

INDvWI: ಕ್ರಿಕೆಟ್ ಕ್ರೀಡಾಪ್ರೇಮಿಗಳನ್ನು ತುದಿಗಾಲ ಮೇಲೆ ನಿಲ್ಲಿಸಿದ ನಾಲ್ಕನೇ ಟಿ20 ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ತಂಡವು ಭಾರತದ ವಿರುದ್ಧ 24 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಈ ರೋಚಕ ಜಯದೊಂದಿಗೆ ಐದು ಪಂದ್ಯಗಳ ಟಿ20 ಸರಣಿಯನ್ನು 2-2 ಸಮಬಲಗೊಳಿಸಿರುವ ವಿಂಡೀಸ್ ಪಡೆ, ಸರಣಿ ನಿರ್ಣಾಯಕ ಕದನಕ್ಕೆ ವೇದಿಕೆ ಸಿದ್ಧಪಡಿಸಿದೆ.
ಹೋಪ್ ಭರ್ಜರಿ ಶತಕ: ವಿಂಡೀಸ್ ಬೃಹತ್ ಮೊತ್ತ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ಆರಂಭದಿಂದಲೇ ಭಾರತೀಯ ಬೌಲರ್ಗಳ ಮೇಲೆ ಸವಾರಿ ಮಾಡಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆರಂಭಿಕ ಆಟಗಾರ ಶಾಯ್ ಹೋಪ್ (Shai Hope) ಕೇವಲ 50 ಎಸೆತಗಳಲ್ಲಿ ಅಜೇಯ 102 ರನ್ ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಪ್ರಮುಖ ಕಾರಣರಾದರು. ಇವರ ಈ ಬಿರುಸಿನ ಇನ್ನಿಂಗ್ಸ್ನಲ್ಲಿ 4 ಭರ್ಜರಿ ಬೌಂಡರಿಗಳು ಹಾಗೂ 9 ಆಕರ್ಷಕ ಸಿಕ್ಸರ್ಗಳು ಸೇರಿದ್ದವು.
ಹೋಪ್ಗೆ ಉತ್ತಮ ಸಾಥ್ ನೀಡಿದ ಶೆರ್ಫೇನ್ ರುದರ್ಫೋರ್ಡ್ ಅಜೇಯ 49 ರನ್ (26 ಎಸೆತ) ಹಾಗೂ ಶಿಮ್ರಾನ್ ಹೆಟ್ಮೆಯರ್ ಕೇವಲ 12 ಎಸೆತಗಳಲ್ಲಿ 33 ರನ್ ಸಿಡಿಸುವ ಮೂಲಕ ರನ್ ಗತಿಗೆ ವೇಗ ನೀಡಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡವು ನಿಗದಿತ ಓವರ್ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಬೃಹತ್ 247 ರನ್ ಕಲೆಹಾಕಿತು.
ಸಂಜು ಅಬ್ಬರ..ಶ್ರೆಯಸ್ ಸೈಲೆಂಟ್
248 ರನ್ಗಳ ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಸಂಜು ಸ್ಯಾಮ್ಸನ್ ಆರಂಭದಲ್ಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆದರೆ ಅವರ ವಿಕೆಟ್ ಬಳಿಕ ಮಧ್ಯಮ ಕ್ರಮದವರು ಪೆವಿಲಿಯನ್ ಪರೇಡ್ ನಡೆಸಿದರು. ಉಪನಾಯಕ ತಿಲಕ್ ವರ್ಮಾ, ಆಲ್ರೌಂಡರ್ ನಿತೀಶ್ ರೆಡ್ಡಿ ಗೆಲುವಿಗೆ ಪ್ರಯತ್ನಿಸಿದರು. ವಿಂಡೀಸ್ ಬೌಲರ್ಗಳು ಅದಕ್ಕೆ ಅವಕಾಶ ನೀಡಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ 19.3 ಓವರ್ಗಳಲ್ಲಿ 223 ರನ್ ಗಳಿಸಲಷ್ಟೇ ಶಕ್ತವಾಯಿತು.
ವಿಂಡೀಸ್ ಪರ ಮಾರಕ ದಾಳಿ ಸಂಘಟಿಸಿದ ಬೌಲರ್ ಕೀಮೋ ಪಾಲ್ 41 ರನ್ ನೀಡಿ ಪ್ರಮುಖ 5 ವಿಕೆಟ್ಗಳನ್ನು ಕಬಳಿಸುವ ಮೂಲಕ ಭಾರತದ ಗೆಲುವಿನ ಕನಸಿಗೆ ತಣ್ಣೀರು ಎರಚಿದರು. ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಸರಣಿಯಲ್ಲಿ ಕಮ್ಬ್ಯಾಕ್ ಮಾಡಿದೆ. ಸರಣಿಯ ಐದನೇ ಹಾಗೂ ಅಂತಿಮ ಟಿ20 ಪಂದ್ಯವು ಅತ್ಯಂತ ರೋಮಾಂಚನದಿಂದ ಕೂಡಿರಲಿದ್ದು, ಯಾವ ತಂಡ ಸರಣಿ ಜಯಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ(ಏಜೆನ್ಸೀಸ್).