ಚಾಹಲ್ ಬೆನ್ನಲ್ಲೇ ಕೇಸರಿ ಪಾಳಯದತ್ತ ಶಮಿ ಹೆಜ್ಜೆ? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಭೇಟಿ ಬೆನ್ನಲ್ಲೇ ಶುರುವಾಯ್ತು ಹೊಸ ಚರ್ಚೆ! | Mohammed Shami

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದ ಮೊಹಮ್ಮದ್ ಶಮಿ!
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದ ಮೊಹಮ್ಮದ್ ಶಮಿ!
Published on: 

ನವದೆಹಲಿ: ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ತಮ್ಮ ರಾಜಕೀಯ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆಯೇ ಎಂಬ ಚರ್ಚೆಗಳು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿವೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​ ಅವರನ್ನು ಶಮಿ ಭಾನುವಾರ ಭೇಟಿಯಾದ ಬೆನ್ನಲ್ಲೇ, ಅವರು ಕೇಸರಿ ಪಾಳಯ ಸೇರಲಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗಿವೆ.

ನವದೆಹಲಿಯಲ್ಲಿ ನಡೆದ ಈ ಮಹತ್ವದ ಭೇಟಿಯ ಸಂದರ್ಭದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಕುನ್ವರ್ ಬಾಸಿತ್ ಅಲಿ ಕೂಡ ಉಪಸ್ಥಿತರಿದ್ದರು. ಆದರೆ, ಶಮಿ ಅವರ ಪಕ್ಷ ಸೇರ್ಪಡೆಯ ಕುರಿತು ಬಿಜೆಪಿ ಕಡೆಯಿಂದ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಮ್ರೋಹಾ ಮೂಲದ ಶಮಿ ಅವರ ಈ ಭೇಟಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

Also Read
ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ವಿದಾಯ!: ಸೀಮಿತ ಓವರ್‌ಗಳ ಕ್ರಿಕೆಟ್ ಕುರಿತು ಮಹತ್ವದ ಹೇಳಿಕೆ | Mohammad Shami Retirement
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾದ ಮೊಹಮ್ಮದ್ ಶಮಿ!

ಚಾಹಲ್ ಬಿಜೆಪಿ ಸೇರ್ಪಡೆ!

ಮತ್ತೊಬ್ಬ ಟೀಮ್​ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದ ಸರಿಯಾಗಿ ಒಂದು ವಾರದ ಬಳಿಕ ಮೊಹಮ್ಮದ್ ಶಮಿ ಅವರ ಈ ಭೇಟಿ ನಡೆದಿದೆ. ಕಳೆದ ವಾರ ಚಾಹಲ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದ ಬಿಜೆಪಿ, ಅವರನ್ನು ಪಕ್ಷದ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರನ್ನಾಗಿ ನೇಮಕ ಮಾಡಿತ್ತು.

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿದ್ದ ಚಾಹಾಲ್​, ಪಕ್ಷದ ಜವಾಬ್ದಾರಿ ನೀಡಿದ್ದಕ್ಕಾಗಿ ಬಿಜೆಪಿ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿದ್ದರು. ಬಿಜೆಪಿ ಕುಟುಂಬದಲ್ಲಿ ನನಗೆ ಸ್ಥಾನ ಮತ್ತು ಗೌರವ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್​ ಮತ್ತು ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಅಮರ್‌ಪಾಲ್ ಮೌರ್ಯ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಚಾಹಲ್ ಬರೆದುಕೊಂಡಿದ್ದರು. 2016ರಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಚಾಹಲ್, ಇತ್ತೀಚೆಗೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಏಕದಿನ ಮತ್ತು ಟಿ20 ಮಾದರಿಗಳಲ್ಲಿ ಆಟ ಮುಂದುವರಿಸಿದ್ದಾರೆ.

ಟೆಸ್ಟ್​​ ಕ್ರಿಕೆಟ್​ಗೆ ಶಮಿ ವಿದಾಯ!

ಮೊಹಮ್ಮದ್ ಶಮಿ ಇದೇ ನವೆಂಬರ್ 6ರಂದು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶಮಿ, ಒಟ್ಟು 64 ಟೆಸ್ಟ್ ಪಂದ್ಯಗಳನ್ನು ಆಡಿ 229 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ ಆರು ಬಾರಿ ಇನ್ನಿಂಗ್ಸ್‌ವೊಂದರಲ್ಲಿ ಐದು ವಿಕೆಟ್ ಪಡೆದ ಸಾಧನೆಯೂ ಸೇರಿದೆ. ಹೊಸ ಮತ್ತು ಹಳೆಯ ಚೆಂಡಿನಲ್ಲಿ ಸ್ವಿಂಗ್ ಮಾಡುವ ಅವರ ಸಾಮರ್ಥ್ಯವು ವಿದೇಶಿ ನೆಲದಲ್ಲಿ ಭಾರತದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಶಕ್ತಿಯಾಗಿತ್ತು. ವಿದೇಶದಲ್ಲಿ ಆಡಿದ 41 ಟೆಸ್ಟ್ ಪಂದ್ಯಗಳಲ್ಲಿ 30.33ರ ಸರಾಸರಿಯಲ್ಲಿ 145 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡದ ಭರವಸೆಯ ಬೌಲರ್ ಆಗಿ ಗುರುತಿಸಿಕೊಂಡಿದ್ದರು.

2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶಮಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ವೃತ್ತಿಜೀವನದ ವಿವಿಧ ಹಂತಗಳಲ್ಲಿ ಗಾಯದ ಸಮಸ್ಯೆಗಳು ಕಾಡಿದರೂ, ಅವಕಾಶ ಸಿಕ್ಕಾಗಲೆಲ್ಲಾ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಸದ್ಯ ರೆಡ್-ಬಾಲ್ ಕ್ರಿಕೆಟ್‌ಗೆ ವಿದಾಯ ಹೇಳಿರುವ ಶಮಿ, ಏಕದಿನ ಮತ್ತು ಟಿ20 ಹಾಗೂ ಐಪಿಎಲ್‌ನಲ್ಲಿ ಆಡಲು ಲಭ್ಯವಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದೀಗ ಟೆಸ್ಟ್ ನಿವೃತ್ತಿಯ ಬೆನ್ನಲ್ಲೇ ಬಿಜೆಪಿ ವರಿಷ್ಠರ ಭೇಟಿಯು ಶಮಿ ಅವರ ಮುಂದಿನ ನಡೆ ರಾಜಕೀಯದತ್ತವೇ ಎಂಬ ಕುತೂಹಲ ಮೂಡಿಸಿದೆ(ಏಜೆನ್ಸೀಸ್​).