ನಾಯಕತ್ವದಿಂದ ರೋಹಿತ್​ ಶರ್ಮಾಗೆ ಕೊಕ್; ಮುಂಬೈ ಇಂಡಿಯನ್ಸ್​ ಕೊಟ್ಟ ಸ್ಪಷ್ಟನೆ ಹೀಗಿತ್ತು

MI
Published on

ಮುಂಬೈ: ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್​ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿದ ಬಿಸಿಸಿಐ ಇದೀಗ 2024ರಲ್ಲಿ ನಡೆಯುವ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ತಯಾರಿ ಆರಂಭಿಸಿದೆ. ಇತ್ತ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ರೋಹಿತ್​ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್​ ಪಾಂಡ್ಯ ಅವರನ್ನು ಕ್ಯಾಪ್ಟನ್​ ಆಗಿ ನೇಮಿಸುವ ಮೂಲಕ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ಇತ್ತ ರೋಹಿತ್​ ಶರ್ಮಾರನ್ನು ಫ್ರಾಂಚೈಸಿ ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್ ಅವರು ಮೆಂಟರ್​ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರೋಹಿತ್​ರನ್ನು ನಾಯಕತ್ವದಿಂದ ಕೆಳಗಿಳಿಸಿದ ತಂಡದ ಮ್ಯಾನೇಜ್​ಮೆಂಟ್​ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಆದರೆ, ಈ ಕುರಿತು ಫ್ರಾಂಚೈಸಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ.

ಇದಕ್ಕೆ ಸಂಬಂಧಿಸಿದಂತೆ ಮೇಜರ್​ ಅಪ್ಡೇಟ್​ ಒಂದು ಹೊರಬಿದ್ದಿದ್ದು, ರೋಹಿತ್​ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿದ ಕುರಿತು ಮುಂಬೈ ಇಂಡಿಯನ್ಸ್ ಪ್ರತಿಕ್ರಿಯಿಸಿದೆ ಎಂದು ತಿಳಿದು ಬಂದಿದೆ. ನಿನ್ನೆ (ಡಿಸೆಂಬರ್ 19) ನಡೆದ ಐಪಿಎಲ್​ ಮಿನಿ ಹರಾಜು ಪ್ರಕ್ರಿಯೆ ವೇಳೆ ಅಭಿಮಾನಿಯೊಬ್ಬರು ಈ ಬಗ್ಗೆ ಆಕಾಶ್​ ಅವರ ಬಳಿ ಕೇಳಿದ್ದು, ಅವರು ಉತ್ತರಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಅಭಿಮಾನಿಯೊಬ್ಬರು ರೋಹಿತ್​​ ಶರ್ಮಾರನ್ನು ನೀವು ನಾಯಕತ್ವದಿಂದ ಯಾಕೆ ಕೆಳಗಿಳಿಸಿದ್ದೀರಾ ಎಂದು ಜೋರಾಗಿ ಕೇಳಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆಕಾಶ್​ ಚಿಂತಿಸಬೇಡಿ ಅವರು ಬ್ಯಾಟಿಂಗ್​ ಮಾಡುತ್ತಾರೆ ಎಂದು ಹೇಳುವ ಮೂಲಕ ರೋಹಿತ್​ ಶರ್ಮಾ ಮುಂಬೈ ಇಂಡಿಯನ್ಸ್​ ತೊರೆಯುತ್ತಾರೆ ಎಂಬ ವದಂತಿಗೆ ಬ್ರೇಕ್​ ಹಾಕಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ನಾಯಕತ್ವದಿಂದ ಕೆಳಗಿಳಿಸಿತ್ತು ಎಂಬುದರ ಬಗ್ಗೆ ಇನ್ನು ಸ್ಪಷ್ಟವಾಗಿ ಹೇಳಿಲ್ಲ.

ಮಂಗಳವಾರ ದುಬೈನಲ್ಲಿ ನಡೆದ ಐಪಿಎಲ್​ ಆಟಗಾರರ ಮಿನಿ ಹರಾಜಿನಲ್ಲಿ 30 ವಿದೇಶಿಯರ ಸಹಿತ ಒಟ್ಟು 72 ಆಟಗಾರರು ಮಾರಾಟವಾದರು. ಈ ಪೈಕಿ ಮುಂಬೈ ಇಂಡಿಯನ್ಸ್ ಗೆರಾಲ್ಡ್​ ಕೋಟ್​ಜೀ (5 ಕೋಟಿ), ದಿಲ್ಶಾನ್​ ಮಧುಶಂಕ (4.60 ಕೋಟಿ), ಮೊಹಮದ್​ ನಬಿ (1.50 ಕೋಟಿ), ಶ್ರೇಯಸ್​ ಗೋಪಾಲ್​ (20 ಲಕ್ಷ), ನುವಾನ್​ ತುಷಾರ (4.80 ಕೋಟಿ), ಆಂಶುಲ್​ ಕಂಬೋಜ್​ (20 ಲಕ್ಷ), ನಮನ್​ ಧೀರ್​ (20 ಲಕ್ಷ), ಶಿವಾಲಿಕ್​ ಶರ್ಮ (20 ಲಕ್ಷ) 8 ಆಟಗಾರರನ್ನು ಖರೀದಿಸುವ ಮೂಲಕ ಖಾತೆಯಲ್ಲಿ 1.05 ಕೋಟಿ ರೂಪಾಯಿ ಮೊತ್ತವನ್ನು ಉಳಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net