

ನವದೆಹಲಿ: ಟೀಮ್ ಇಂಡಿಯಾ ಪುರುಷರ ಆಯ್ಕೆ ಸಮಿತಿಗೆ ಬಿಸಿಸಿಐ (BCCI) ಭರ್ಜರಿ ಸರ್ಜರಿ ಮಾಡಿದ್ದು, ಭಾರತ ತಂಡದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಜಾ ಅವರನ್ನು ನೂತನ ಮುಖ್ಯ ಆಯ್ಕೆಗಾರರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಇಷ್ಟು ದಿನ ಅಜಿತ್ ಅಗರ್ಕರ್ ಕಾರ್ಯನಿರ್ವಹಿಸುತ್ತಿದ್ದ ಈ ಹುದ್ದೆಗೆ ಈಗ ಓಜಾ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶ್ರೀ ರಮೇಶ್ ಪವಾರ್ ಅವರನ್ನು ಪುರುಷರ ಆಯ್ಕೆ ಸಮಿತಿಗೆ ನೇಮಿಸಲಾಗಿದೆ. ಹಿರಿತನದ ಆಧಾರದ ಮೇಲೆ ಪ್ರಗ್ಯಾನ್ ಓಜಾ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ತಮ್ಮ ಅಧಿಕಾರಾವಧಿಯಲ್ಲಿ ತಂಡಕ್ಕೆ ನೀಡಿದ ಅಪಾರ ಕೊಡುಗೆ ಮತ್ತು ಬದ್ಧತೆಗಾಗಿ ಅಜಿತ್ ಅಗರ್ಕರ್ ಅವರಿಗೆ ಧನ್ಯವಾದಗಳು ಎಂದು ಬಿಸಿಸಿಐ ತಿಳಿಸಿದೆ.
ಬಿಸಿಸಿಐ ನಿಯಮಗಳ ಪ್ರಕಾರ, ಆಯ್ಕೆ ಸಮಿತಿಯಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಹಿರಿಯ ಕ್ರಿಕೆಟಿಗರಿಗೆ ಚೀಫ್ ಸೆಲೆಕ್ಟರ್ ಹುದ್ದೆ ಒಲಿಯುತ್ತದೆ. ಹೀಗಾಗಿ ತಂಡದ ಆಯ್ಕೆ ಸಮಿತಿಯಲ್ಲಿ ಅತ್ಯಧಿಕ ಟೆಸ್ಟ್ ಪಂದಯವನ್ನಾಡಿರುವ ಪ್ರಗ್ಯಾನ್ ಓಜಾ ಚೀಫ್ ಸೆಲೆಕ್ಟರ್ ಆಗಿ ನೇಮಕವಾಗಿದ್ದಾರೆ.
ಟೀಮ್ ಇಂಡಿಯಾದ ಪುರುಷರ ತಂಡದ ಆಯ್ಕೆ ಸಮಿತಿಯಲ್ಲಿರುವ ಶಿವ ಸುಂದರ್ ದಾಸ್ (23), ಆರ್‌ಪಿ ಸಿಂಗ್ (14), ಅಜಯ್ ರಾತ್ರಾ (6) ಮತ್ತು ರಮೇಶ್ ಪವಾರ್ (2) ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಪ್ರಗ್ಯಾನ್ ಓಜಾ 24, ಅಂದರೆ ಶಿವ ಸುಂದರ್ ದಾಸ್ ಕ್ಕಿಂತ ಕೇವಲ ಒಂದು ಪಂದ್ಯವನ್ನು ಹೆಚ್ಚಿಗೆ ಆಡಿದ್ದಾರೆ. ಹೀಗಾಗಿ ಬಿಸಿಸಿಐ ನಿಯಮದ ಪ್ರಕಾರ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ಅನುಭವ ಕಾರಣ ಓಜಾ ಕೇವಲ ಒಂದೇ ಒಂದು ಪಂದ್ಯ ಹೆಚ್ಚಿಗೆ ಆಡಿದ ಪರಿಣಾಮ ಮುಖ್ಯ ಆಯ್ಕೆಗಾರರಾಗಿ ಆಯ್ಕೆಯಾಗಿದ್ದಾರೆ.
ಹೊಸ ಆಯ್ಕೆ ಸಮಿತಿಯ ಮುಂದೆ ಈಗ ದೊಡ್ಡ ಜವಾಬ್ದಾರಿಯೇ ಇದೆ. ಭಾರತ ತಂಡ ಶೀಘ್ರದಲ್ಲೇ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಕಿವೀಸ್ ನೆಲದಲ್ಲಿ 5 ಟಿ20, 5 ಏಕದಿನ ಹಾಗೂ 2 ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಮೊದಲಿಗೆ ಟಿ20 ಸರಣಿ ಆರಂಭವಾಗಲಿದ್ದು, ಅಕ್ಟೋಬರ್ 22 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಅವರದ್ದೇ ನೆಲದಲ್ಲಿ ಎದುರಿಸಲು ಬಲಿಷ್ಠ ಪಡೆಯನ್ನು ಕಣಕ್ಕಿಳಿಸುವುದು ಹೊಸ ಸಾರಥಿ ಪ್ರಗ್ಯಾನ್ ಓಜಾ ನೇತೃತ್ವದ ಸಮಿತಿಗೆ ಮೊದಲ ಅಗ್ನಿಪರೀಕ್ಷೆಯಾಗಲಿದೆ, (ಏಜೆನ್ಸೀಸ್).