

ದೋಹಾ: ನಾಯಕ ತಿಲಕ್ ವರ್ಮ (107 ರನ್, 113 ಎಸೆತ, 6 ಬೌಂಡರಿ, 4 ಸಿಕ್ಸರ್) ಮತ್ತು ವಿಕೆಟ್ ಕೀಪರ್-ಬ್ಯಾಟರ್ ಕುಮಾರ್ ಕುಶಾಗ್ರ (117 ರನ್, 102 ಎಸೆತ, 10 ಬೌಂಡರಿ, 5 ಸಿಕ್ಸರ್) ಶತಕ ಹಾಗೂ ವೇಗಿಗಳಾದ ಪ್ರಿನ್ಸ್ ಯಾದವ್ (6ಕ್ಕೆ 5) ಮತ್ತು ಹರ್ಷಿತ್ ರಾಣಾ (16ಕ್ಕೆ 4) ಮಾರಕ ದಾಳಿಯ ನೆರವಿನಿಂದ ಭಾರತ ಎ ತಂಡ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಏಕದಿನ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ನೇಪಾಳ ಎದುರು 306 ರನ್ಗಳ ಬೃಹತ್ ಗೆಲುವು ದಾಖಲಿಸಿದೆ.
ವೆಸ್ಟ್ ಎಂಡ್ ಪಾರ್ಕ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಎ ತಂಡ, 42 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಎಡಗೈ ಆರಂಭಿಕರಾದ ಅಭಿಷೇಕ್ ಶರ್ಮ (9), ವೈಭವ್ ಸೂರ್ಯವಂಶಿ (26) ಮತ್ತು ಆಯುಷ್ ಬಡೋನಿ (2) ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಗ ಜತೆಗೂಡಿದ ತಿಲಕ್&ಕುಶಾಗ್ರ ಜೋಡಿ 4ನೇ ವಿಕೆಟ್ಗೆ 206 ರನ್ ಜತೆಯಾಟವಾಡಿ ಆಸರೆಯಾಯಿತು. ಇದರಿಂದ ಭಾರತ ಅಂತಿಮವಾಗಿ 9 ವಿಕೆಟ್ಗೆ 332 ರನ್ ಕಲೆಹಾಕಿತು. ಸ್ಲಾಗ್ ಓವರ್ಗಳಲ್ಲಿ ಉಪನಾಯಕ ರಿಂಕು ಸಿಂಗ್ (9), ಶಾಬಾಜ್ ಅಹ್ಮದ್ (8), ವಿಪ್ರಜ್ ನಿಗಮ್ (0), ಹರ್ಷಿತ್ ರಾಣಾ (1) ನಿರಾಸೆ ಮೂಡಿಸಿದರೆ, ಆಲ್ರೌಂಡರ್ ಸೂರ್ಯಾಂಶ್ ಶೆಡ್ಗೆ (36* ರನ್, 14 ಎಸೆತ, 1 ಬೌಂಡರಿ, 4 ಸಿಕ್ಸರ್) ಮೊತ್ತವನ್ನು 330ರ ಗಡಿ ದಾಟಿಸಲು ನೆರವಾದರು. ಪ್ರತಿಯಾಗಿ ನೇಪಾಳ 11.3 ಓವರ್ಗಳಲ್ಲೇ ಕೇವಲ 26 ರನ್ಗಳಿಗೆ ಆಲೌಟ್ ಆಯಿತು.
ಭಾರತ ಎ: 9 ವಿಕೆಟ್ಗೆ 332 (ವೈಭವ್ ಸೂರ್ಯವಂಶಿ 26, ಅಭಿಷೇಕ್ ಶರ್ಮ 9, ಆಯುಷ್ ಬಡೋನಿ 2, ತಿಲಕ್ ವರ್ಮ 107, ಕುಮಾರ್ ಕುಶಾಗ್ರ 117, ರಿಂಕು ಸಿಂಗ್ 9, ಸೂರ್ಯಾಂಶ್ ಶೆಡ್ಗೆ 36*, ಶಾಬಾಜ್ ಅಹ್ಮದ್ 8, ವಿಪ್ರಜ್ ನಿಗಮ್ 0, ಹರ್ಷಿತ್ ರಾಣಾ 1, ಪ್ರಿನ್ಸ್ ಯಾದವ್ 1*, ಸಂದೀಪ್ ಲಮಿಚೇನ್ 61ಕ್ಕೆ 3, ಲಲಿತ್ ರಾಜಬಂಶಿ 61ಕ್ಕೆ 3, ನಂದನ್ ಯಾದವ್ 49ಕ್ಕೆ 2). ನೇಪಾಳ: 11.3 ಓವರ್ಗಳಲ್ಲಿ 26 (ಪವನ್ 6, ರಶೀದ್ 6, ಪ್ರಿನ್ಸ್ 6ಕ್ಕೆ 5, ಹರ್ಷಿತ್ 16ಕ್ಕೆ 4).
ಭಾರತ ಎ ಮುಂದಿನ ಪಂದ್ಯ
ಯಾವಾಗ: ಭಾನುವಾರ
ಎದುರಾಳಿ: ಪಾಕಿಸ್ತಾನ ಎ
ಆರಂಭ: ಮಧ್ಯಾಹ್ನ 3.30