ಪಾಕ್​ ಪುರುಷರು ಆಡದಿದ್ದರೇನಂತೆ, ಫೆಬ್ರವರಿ 15ಕ್ಕೆ ಪಾಕ್​ ಮಹಿಳೆಯರು ಭಾರತದ ವಿರುದ್ಧ ಆಡಲಿದ್ದಾರೆ!

ಪಾಕ್​ ಪುರುಷರು ಆಡದಿದ್ದರೇನಂತೆ, ಫೆಬ್ರವರಿ 15ಕ್ಕೆ ಪಾಕ್​ ಮಹಿಳೆಯರು ಭಾರತದ ವಿರುದ್ಧ ಆಡಲಿದ್ದಾರೆ!
ಪಾಕ್​ ಪುರುಷರು ಆಡದಿದ್ದರೇನಂತೆ, ಫೆಬ್ರವರಿ 15ಕ್ಕೆ ಪಾಕ್​ ಮಹಿಳೆಯರು ಭಾರತದ ವಿರುದ್ಧ ಆಡಲಿದ್ದಾರೆ!
Published on
ನವದೆಹಲಿ: ಪಾಕಿಸ್ತಾನ​ ಪುರುಷರ ತಂಡ ಭಾರತ ವಿರುದ್ಧದ ಟಿ20 ವಿಶ್ವಕಪ್​ (Men's T20 World Cup) ಪಂದ್ಯ ಬಹಿಷ್ಕರಿಸಿರುವ ನಡುವೆ ಪಾಕಿಸ್ತಾನ ಮಹಿಳಾ ತಂಡ (Pakistan Women's A team) ಅದೇ ದಿನ ಅಂದರೆ ಫೆಬ್ರವರಿ 15ಕ್ಕೆ ಬ್ಯಾಂಕಾಕ್​ನಲ್ಲಿ ನಿಗದಿಯಾಗಿರುವ ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ (Rising Stars Asia Cup) ಟೂರ್ನಿಯ ಪಂದ್ಯದಲ್ಲಿ ಭಾರತದ ವಿರುದ್ಧ ಆಡಲಿದೆ. ಮಹಿಳಾ ತಂಡಕ್ಕೆ ಇದುವರೆಗೆ ಸರ್ಕಾರ ಅಥವಾ ಪಿಸಿಬಿಯಿಂದ ಯಾವುದೇ ಸೂಚನೆ ಬಂದಿಲ್ಲ ಎನ್ನಲಾಗಿದೆ.
ಫೆಬ್ರವರಿ 13ರಿಂದ 22ರವರೆಗೆ ಥಾಯ್ಲೆಂಡ್​ನ ಬ್ಯಾಂಕಾಕ್​ನಲ್ಲಿ ನಡೆಯಲಿರುವ ಮಹಿಳೆಯರ ರೈಸಿಂಗ್​ ಸ್ಟಾರ್ಸ್​ ಏಷ್ಯಾಕಪ್​ ಟಿ20 ಟೂರ್ನಿಯಲ್ಲಿ ಭಾರತ ಎ ತಂಡ ಟೂರ್ನಿಯ ಮೊದಲ ದಿನ ಯುಎಇ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಫೆಬ್ರವರಿ 15ರಂದು ಭಾರತ ಮತ್ತು ಪಾಕಿಸ್ತಾನ ಎ ತಂಡಗಳು ಮುಖಾಮುಖಿ ಆಗಲಿವೆ. ಇದರೊಂದಿಗೆ ಫೆ. 15ಕ್ಕೆ ಭಾರತ-ಪಾಕ್​ ನಡುವೆ ಪಂದ್ಯವೊಂದು ನಡೆಯುವುದು ನಿಶ್ಚಿತವೆನಿಸಿದೆ. ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಭಾರತ, ಪಾಕಿಸ್ತಾನ ಎ ಜತೆಗೆ ಯುಎಇ, ನೇಪಾಳ ಎ ಗುಂಪಿನಲ್ಲಿವೆ. ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಮಲೇಷ್ಯಾ ಮತ್ತು ಆತಿಥೇಯ ಥಾಯ್ಲೆಂಡ್​ ತಂಡಗಳು ಬಿ ಗುಂಪಿನಲ್ಲಿವೆ. ಭಾರತ ತಂಡ ಫೆಬ್ರವರಿ 17ರಂದು ನೇಪಾಳ ವಿರುದ್ಧ ತನ್ನ 3ನೇ ಹಾಗೂ ಅಂತಿಮ ಲೀಗ್​ ಪಂದ್ಯ ಆಡಲಿದೆ. ಎರಡೂ ಗುಂಪಿನ ಅಗ್ರ 2 ತಂಡಗಳು ನಾಕೌಟ್​ ಹಂತಕ್ಕೇರಲಿದ್ದು, ಫೆಬ್ರವರಿ 20ರಂದು ಸೆಮಿಫೈನಲ್​ನಲ್ಲಿ ಸೆಣಸಲಿವೆ. ಫೆಬ್ರವರಿ 22ಕ್ಕೆ ಫೈನಲ್​ ನಿಗದಿಯಾಗಿದೆ.
ಶ್ರೀಲಂಕಾಕ್ಕೆ ತೆರಳಿದ ಪಾಕ್​ ತಂಡ
ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿರುವುದರಿಂದ ಐಸಿಸಿ ತೆಗೆದುಕೊಳ್ಳುವ ಕಠಿಣ ಕ್ರಮದ ಬಗ್ಗೆ ಇನ್ನೂ ಸ್ಪಷ್ಟತೆ ಸಿಗದಿರುವ ನಡುವೆ ಪಾಕಿಸ್ತಾನ ಕ್ರಿಕೆಟ್​ ತಂಡ ಟಿ20 ವಿಶ್ವಕಪ್​ಗಾಗಿ ಮಂಗಳವಾರ ಶ್ರೀಲಂಕಾಕ್ಕೆ ಪ್ರಯಾಣಿಸಿತು. ಹೊಸ ವಿಶ್ವಕಪ್​ ಕಿಟ್​ನೊಂದಿಗೆ ಪಾಕ್​ ತಂಡ ಲಾಹೋರ್​ನಲ್ಲಿ ಹೋಟೆಲ್​ನಿಂದ ಬಸ್​ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ವಿಡಿಯೋವನ್ನು ಪಿಸಿಬಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. "ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸುವುದು ನಮ್ಮ ನಿರ್ಧಾರವಲ್ಲ. ಸರ್ಕಾರ ಮತ್ತು ಪಿಸಿಬಿ ಹೇಳಿದಂತೆ ನಾವು ಕೇಳುತ್ತೇವೆ' ಎಂದು ಪಾಕ್​ ನಾಯಕ ಸಲ್ಮಾನ್​ ಅಘಾ ಹೇಳಿದ್ದಾರೆ. ಪಾಕ್​ ತಂಡ ಶನಿವಾರ ಕೊಲಂಬೊದಲ್ಲಿ ನೆದರ್ಲೆಂಡ್​ ವಿರುದ್ಧ ಆಡುವ ಮೂಲಕ ಟಿ20 ವಿಶ್ವಕಪ್​ ಅಭಿಯಾನ ಆರಂಭಿಸಬೇಕಾಗಿದೆ. ಅದಕ್ಕೆ ಮುನ್ನ ಬುಧವಾರ ಐರ್ಲೆಂಡ್​ ವಿರುದ್ಧ ಅಭ್ಯಾಸ ಪಂದ್ಯವೊಂದು ನಿಗದಿಯಾಗಿದೆ.
*ಕ್ರಿಕೆಟ್​ ಜಗತ್ತಿನ ಪ್ರತಿಕ್ರಿಯೆಗಳ ನಂತರ ಮುಂದಿನ 4&5 ದಿನಗಳಲ್ಲಿ ಪಾಕಿಸ್ತಾನದ ನಿಲುವು ಬದಲಾಗಬಹುದು. ಇದೇನು ಹೊಸದೆನಿಸದು. ಯಾಕೆಂದರೆ ಪಾಕಿಸ್ತಾನದ ಕ್ರಿಕೆಟಿಗರು ಇದೇ ರೀತಿ ನಿವೃತ್ತಿಯನ್ನು 4 ದಿನಗಳ ಬಳಿಕ ಹಿಂಪಡೆದ ದೃಷ್ಟಾಂತಗಳಿವೆ. ಇನ್ನಷ್ಟು ಸಮಯ ಆಡಲು ಅಭಿಮಾನಿಗಳು ಹೇಳಿದರು ಎಂಬ ಸಮಜಾಯಿಷಿಯನ್ನೂ ನೀಡಿದ್ದಿದೆ. ಇದೇ ರೀತಿ ಫೆ. 15ಕ್ಕೆ ಮುನ್ನ ಪಾಕಿಸ್ತಾನ, ಭಾರತ ವಿರುದ್ಧ ಆಡುವುದಾಗಿ ಹೇಳಬಹುದು.
| ಸುನೀಲ್​ ಗಾವಸ್ಕರ್​, ಮಾಜಿ ಕ್ರಿಕೆಟಿಗ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net