15 ವರ್ಷದ ಬಾಲಕನನ್ನು ಏಕದಿನ ಕ್ರಿಕೆಟ್‌ನ ರಕ್ಷಕ ಎನ್ನುವುದು ತಪ್ಪು: ವೈಭವ್ ಸೂರ್ಯವಂಶಿ ಬಗ್ಗೆ ಸಿಎಸ್​ಕೆ ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ! | Vaibhav Sooryavanshi

15 ವರ್ಷದ ಬಾಲಕನನ್ನು ಏಕದಿನ ಕ್ರಿಕೆಟ್‌ನ ರಕ್ಷಕ ಎನ್ನುವುದು ತಪ್ಪು: ಕಿವೀಸ್ ಕೋಚ್ ಜೇಕಬ್ ಓರಮ್
15 ವರ್ಷದ ಬಾಲಕನನ್ನು ಏಕದಿನ ಕ್ರಿಕೆಟ್‌ನ ರಕ್ಷಕ ಎನ್ನುವುದು ತಪ್ಪು: ಕಿವೀಸ್ ಕೋಚ್ ಜೇಕಬ್ ಓರಮ್
Published on: 

ಕ್ರೈಸ್ಟ್‌ಚರ್ಚ್: ಟೀಮ್​ ಇಂಡಿಯಾದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಕುರಿತು ನ್ಯೂಜಿಲೆಂಡ್ ಬೌಲಿಂಗ್ ಕೋಚ್ ಜೇಕಬ್ ಓರಮ್ (Jacob Oram) ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಮಂಗಳವಾರ ನಡೆದ ಲಿಸ್ಟ್ ಎ ಪಂದ್ಯದಲ್ಲಿ ವೈಭವ್ ಕೇವಲ 53 ಎಸೆತಗಳಲ್ಲಿ ಅಜೇಯ 204 ರನ್ ಚಚ್ಚುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಏಕದಿನ ಕ್ರಿಕೆಟ್‌ನ ಭವಿಷ್ಯದ ರಕ್ಷಕ ಎಂದು ಬಣ್ಣಿಸಲಾಗುತ್ತಿದೆ. ಆದರೆ, 15 ವರ್ಷದ ಬಾಲಕನ ಮೇಲೆ ಇಷ್ಟು ಬೇಗ ಇಂತಹ ದೊಡ್ಡ ನಿರೀಕ್ಷೆಗಳ ಭಾರ ಹೊರಿಸುವುದು ಸರಿಯಲ್ಲ ಎಂದು ಓರಮ್ ಅಭಿಪ್ರಾಯಪಟ್ಟಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಓರಮ್, ವೈಭವ್ ಅವರ ಆಟವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. 15 ವರ್ಷದ ಹುಡುಗನನ್ನು ಈಗಲೇ ಏಕದಿನ ಕ್ರಿಕೆಟ್‌ನ ರಕ್ಷಕ ಎಂದು ಕರೆಯುವುದು ಕೊಂಚ ಆತುರದ ನಿರ್ಧಾರವಾಗುತ್ತದೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡೋಣ. ಜನರಿಗೆ ಟಿ20 ಕ್ರಿಕೆಟ್ ಇಷ್ಟವಾಗುತ್ತದೆ ಮತ್ತು ಸಾಂಪ್ರದಾಯಿಕ ಕ್ರಿಕೆಟ್ ಪ್ರಿಯರು ಟೆಸ್ಟ್ ಪಂದ್ಯಗಳನ್ನು ಇಷ್ಟಪಡುತ್ತಾರೆ ಎಂಬುದು ನನಗೆ ತಿಳಿದಿದೆ. ಆದರೂ, 50 ಓವರ್‌ಗಳ ಕ್ರಿಕೆಟ್‌ಗೆ ಇಂದಿಗೂ ತನ್ನದೇ ಆದ ಮಹತ್ವವಿದೆ ಎಂಬುದು ನನ್ನ ನಂಬಿಕೆ ಎಂದು ಅವರು ತಿಳಿಸಿದ್ದಾರೆ.

ವೈಭವ್ ಸೂರ್ಯವಂಶಿ ಅವರಂತಹ ಆಟಗಾರರು ಕ್ರಿಕೆಟ್‌ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸುತ್ತಾರೆ ಎಂದು ಓರಮ್ ಒಪ್ಪಿಕೊಂಡಿದ್ದು, ಇದೇ ವೇಳೆ ಹಾಸ್ಯಮಯವಾಗಿ, ವೈಭವ್ ತುಂಬಾ ರೋಮಾಂಚಕಾರಿ ಮತ್ತು ಮನರಂಜನಾತ್ಮಕ ಆಟಗಾರ. ಇಂತಹ ಆಟಗಾರರು ಕ್ರಿಕೆಟ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಷ್ಟೂ ಆಟಕ್ಕೆ ಒಳ್ಳೆಯದು. ಆದರೆ, ನಾವು ಅವರ ವಿರುದ್ಧ ಬೌಲಿಂಗ್ ಮಾಡುವಾಗ ಮಾತ್ರ ಆತ 50 ಎಸೆತಗಳಲ್ಲಿ ದ್ವಿಶತಕ ಬಾರಿಸದಿರಲಿ ಎಂದಷ್ಟೇ ನಾನು ಆಶಿಸುತ್ತೇನೆ ಎಂದು ನಗೆಚಟಾಕಿ ಹಾರಿಸಿದ್ದಾರೆ.

Also Read
ಪಂದ್ಯಕ್ಕೂ ಮುನ್ನ ಆ 'ನಾಲ್ವರು' ಆಡಿದ ಮಾತೇ ಸೂರ್ಯವಂಶಿ 'ಸುನಾಮಿ'ಗೆ ಕಾರಣವಾಯ್ತಂತೆ! ಅದರಲ್ಲೂ ಯುವರಾಜ್ ಸಿಂಗ್ ಕೊಟ್ಟ ಸಲಹೆ ಏನು? | Vaibhav Sooryavanshi
15 ವರ್ಷದ ಬಾಲಕನನ್ನು ಏಕದಿನ ಕ್ರಿಕೆಟ್‌ನ ರಕ್ಷಕ ಎನ್ನುವುದು ತಪ್ಪು: ಕಿವೀಸ್ ಕೋಚ್ ಜೇಕಬ್ ಓರಮ್

ಹ್ಯಾಗ್ಲಿ ಓವಲ್ ಪಿಚ್ ಕುರಿತು ಓರಮ್ ನಿರೀಕ್ಷೆ

ಶುಕ್ರವಾರದಿಂದ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಆರಂಭವಾಗಲಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಪಿಚ್ ಕುರಿತೂ ಓರಮ್ ಮಾತನಾಡಿದ್ದಾರೆ. ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಪಿಚ್‌ಗಿಂತ ಇಲ್ಲಿ ಹೆಚ್ಚಿನ ವೇಗ, ಬೌನ್ಸ್ ಮತ್ತು ಸ್ವಿಂಗ್ ಸಿಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ. ವೆಲ್ಲಿಂಗ್ಟನ್ ಟೆಸ್ಟ್‌ನ ಐದು ದಿನಗಳಲ್ಲಿ ಕೇವಲ 24 ವಿಕೆಟ್‌ಗಳು ಮಾತ್ರ ಪತನಗೊಂಡಿದ್ದವು. ಆದರೆ ಹ್ಯಾಗ್ಲಿ ಓವಲ್‌ನಲ್ಲಿ ಪಂದ್ಯ ಸಾಗಿದಂತೆ ಬ್ಯಾಟಿಂಗ್‌ಗೆ ಪೂರಕವಾಗಬಹುದು ಎಂದು ಅವರು ಅಂದಾಜಿಸಿದ್ದಾರೆ.

ಶುಕ್ರವಾರ ಮೊದಲ ದಿನದ ವಾತಾವರಣ, ಗಾಳಿ ಮತ್ತು ಪಿಚ್ ಬಣ್ಣವನ್ನು ನೋಡಿದ ಬಳಿಕವೇ ನಮ್ಮ ಬೌಲಿಂಗ್ ಯೋಜನೆಯನ್ನು ಅಂತಿಮಗೊಳಿಸುತ್ತೇವೆ. ವೆಲ್ಲಿಂಗ್ಟನ್‌ಗಿಂತ ಇಲ್ಲಿ ಹೆಚ್ಚಿನ ಬೌನ್ಸ್ ಸಿಗುವ ನಿರೀಕ್ಷೆಯಿದೆ. ಜೊತೆಗೆ ಈ ಬಾರಿಯಾದರೂ ನಾವು ಟಾಸ್ ಗೆಲ್ಲುತ್ತೇವೆ ಎಂಬ ಭರವಸೆಯಿದೆ ಎಂದು ಓರಮ್ ಹೇಳಿದ್ದಾರೆ.

ಪಿಚ್ ಮೇಲೆ ಹುಲ್ಲು ಇರುವುದನ್ನು ಕಂಡು ಬ್ಯಾಟರ್‌ಗಳು ಭಯಪಡುವ ಅಗತ್ಯವಿಲ್ಲ ಎಂದ ಅವರು, ಕಳೆದ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಉದಾಹರಣೆಯಾಗಿ ನೀಡಿದರು. ಅಂದು ಅಂತಿಮ ದಿನದವರೆಗೂ ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು ಮತ್ತು ಜಸ್ಟಿನ್ ಗ್ರೀವ್ಸ್ ದ್ವಿಶತಕ ಗಳಿಸಿದ್ದರು. ಆರಂಭದಲ್ಲಿ ಕೆಲ ಹೊತ್ತು ಕಳೆದರೆ ಇಲ್ಲಿ ದೊಡ್ಡ ಮೊತ್ತ ಗಳಿಸಬಹುದು ಎಂದು ಅವರು ವಿವರಿಸಿದ್ದಾರೆ.

ಕಿವೀಸ್ ಬೌಲರ್‌ಗಳ ಸಮರ್ಥನೆ!

ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಬೌಲರ್‌ಗಳ ಪ್ರದರ್ಶನವನ್ನು ಓರಮ್ ಸಮರ್ಥಿಸಿಕೊಂಡಿದ್ದಾರೆ. ಸ್ಕೋರ್‌ಕಾರ್ಡ್ ನೋಡಿದರೆ ಬೌಲರ್‌ಗಳು ವಿಫಲರಾದಂತೆ ಕಂಡರೂ, ವಾಸ್ತವದಲ್ಲಿ ಅವರು ಉತ್ತಮ ಲೈನ್ ಮತ್ತು ಲೆಂತ್‌ನಲ್ಲಿ ಬೌಲಿಂಗ್ ಮಾಡಿದ್ದರು. ಆದರೆ ಆರಂಭದಲ್ಲಿ ಕೈಬಿಟ್ಟ ಕ್ಯಾಚ್‌ಗಳು ಹಾಗೂ ಡಿಆರ್‌ಎಸ್ ತೆಗೆದುಕೊಳ್ಳದಿರುವುದು ತಂಡಕ್ಕೆ ಮುಳುವಾಯಿತು. ಇದರ ಲಾಭ ಪಡೆದ ಟೀಮ್​ ಇಂಡಿಯಾ ಬ್ಯಾಟರ್‌ಗಳು ದೊಡ್ಡ ಜೊತೆಯಾಟ ಆಡಿ ಪಂದ್ಯವನ್ನು ನಮ್ಮಿಂದ ದೂರ ಕೊಂಡೊಯ್ದರು ಎಂದು ಓರಮ್ ತಿಳಿಸಿದ್ದಾರೆ(ಏಜೆನ್ಸೀಸ್​).