ನವದೆಹಲಿ: ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಹೊಸದಾಗಿ ಕ್ಷೇತ್ರ ಪುನರ್ವಿಂಗಡಣೆ (Delimitation Bill) ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ ಎಂಬ ಊಹಾಪೋಹಗಳು ಜೋರಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಅವರು ಶುಕ್ರವಾರ ಇಂಡಿಯಾ ಒಕ್ಕೂಟದ ನಾಲ್ಕು ಪ್ರಮುಖ ಬೇಡಿಕೆಗಳನ್ನು ಪುನರುಚ್ಚರಿಸಿದ್ದಾರೆ.
ಅದರಲ್ಲಿ ಲೋಕಸಭೆಯ ಹಾಲಿ ಸದಸ್ಯ ಬಲ ಮತ್ತು ರಾಜ್ಯವಾರು ಸ್ಥಾನಗಳ ಹಂಚಿಕೆಯನ್ನು ಮುಂದಿನ 25 ವರ್ಷಗಳವರೆಗೆ ಯಥಾಸ್ಥಿತಿಯಲ್ಲಿಯೇ ಮುಂದುವರಿಸಬೇಕು ಹಾಗೂ ಪ್ರಸ್ತುತ ವ್ಯವಸ್ಥೆಯೊಳಗೆಯೇ ಮಹಿಳಾ ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ ರಮೇಶ್, ಈ ಹಿಂದೆ ಸರ್ಕಾರವು ಸಾಂವಿಧಾನಿಕ ತಿದ್ದುಪಡಿ ತರಲು ಮುಂದಾದಾಗ ವಿರೋಧ ಪಕ್ಷಗಳು ಒಗ್ಗಟ್ಟಾಗಿ ತಡೆದಿದ್ದನ್ನು ನೆನಪಿಸಿದರು. ಪ್ರಸ್ತುತ ಈ ವಿಷಯದಲ್ಲಿ ಇಡೀ ವಿರೋಧ ಪಕ್ಷಗಳ ಮೈತ್ರಿಕೂಟ ಸಂಪೂರ್ಣ ಒಗ್ಗಟ್ಟಿನಿಂದಿದೆ ಎಂದು ಒತ್ತಿಹೇಳಿದ ಅವರು, ಡಿಎಂಕೆ ಮತ್ತು ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಈ ತತ್ವಗಳಿಗೆ ಸಂಪೂರ್ಣ ಬೆಂಬಲ ನೀಡಿವೆ ಎಂದರು. ಅಲ್ಲದೆ, ಎನ್ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ಇಂಡಿಯಾ ಒಕ್ಕೂಟದ ನಿಲುವಿಗೆ ನೂರಕ್ಕೆ ನೂರರಷ್ಟು ಸಹಮತ ಹೊಂದಿದ್ದಾರೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಸರ್ಕಾರದ ಮುಂದೆ ವಿರೋಧ ಪಕ್ಷಗಳ ಮೈತ್ರಿಕೂಟ ನಿರಂತರವಾಗಿ ಇಡುತ್ತಿರುವ ನಾಲ್ಕು ಪ್ರಮುಖ ಬೇಡಿಕೆಗಳನ್ನು ರಮೇಶ್ ಮತ್ತೊಮ್ಮೆ ವಿವರಿಸಿದ್ದಾರೆ. ಮೊದಲನೆಯದಾಗಿ, ಲೋಕಸಭೆಯ ಪ್ರಸ್ತುತ 543 ಸ್ಥಾನಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಎರಡನೆಯದಾಗಿ, ಕೆಳಮನೆಯಲ್ಲಿ ರಾಜ್ಯವಾರು ಸ್ಥಾನಗಳ ಹಂಚಿಕೆಯನ್ನು ಬದಲಾಯಿಸದೆ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಬೇಕು. ಮೂರನೆಯದಾಗಿ, ಹೊಸ ಕ್ಷೇತ್ರ ಪುನರ್ವಿಂಗಡಣೆಗಾಗಿ ಕಾಯದೆ, ಹಾಲಿ ಇರುವ ಸ್ಥಾನಗಳ ರಚನೆಯೊಳಗೆಯೇ ಮಹಿಳಾ ಮೀಸಲಾತಿ ಕಾಯ್ದೆಯನ್ನು ತಕ್ಷಣವೇ ಜಾರಿಗೊಳಿಸಬೇಕು. ನಾಲ್ಕನೆಯದಾಗಿ, ಈ ಪ್ರಸ್ತುತ ವ್ಯವಸ್ಥೆಯನ್ನು ಮುಂದಿನ 25 ವರ್ಷಗಳ ಕಾಲ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬುದು ವಿಪಕ್ಷಗಳ ಸ್ಪಷ್ಟ ಆಗ್ರಹವಾಗಿದೆ.
ಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲದ ಅಧಿವೇಶನ ಶುರುವಾಗುವ ನಿರೀಕ್ಷೆಯಿದ್ದು, ಕ್ಷೇತ್ರ ಪುನರ್ವಿಂಗಡಣೆ ಕುರಿತು ಕೇಂದ್ರದ ಕಾರ್ಯಸೂಚಿಯ ಬಗ್ಗೆ ಚರ್ಚೆಗಳು ಜೋರಾಗಿವೆ. ಈ ನಡುವೆ, ಕೇಂದ್ರ ಸರ್ಕಾರವು ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂದು ರಮೇಶ್ ತೀವ್ರ ಟೀಕೆ ಮಾಡಿದ್ದಾರೆ. ಸರ್ಕಾರವು ಈ ವಿಷಯದ ಕುರಿತು ಕಾಂಗ್ರೆಸ್ ಪಕ್ಷವನ್ನು ಇದುವರೆಗೂ ಸಂಪರ್ಕಿಸಿಲ್ಲ ಎಂದು ಆರೋಪಿಸಿದ ಅವರು, ಆಡಳಿತಾರೂಢ ಎನ್ಡಿಎ ಮೈತ್ರಿಕೂಟದ ಹಲವು ಮಿತ್ರಪಕ್ಷಗಳಿಗೂ ಸರ್ಕಾರದ ಪ್ರಸ್ತಾವನೆಯ ನಿಖರ ವಿವರಗಳು ತಿಳಿದಿಲ್ಲ ಎಂದು ಆರೋಪಿಸಿದ್ದಾರೆ. ಆದ್ದರಿಂದ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮುಂದೆ ಬಂದು ಸರ್ಕಾರದ ನಿಖರ ಯೋಜನೆ ಏನೆಂಬುದನ್ನು ದೇಶದ ಮುಂದೆ ಸ್ಪಷ್ಟಪಡಿಸಬೇಕು ಎಂದು ಮಾಜಿ ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆಯ ಸಾಂವಿಧಾನಿಕ ಮತ್ತು ಒಕ್ಕೂಟ ವ್ಯವಸ್ಥೆಯ ಪರಿಣಾಮಗಳ ಬಗ್ಗೆ ಗಮನ ಸೆಳೆದ ಜೈರಾಮ್ ರಮೇಶ್, ಸಂವಿಧಾನದ 82ನೇ ವಿಧಿಯ ಪ್ರಕಾರ 2026ರ ನಂತರ ನಡೆಯುವ ಮೊದಲ ಜನಗಣತಿಯ ಫಲಿತಾಂಶ ಪ್ರಕಟವಾದ ಬಳಿಕವಷ್ಟೇ ಪುನರ್ವಿಂಗಡಣೆ ಪ್ರಕ್ರಿಯೆ ಆರಂಭವಾಗುತ್ತದೆ ಎಂದರು. ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡುವುದರಿಂದ, ಜನಸಂಖ್ಯಾ ಬೆಳವಣಿಗೆಯನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ರಾಜ್ಯಗಳಿಗೆ (ವಿಶೇಷವಾಗಿ ದಕ್ಷಿಣದ ರಾಜ್ಯಗಳಿಗೆ) ಅನ್ಯಾಯವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಂಬರುವ 2027ರ ಜನಗಣತಿಯನ್ನು ಕ್ಷೇತ್ರ ಪುನರ್ವಿಂಗಡಣೆಗೆ ಆಧಾರವಾಗಿ ಬಳಸುವುದನ್ನು ವಿರೋಧ ಪಕ್ಷಗಳು ಬಲವಾಗಿ ವಿರೋಧಿಸುತ್ತವೆ ಎಂದು ಸ್ಪಷ್ಟಪಡಿಸಿರುವ ಅವರು, ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಈ ಮಸೂದೆಯನ್ನು ಮಂಡಿಸಿದರೆ ಸಂಸತ್ತಿನ ಒಳಗೂ ಹೊರಗೂ ಒಗ್ಗಟ್ಟಿನ ಹೋರಾಟ ನಡೆಸುವ ಸಂದೇಶವನ್ನು ರವಾನಿಸಿದ್ದಾರೆ(ಏಜೆನ್ಸೀಸ್).