‘ಪರಸ್ಪರ ಒಪ್ಪಿಗೆಯಿಂದ ದೂರವಾಗುತ್ತಿದ್ದೇವೆ’: ನಿಶ್ಚಿತಾರ್ಥದ ಕೆಲವೇ ತಿಂಗಳಲ್ಲಿ ಪೃಥ್ವಿ ಶಾ-ಆಕೃತಿ ಅಗರ್ವಾಲ್ ಸಂಬಂಧಕ್ಕೆ ದಿಢೀರ್ ಅಂತ್ಯ! Prithvi Shaw and Aakriti Agarwal

ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಬ್ರೇಕಪ್ ಘೋಷಣೆ
ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಬ್ರೇಕಪ್ ಘೋಷಣೆ
Published on
ನವದೆಹಲಿ: ಕ್ರಿಕೆಟ್ ಲೋಕದಲ್ಲಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಯುವ ಕ್ರಿಕೆಟಿಗ ಪೃಥ್ವಿ ಶಾ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾರೆ. ತಮ್ಮ ನಿಶ್ಚಿತಾರ್ಥದ ಮೂಲಕ ಕೆಲವೇ ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದ ಜೋಡಿ ಈಗ ಅಧಿಕೃತವಾಗಿ ಬೇರ್ಪಟ್ಟಿದೆ.
ಪೃಥ್ವಿ ಶಾ (Prithvi Shaw and Aakriti Agarwal) ಅವರ ನಿಶ್ಚಿತಾರ್ಥದ ಸಂಗಾತಿ ಆಕೃತಿ ಅಗರ್ವಾಲ್ ತಾವು ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ದೂರಾಗುತ್ತಿರುವುದಾಗಿ ಸ್ವತಃ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಜೊತೆಯಾಗಿ ಜೀವನ ನಡೆಸುವ ಕನಸುಕಂಡಿದ್ದ ಈ ಜೋಡಿಯ ದಿಢೀರ್ ಬ್ರೇಕ್‌ಅಪ್‌ ನಿರ್ಧಾರ ಈಗ ಕ್ರಿಕೆಟ್ ಪ್ರಿಯರು ಹಾಗೂ ನೆಟ್ಟಿಗರ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಆಕೃತಿ!

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಬೇರ್ಪಡುವ ಸುದ್ದಿಯನ್ನು ಬಹಿರಂಗಪಡಿಸಿರುವ ಆಕೃತಿ ಅಗರ್ವಾಲ್, ತುಂಬಾ ಭಾರವಾದ ಹೃದಯದಿಂದ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಭವಿಷ್ಯದ ಗುರಿಗಳು ಹಾಗೂ ಜೀವನದ ಸಂದರ್ಭಗಳು ಸಂಪೂರ್ಣವಾಗಿ ಭಿನ್ನವಾಗಿವೆ ಎಂಬುದನ್ನು ಅರಿತ ಬಳಿಕ, ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ಬೇರ್ಪಡಲು ನಿರ್ಧರಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಪರಸ್ಪರರ ಮೇಲೆ ತಮಗಿರುವ ಪ್ರೀತಿ ಹಾಗೂ ಕಾಳಜಿ ಎಂದಿಗಿಂತಲೂ ಹಾಗೆಯೇ ಇರುತ್ತದೆ. ಆದರೆ, ನಮ್ಮಿಬ್ಬರ ಜೀವನದ ಹಾದಿಗಳು ಇನ್ನು ಮುಂದೆ ಒಂದಾಗಿ ಸಾಗಲು ಸಾಧ್ಯವಿಲ್ಲ ಎಂಬ ಕಠಿಣ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಾರ್ಚ್‌ನಲ್ಲಿ ನಿಶ್ಚಿತಾರ್ಥ, ಜುಲೈನಲ್ಲಿ ಸಂಶಯ, ಈಗ ಅಧಿಕೃತ ಅಂತ್ಯ!

ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಜೋಡಿಯ ಪ್ರೇಮಕಥೆ ಸಾರ್ವಜನಿಕವಾಗಿ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಮಾರ್ಚ್ ತಿಂಗಳಲ್ಲಿ ಈ ಜೋಡಿ ತಮ್ಮ ಅದ್ಧೂರಿ ನಿಶ್ಚಿತಾರ್ಥದ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತವಾಗಿ ಜಗತ್ತಿಗೆ ತಿಳಿಸಿದ್ದರು.
ನಿಶ್ಚಿತಾರ್ಥದ ನಂತರ ಆಕೃತಿ ಅಗರ್ವಾಲ್ ತಮ್ಮ ಸೋಷಿಯಲ್​ ಮೀಡಿಯಾನಲ್ಲಿ ಹಂಚಿಕೊಳ್ಳುತ್ತಿದ್ದ ಕೆಲವು ನಿಗೂಢ ಪೋಸ್ಟ್‌ಗಳು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದ್ದವು. ಅಂದಿನಿಂದಲೇ ಇವರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಗುಸುಗುಸು ಶುರುವಾಗಿತ್ತು. ಈಗ ಆಕೃತಿ ಅವರೇ ಖುದ್ದಾಗಿ ಬ್ರೇಕ್‌ಅಪ್‌ ಘೋಷಿಸುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಖಾಸಗಿತನಕ್ಕೆ ಗೌರವ ನೀಡುವಂತೆ ಮನವಿ

ಯಾವುದೇ ಬ್ರೇಕ್‌ಅಪ್‌ ಎಂದ ಮೇಲೆ ಗಾಸಿಪ್‌ಗಳು ಹಬ್ಬುವುದು ಸಹಜ. ಇದನ್ನು ಅರಿತಿರುವ ಆಕೃತಿ ಅಗರ್ವಾಲ್, ತಮ್ಮ ಈ ಕಠಿಣ ಸಮಯದಲ್ಲಿ ಜನರ ಬಳಿ ಒಂದು ವಿಶೇಷ ವಿನಂತಿ ಮಾಡಿಕೊಂಡಿದ್ದಾರೆ. ನಮ್ಮಿಬ್ಬರ ಬ್ರೇಕ್‌ಅಪ್‌ಗೆ ಸ್ಪಷ್ಟ ಕಾರಣಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ, ಸುಮ್ಮನೆ ಊಹೆಗಳನ್ನು ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಅಲ್ಲದೆ, ದಯವಿಟ್ಟು ನಮ್ಮ ಈ ವೈಯಕ್ತಿಕ ನಿರ್ಧಾರವನ್ನು ಗೌರವಿಸಿ ಹಾಗೂ ನಮ್ಮ ಖಾಸಗಿತನಕ್ಕೆ ಧಕ್ಕೆ ತರಬೇಡಿ ಎಂದು ಕೋರಿದ್ದಾರೆ. ಮುಂದುವರಿದು, ಮುಂದಿನ ದಿನಗಳಲ್ಲಿ ಪೃಥ್ವಿ ಶಾ ಮತ್ತು ತಮಗೂ ಒಳ್ಳೆಯದಾಗಲಿ, ಜೀವನದಲ್ಲಿ ಶಾಂತಿ ಹಾಗೂ ನೆಮ್ಮದಿ ಸಿಗಲಿ ಎಂದು ಹಾರೈಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net