಡಿಯಾದ ಬ್ಯಾಟಿಂಗ್ ಪರಾಕ್ರಮಕ್ಕೆ ನ್ಯೂಜಿಲೆಂಡ್ ಬೌಲರ್‌ಗಳು ಸಂಪೂರ್ಣವಾಗಿ ಮಂಡಿಯೂರಿದ್ದಾರೆ(ಏಜೆನ್ಸೀಸ್​).