ಮಸ್ಸೂರಿ: ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ (Kuldeep Yadav) ತನ್ನ ಬಾಲ್ಯದ ಗೆಳತಿ ವಂಶಿಕಾ ಚಾಧಾರನ್ನು ಶನಿವಾರ (ಮಾ.14) ವಿವಾಹವಾಗಲಿದ್ದು ಇಂದು (ಮಾ.13) ರಂದು ಹಳದಿ ಶಾಸ್ತ್ರವು ಬಹಳ ಅದ್ಧೂರಿಯಾಗಿ ನಡೆಯಿತು.
ಇಂದು ಡೆಹರಾಡೂನಿನ ಮಸ್ಸೂರಿಯಲ್ಲಿ ನಡೆದ ಕ್ರಿಕೆಟಿಗನ ಹಳದಿ ಶಾಸ್ತ್ರಕ್ಕೆ ಕುಟುಂಬ ವರ್ಗದವರ ಜೊತೆಗೆ ಸ್ನೇಹಿತರ ದಂಡೆಬಂದಿದ್ದು, ಎಲ್ಲರೂ ಈ ಕ್ಷಣವನ್ನು ಆನಂದಿಸುವುದರಲ್ಲಿ ಯಶಸ್ವಿಯಾದರು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ಕುಲ್ದೀಪ್ ತಿಳಿ ಗುಲಾಬಿ ಬಣ್ಣದ ಶೆರ್ವಾನಿ ಧರಿಸಿದ್ದರೆ, ವಂಶಿಕಾ ಗಾಢ ಗುಲಾಬಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಎಲ್ಲರ ಗಮನ ಸೆಳೆದ ಚಹಲ್!
ಗೆಳೆಯನ ಮದುವೆ ಮತ್ತು ಹಳದಿ ಶಾಸ್ತ್ರದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದ ಯಜುವೆಂದರ್ ಚಹಲ್, ಕೆಂಪು ಬಣ್ಣದ ಶೆರ್ವಾನಿ ಧರಿಸಿ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಿ ನೆರೆದಿದ್ದ ಜನರನ್ನು ರಂಜಿಸುವಲ್ಲಿ ಸಫಲರಾಗಿದ್ದಾರೆ.
ಕುಲ್ದೀಪ್ ಹಾಗೂ ಚಹಲ್ ತಮ್ಮ ಪ್ರಾರಂಭಿಕ ಕ್ರಿಕೆಟ್ ದಿನಗಳಿಂದ ಸ್ನೇಹಿತರಾಗಿದ್ದು, ಗೆಳೆಯನಿದ್ದರೆ ಹೀಗೆ ಇರಬೇಕು ಎಂದು ಜನ ಹೇಳುವಂತೆ ಚಹಲ್, ಕುಲ್ದೀಪ್ ಮದುವೆ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಕುಲದೀಪ್ ಭಾರತೀಯ ತಂಡದ ಪ್ರಮುಖ ಸದಸ್ಯರಾಗಿದ್ದಾರೆ, ಚಾಹಲ್ ತಂಡಕ್ಕೆ ಮರಳಲು ಶ್ರಮಿಸುತ್ತಿದ್ದಾರೆ.
ರುಚಿಕರ ದುಬಾರಿ ಊಟ
ಈ ವಿವಾಹದ ಮತ್ತೊಂದು ಹೈಲೈಟ್ ಅಂದ್ರೆ ಅದು ಅಲ್ಲಿನ ಭೋಜನ ವ್ಯವಸ್ಥೆ. ಅತಿಥಿಗಳಿಗೆ ಉತ್ತರಾಖಂಡದ ಅಧಿಕೃತ ಶೈಲಿಯ ಪಹಾರಿ ಊಟವನ್ನು ಬಡಿಸಲಾಗುತ್ತಿದೆ. ಪ್ರತಿ ಪ್ಲೇಟ್‌ಗೆ 6,000 ಕ್ಕಿಂತ ಹೆಚ್ಚು ಮೌಲ್ಯದ ಈ ಮೆನುವಿನಲ್ಲಿ ಮಧುವಾ ರೊಟ್ಟಿ, ಗಹತ್ ದಾಲ್, ಚಾನ್ಸು ಮತ್ತು ಭಾಂಗ್ ಚಟ್ನಿಯಂತಹ ಸ್ಥಳೀಯ ಖಾದ್ಯಗಳು ಇರಲಿವೆ. ಮರುದಿನ ಜಂಗೋರಾ ಖೀರ್‌ನ ಸಿಹಿ ಸವಿಯೊಂದಿಗೆ ಅತಿಥಿಗಳು ಈ ವಿವಾಹದ ನೆನಪನ್ನು ಹೊತ್ತೊಯ್ಯಲಿದ್ದಾರೆ.
ವಿವಿಐಪಿ ಅತಿಥಿಗಳಿಗಾಗಿ ಸುಮಾರು 80 ಕೊಠಡಿಗಳನ್ನು ಸವೊಯ್ ಹೋಟೆಲ್‌ನಲ್ಲಿ ಕಾಯ್ದಿರಿಸಲಾಗಿದೆ. ಅಷ್ಟೇ ಅಲ್ಲದೆ, ಜೆಡಬ್ಲ್ಯೂ ಮ್ಯಾರಿಯಟ್ ಮತ್ತು ಫಾರ್ಚೂನ್ ಹೋಟೆಲ್‌ನಲ್ಲಿಯೂ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ಡೆಹ್ರಾಡೂನ್ ವಿಮಾನ ನಿಲ್ದಾಣದಿಂದ ಅತಿಥಿಗಳನ್ನು ಕರೆತರಲು ಐಷಾರಾಮಿ ಶಟಲ್‌ಗಳನ್ನು ನಿಯೋಜಿಸಲಾಗಿದೆ.
ಒಟ್ಟಾರೆಯಾಗಿ, ಈ ಮದುವೆ ಕೇವಲ ಕ್ರಿಕೆಟಿಗನ ಮದುವೆಯಲ್ಲ, ಅದೊಂದು ರಾಜವೈಭವದ ಸಮ್ಮೇಳನ ಎಂದರೆ ತಪ್ಪಾಗದು. ಮದುವೆಯ ಬಳಿಕ ಆಚರಣೆಗಳು ಕುಲ್ದೀಪ್ ಅವರ ತವರೂರು ಲಕ್ನೋಗೆ ಸ್ಥಳಾಂತರಗೊಳ್ಳಲಿದ್ದು, ಮಾರ್ಚ್ 17 ರಂದು ಹೋಟೆಲ್ ಸೆಂಟ್ರಮ್‌ನಲ್ಲಿ ಭವ್ಯ ಸ್ವಾಗತ ಸಮಾರಂಭ ನಡೆಯಲಿದೆ,(ಏಜನ್ಸೀಸ್).