Sunil Gavaskar: ಭಾರತ ತಂಡವು ನಿನ್ನೆ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಸೋಲನುಭವಿಸಿದರು, ಸರಣಿಯನ್ನು ವಶಪಡಿಸಿಕೊಂಡಿತು. ಈ ಪಂದ್ಯದಲ್ಲಿ ವಿಂಡೀಸ್ ತಂಡವು ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಜಯ ಸಾಧಿಸುವ ಮೂಲಕ ಪ್ರಸ್ತುತ ಸರಣಿಯಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 351 ರನ್‌ಗಳನ್ನು ಕಲೆಹಾಕಿತು. ಕನ್ನಡಿಗ ಕೆ ಎಲ್ ರಾಹುಲ್ ಶತಕವು ಭಾರತಕ್ಕೆ ಈ ಬೃಹತ್ ಮೊತ್ತವನ್ನು ಕಲೆಹಾಕಲು ನೆರವಾಯಿತು. ಇದರೊಂದಿಗೆ, ರೋಹಿತ್ ಶರ್ಮಾರ ಅದ್ಭುತ ಆಟವೂ ಕೂಡ ಅಭಿಮಾನಿಗಳಿಗೆ ಮನರಂಜನೆ ನೀಡಿತು. ಈ ಪಂದ್ಯದಲ್ಲಿ ಹಿಟ್ಮ್ಯಾನ್ 92 ರನ್ಗಳಿಸಿ ಕೇವಲ 8 ರನ್‌ಗಳಿಂದ ಶತಕ ವಂಚಿತರಾದರು.
ಈ ಕುರಿತಾಗಿ ಮಾತನಾಡಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ರೋಹಿತ್ ಶರ್ಮಾ ಅವರು ಪಂದ್ಯದಲ್ಲಿ ಶತಕ ವಂಚಿತರಾಗಿದ್ದಕ್ಕೆ ತಮಗೆ ಎಷ್ಟು ನಿರಾಶೆಯಾಗಿದೆ ಎಂಬುದರ ಕುರಿತು ಮಾತನಾಡಿದರು.
ಜಿಯೋಹಾಟ್‌ಸ್ಟಾರ್ ಜೊತೆ ಮಾತನಾಡಿದ ಗವಾಸ್ಕರ್, ರೋಹಿತ್ 92 ರನ್‌ಗಳಿಗೆ ಔಟಾಗಿದ್ದಕ್ಕೆ ನನಗೆ ನಿರಾಶೆಯಾಗಲು ಕಾರಣವೆಂದರೆ, ಅವರಿಗೆ ಶತಕ ಬಾರಿಸಲು ಸಾಧ್ಯವಾಗಲಿಲ್ಲ ಮತ್ತು ಅವರು ಮುಂಬರುವ 2027ರ ಏಕದಿನ ಕ್ರಿಕೆಟ್ ವಿಶ್ವಕಪ್ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಬಹುದು. ಆ ವೇಳೆಗೆ ರೋಹಿತ್ ಏಕದಿನ ಶತಕಗಳ ಸಂಖ್ಯೆಯು ಅವರ ವಯಸ್ಸಿಗಿಂತ ಹೆಚ್ಚಿರಬೇಕು ಎನ್ನುವುದು ನನ್ನ ಬಯಕೆ. ಒಂದು ವೇಳೆ ಅವರು ಮೂರನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದರೆ, ತಮ್ಮ 36ನೇ ಶತಕದೊಂದಿಗೆ ಆ ಸಾಧನೆಗೆ ಇನ್ನಷ್ಟು ಹತ್ತಿರವಾಗುತ್ತಿದ್ದರು ಎಂದು ಸುನಿಲ್ ಗವಾಸ್ಕರ್ ತಿಳಿಸಿದರು.
ಇದಲ್ಲದೆ, 2023ರ ಏಕದಿನ ವಿಶ್ವಕಪ್‌ನಿಂದೀಚೆಗೆ ರೋಹಿತ್ ಶರ್ಮಾ ತಮ್ಮ ಬ್ಯಾಟಿಂಗ್ ಶೈಲಿಯಲ್ಲಿ ಎಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆಯೂ ಗವಾಸ್ಕರ್ ಮಾತನಾಡಿದರು. ಆ ವಿಶ್ವಕಪ್‌ನಲ್ಲಿ ರೋಹಿತ್ ಅವರು ಔಟಾಗುವ ಭಯವಿಲ್ಲದೆ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟವನ್ನು (ಬ್ಯಾಂಗ್-ಬ್ಯಾಂಗ್) ಆಡಲು ಆರಂಭಿಸಿದ್ದರು.
ಆ ವೇಳೆ ಟೀಮ್ ಇಂಡಿಯಾದ ನಾಯಕರಾಗಿ ರೋಹಿತ್ ಸ್ವತಃ ರೂಪಿಸಿಕೊಂಡಿದ್ದ ಬ್ಯಾಟಿಂಗ್ ಶೈಲಿಯಲ್ಲಿ ಈಗ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಆ ಸಂದರ್ಭದಲ್ಲಿ ಅವರು ಬೇಗನೆ ಔಟಾಗುವ ಸಾಧ್ಯತೆಯನ್ನು ಲೆಕ್ಕಿಸದೆ ಮೊದಲ ಎಸೆತದಿಂದಲೇ ಬಿರುಸಿನ ಆಟವಾಡುತ್ತಿದ್ದರು. ಆದರೆ ಈಗ ತಮ್ಮ ವಿಕೆಟ್ ಎಷ್ಟುಮೌಲ್ಯಯುತ ಎಂಬುದು ಅವರಿಗೆ ಅರಿವಾಗಿದೆ. 2023ರ ವಿಶ್ವಕಪ್‌ನಲ್ಲಿ ಅವರು ತಂಡಕ್ಕೆ ಅತ್ಯುತ್ತಮ ಆರಂಭಗಳನ್ನು ಒದಗಿಸಿಕೊಟ್ಟಿದ್ದರು, ಆದರೆ ಅವರು ಕೇವಲ 30-40 ರನ್‌ಗಳಿಗೆ ಔಟಾಗುವ ಬ್ಯಾಟ್ಸ್‌ಮನ್ ಅಲ್ಲ. ಅವರು ಶತಕಗಳನ್ನು ಬಾರಿಸುವ ಆಟಗಾರ. ಆದ್ದರಿಂದ ಅವರು ದೊಡ್ಡ ಮೊತ್ತದ ರನ್‌ಗಳನ್ನು ಗಳಿಸುವುದನ್ನು ನೋಡಿ ನನಗೆ ಸಂತೋಷವಾಗಿದೆ ಎಂದು ಗವಾಸ್ಕರ್ ಹೇಳಿದರು(ಏಜೆನ್ಸೀಸ್).