ಟಿ20 ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾಗೆ 131 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಬಿಸಿಸಿಐ! Team India

ಟಿ20 ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾಗೆ 131 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಬಿಸಿಸಿಐ! Team India
ಟಿ20 ವಿಶ್ವಕಪ್​ ಗೆದ್ದ ಟೀಮ್​ ಇಂಡಿಯಾಗೆ 131 ಕೋಟಿ ರೂ. ನಗದು ಬಹುಮಾನ ಘೋಷಿಸಿದ ಬಿಸಿಸಿಐ! Team India
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್​ ಗೆದ್ದ ಸೂರ್ಯಕುಮಾರ್​ ಯಾದವ್​ ನೇತೃತ್ವದ ಭಾರತ ತಂಡಕ್ಕೆ ನಗದು ಬಹುಮಾನ ಘೋಷಣೆ
  • 131 ಕೋಟಿ ರೂ. ನಗದು ಬಹುಮಾನವನ್ನು ಘೋಷಣೆ ಮಾಡಿದ ಬಿಸಿಸಿಐ
  • ಈ ಮೊತ್ತ 2024ರ ಟಿ20 ವಿಶ್ವಕಪ್‌ಗೆ ನೀಡಿದ್ದ 125 ಕೋಟಿಗಿಂತಲೂ ಹೆಚ್ಚು
ಅಹಮದಾಬಾದ್: ಪ್ರತಿಷ್ಠಿತ ಟಿ20 ವಿಶ್ವಕಪ್​ ಗೆದ್ದ ಸೂರ್ಯಕುಮಾರ್​ ಯಾದವ್​ ನೇತೃತ್ವದ ಭಾರತ ತಂಡಕ್ಕೆ ( Team India ) ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂದು (ಮಾರ್ಚ್​ 10) 131 ಕೋಟಿ ರೂ. ನಗದು ಬಹುಮಾನವನ್ನು ಘೋಷಣೆ ಮಾಡಿದೆ.
ಈ ಬಹುಮಾನದ ಮೊತ್ತವು 2024ರ ಟಿ20 ವಿಶ್ವಕಪ್‌ಗೆ ನೀಡಿದ್ದ 125 ಕೋಟಿಗಿಂತ ಹೆಚ್ಚಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಬಿಸಿಸಿಐ ನೀಡಿದ ಅತಿ ದೊಡ್ಡ ಬಹುಮಾನಗಳಲ್ಲಿ ಒಂದಾಗಿದೆ.
ಈ ಬಗ್ಗೆ ಬಿಸಿಸಿಐ ಸೆಕ್ರೆಟರಿ ದೇವಜಿತ್ ಸೈಕಿಯಾ ಅವರು ಮಾತನಾಡಿದ್ದು, ಭಾರತ ತಂಡದ ಈ ಅದ್ಭುತ ಸಾಧನೆಗೆ 131 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಲಾಗಿದೆ. ಇದು ಆಟಗಾರರು, ಕೋಚ್‌ಗಳು, ಸಪೋರ್ಟ್ ಸ್ಟಾಫ್ ಮತ್ತು ಸೆಲೆಕ್ಟರ್ಸ್‌ಗೆ ಸಿಕ್ಕ ಗೌರವವಾಗಿದೆ ಎಂದಿದ್ದಾರೆ.
15 ಆಟಗಾರರು, ತರಬೇತಿ ಸಿಬ್ಬಂದಿ ಮತ್ತು ಇತರ ಸಹಾಯಕ ಸಿಬ್ಬಂದಿಗೆ ಈ ಬಹುಮಾನ ಹಣ ಹಂಚಿಕೆಯಾಗುತ್ತದೆ. ಮೂಲಗಳ ಪ್ರಕಾರ, ಆಟಗಾರರಿಗೆ ಬಹುಮಾನದ ಹೆಚ್ಚಿನ ಪಾಲು ಸಿಗಲಿದೆ. ಆದರೆ, ಸಹಾಯಕ ಸಿಬ್ಬಂದಿಯ ಮೊತ್ತವನ್ನು ಕ್ರಮಾನುಗತವಾಗಿ ನಿರ್ಧರಿಸಲಾಗುತ್ತದೆ.
ಐಸಿಸಿ ಕೊಟ್ಟಿದ್ದೆಷ್ಟು?
ಪ್ರಶಸ್ತಿ ವಿಜೇತ ತಂಡಕ್ಕೆ ಐಸಿಸಿಯಿಂದ ಭಾರಿ ಬಹುಮಾನದ ಹಣವನ್ನು ನೀಡಲಾಗಿದೆ. ಈ ಹಿಂದೆಯೇ ತಿಳಿಸಿದಂತೆ, ವಿಶ್ವ ಚಾಂಪಿಯನ್ ಟೀಮ್ ಇಂಡಿಯಾಗೆ 27.50 ಕೋಟಿ ರೂ. ಹಣ ಸಿಗಲಿದೆ. ಅದೇ ರೀತಿ, ಫೈನಲ್‌ನಲ್ಲಿ ಭಾರತದ ಎದುರು ಸೋತು, ರನ್ನರ್​ಅಪ್ ಸ್ಥಾನವನ್ನು ಅಲಂಕರಿಸಿದ ನ್ಯೂಜಿಲೆಂಡ್ ತಂಡಕ್ಕೆ 13.67 ಕೋಟಿ ದೊರೆಯಲಿದೆ. ಸೆಮಿಫೈನಲಿಸ್ಟ್ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ತಲಾ 7.24 ಕೋಟಿ ಸಿಗಲಿದ್ದು, ಸೂಪರ್-8 ಹಂತ ತಲುಪಿದ ಟೀಮ್​ಗಳಿಗೆ 3.48 ಕೋಟಿ ರೂಪಾಯಿ ಸೇರಲಿದೆ.
ಅಂದಹಾಗೆ, ಕಳೆದ ಭಾನುವಾರ (ಮಾ.08) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಅಭಿಮಾನಿಗಳ ಹರ್ಷೋದ್ಗಾರಕ್ಕೆ ಸಾಕ್ಷಿಯಾದ ಟೀಮ್ ಇಂಡಿಯಾ ಗೆಲುವು, ನ್ಯೂಜಿಲೆಂಡ್ ತಂಡದ ಚೊಚ್ಚಲ ಟಿ20 ವಿಶ್ವಕಪ್​ ಕನಸನ್ನು ಭಗ್ನಗೊಳಿಸಿತು. 96 ರನ್‌ಗಳ ಭಾರೀ ಅಂತರದಿಂದ ಕಿವೀಸ್​ ಪಡೆಯನ್ನು ಮಣಿಸಿ ಮೂರನೇ ಬಾರಿಗೆ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಸೂರ್ಯಕುಮಾರ್​ ಯಾದವ್ ಪಡೆಗೆ ಕೋಟ್ಯಂತರ ಅಭಿಮಾನಿಗಳಿಂದ ಅಭಿನಂದನೆಗಳ ಹೊಳೆಯೇ ಹರಿದುಬರುತ್ತಿದೆ. 
ತವರಿನಲ್ಲಿ ಟಿ20 ವಿಶ್ವಕಪ್​ ಗೆದ್ದ ಮೊದಲ ತಂಡ ಎಂಬ ಭಾರತವಾಗಿದ್ದು, ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ (3 ಸಲ) ವಿಶ್ವಕಪ್ ಗೆದ್ದ ಏಕೈಕ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಟೀಮ್ ಇಂಡಿಯಾ ಪರ ಟೂರ್ನಿ ಪೂರ ಅದ್ಭುತ ಇನ್ನಿಂಗ್ಸ್​ ಆಡಿದ ಸಂಜು ಸ್ಯಾಮ್ಸನ್​ ಒಂದೆಡೆಯಾದರೆ, ಬೌಲಿಂಗ್​ನಲ್ಲಿ ಭಾರತಕ್ಕೆ ಅಭಯ ನೀಡಿದ್ದೇ ಜಸ್ಪ್ರಿತ್ ಬುಮ್ರಾ. ಇವರಿಬ್ಬರನ್ನು ಹೊರತುಪಡಿಸಿದರೆ, ಶಿವಂ ದುಬೆ, ಇಶಾನ್ ಕಿಶನ್​, ಅಕ್ಷರ್​ ಪಟೇಲ್​, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅರ್ಷದೀಪ್ ಸಿಂಗ್​ ಸೇರಿ ತಂಡದ ಒಂದಷ್ಟು ಆಟಗಾರರು ಟೂರ್ನಿ ಪೂರ ಅದ್ಭುತ ಪ್ರದರ್ಶನ ನೀಡಿದ್ದು ಗಮನಾರ್ಹ.  
ಫೈನಲ್​ ಪಂದ್ಯದ ವಿಚಾರಕ್ಕೆ ಬರುವುದಾದರೆ, ಈ ಪಂದ್ಯದಲ್ಲಿ ಟೀಮ್​ ಇಂಡಿಯಾ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ (89 ರನ್​, 46 ಎಸೆತ, 5 ಬೌಂಡರಿ, 8 ಸಿಕ್ಸರ್‌) ಹಾಗೂ ಅಭಿಷೇಕ್ ಶರ್ಮಾ (52 ರನ್​, 21 ಎಸೆತ, 6 ಬೌಂಡರಿ, 3 ಸಿಕ್ಸರ್‌) ಭರ್ಜರಿ ಆರಂಭ ಒದಗಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಇಶಾನ್ ಕಿಶನ್ (54 ರನ್​, 25 ಎಸೆತ, 4 ಬೌಂಡರಿ, 4 ಸಿಕ್ಸರ್‌) ಅರ್ಧ ಶತಕದೊಂದಿಗೆ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೊನೆಯಲ್ಲಿ ಬಂದ ಶಿವಂ ದುಬೆ ( ಅಜೇಯ 26 ರನ್​, 8 ಎಸೆತ, 3 ಬೌಂಡರಿ, 2 ಸಿಕ್ಸರ್‌) ವಿನಾಶಕಾರಿ ಇನ್ನಿಂಗ್ಸ್ ಆಡಿದರು. ಈ ಮೂಲಕ ಟೀಮ್​ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 255 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ಕಿವೀಸ್ ಬೌಲರ್‌ಗಳಲ್ಲಿ, ಜೇಮ್ಸ್ ನೀಶಮ್ ಮೂರು ವಿಕೆಟ್‌ಗಳನ್ನು ಪಡೆದರೆ, ಮ್ಯಾಟ್ ಹೆನ್ರಿ ಮತ್ತು ರಾಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.
256 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಕಿವೀಸ್ ತಂಡ, ಟೀಮ್​ ಇಂಡಿಯಾದ ಬೌಲಿಂಗ್​ ದಾಳಿಗೆ ತತ್ತರಿಸಿತು. ಅಂತಿಮವಾಗಿ 19 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು. ಕಿವೀಸ್​ ಪರ ಟಿಮ್ ಸೈಫರ್ಟ್ (26 ಎಸೆತಗಳಲ್ಲಿ 52 ರನ್) ಮತ್ತು ಮಿಚೆಲ್ ಸ್ಯಾಂಟ್ನರ್ (35 ಎಸೆತಗಳಲ್ಲಿ 43 ರನ್) ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಉಳಿದಂತೆ ಯಾವೊಬ್ಬ ಬ್ಯಾಟರ್​ ಕೂಡ ಪ್ರಭಾವ ಬೀರಲಿಲ್ಲ. ಸೆಮಿಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದ್ದ ಫಿನ್​ ಅಲೆನ್​ ನಿನ್ನೆಯ ಪಂದ್ಯದಲ್ಲಿ ಕೇವಲ 9 ರನ್​ಗೆ ಔಟಾದರು. ಟೀಮ್​ ಇಂಡಿಯಾ ಪರ  ಜಸ್​ಪ್ರೀತ್​ ಬುಮ್ರಾ ನಾಲ್ಕು ವಿಕೆಟ್ ಪಡೆದರೆ, ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಮತ್ತು ಅಭಿಷೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net