ಎರಡು ದಶಕಗಳ ಸಂಭ್ರಮ: ‘ಎಲ್ಲರಿಗೂ ಆರೋಗ್ಯ’ ಧ್ಯೇಯದೊಂದಿಗೆ 20ನೇ ಬೆಂಗಳೂರು ವಾಕಥಾನ್

ವಿಶೇಷಚೇತನರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ‘ಸಮರ್ಥನಂ ವಿಶೇಷಚೇತನರ ಸಂಸ್ಥೆ’ಯು ‘ಓಪನ್‌ಟೆಕ್ಸ್ಟ್’ ಶೀರ್ಷಿಕೆ ಪ್ರಾಯೋಜಕತ್ವದೊಂದಿಗೆ ಹಮ್ಮಿಕೊಂಡಿರುವ 20ನೇ ಆವೃತ್ತಿಯ ‘ಓಪನ್‌ಟೆಕ್ಸ್ಟ್ ಪ್ರೆಸೆಂಟ್ಸ್ ಬೆಂಗಳೂರು ವಾಕಥಾನ್’ ನವೆಂಬರ್ 28ರಂದು ನಗರದ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ನಡೆಯಲಿದೆ. ಗುರುವಾರ ಇಲ್ಲಿನ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅಧಿಕೃತವಾಗಿ ಘೋಷಿಸಲಾಯಿತು. ಈ ಐತಿಹಾಸಿಕ 20ನೇ ಆವೃತ್ತಿಯನ್ನು “ಎಲ್ಲರಿಗೂ ಆರೋಗ್ಯ” ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿದೆ.
ಬೆಂಗಳೂರು ವಾಕಥಾನ್ ಅಧಿಕೃತ ಜೆರ್ಸಿ ಬಿಡುಗಡೆ
ಬೆಂಗಳೂರು ವಾಕಥಾನ್ ಅಧಿಕೃತ ಜೆರ್ಸಿ ಬಿಡುಗಡೆಏಜೆನ್ಸಿ
Published on: 

ಬೆಂಗಳೂರು: ವಿಶೇಷಚೇತನರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ‘ಸಮರ್ಥನಂ ವಿಶೇಷಚೇತನರ ಸಂಸ್ಥೆ’ಯು ‘ಓಪನ್‌ಟೆಕ್ಸ್ಟ್’ ಶೀರ್ಷಿಕೆ ಪ್ರಾಯೋಜಕತ್ವದೊಂದಿಗೆ ಹಮ್ಮಿಕೊಂಡಿರುವ 20ನೇ ಆವೃತ್ತಿಯ ‘ಓಪನ್‌ಟೆಕ್ಸ್ಟ್ ಪ್ರೆಸೆಂಟ್ಸ್ ಬೆಂಗಳೂರು ವಾಕಥಾನ್’ ನವೆಂಬರ್ 28ರಂದು ನಗರದ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಮೈದಾನದಲ್ಲಿ ನಡೆಯಲಿದೆ. ಗುರುವಾರ ಇಲ್ಲಿನ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಅಧಿಕೃತವಾಗಿ ಘೋಷಿಸಲಾಯಿತು. ಈ ಐತಿಹಾಸಿಕ 20ನೇ ಆವೃತ್ತಿಯನ್ನು “ಎಲ್ಲರಿಗೂ ಆರೋಗ್ಯ” ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿದೆ.

ಡಿಸೆಂಬರ್ 3ರಂದು ಆಚರಿಸಲಾಗುವ ‘ವಿಶ್ವ ವಿಶೇಷಚೇತನರ ದಿನ’ದ ಅಂಗವಾಗಿ ಪ್ರತಿ ವರ್ಷ ಈ ಬೆಂಗಳೂರು ವಾಕಥಾನ್ ಆಯೋಜಿಸಲಾಗುತ್ತಿದೆ. ವಿಶೇಷಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು, ಅವರಿಗೆ ಎಲ್ಲೆಡೆ ಸುಗಮ ಓಡಾಟದ ವ್ಯವಸ್ಥೆ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇಂದು ಇದೊಂದು ಪ್ರಮುಖ ಸಾರ್ವಜನಿಕ ಆಂದೋಲನವಾಗಿ ಬೆಳೆದಿದೆ. ಎಲ್ಲಾ ಸಾಮರ್ಥ್ಯದ ಜನರಿಗೂ ಸುಲಭವಾಗಿ ಹೆಲ್ತ್‌ಕೇರ್ ಸೌಲಭ್ಯ, ಸಮಗ್ರ ಯೋಗಕ್ಷೇಮ ಮತ್ತು ಆರೋಗ್ಯ ಸೇವೆಗಳಲ್ಲಿ ಸಮಾನ ಅವಕಾಶ ಸಿಗಬೇಕು ಎಂಬ ಮಹತ್ವದ ಸಂದೇಶವನ್ನು ಈ ಬಾರಿಯ ‘ಎಲ್ಲರಿಗೂ ಆರೋಗ್ಯ’ ಧ್ಯೇಯವು ಸಾರುತ್ತಿದೆ.

ಎರಡು ದಶಕಗಳ ಯಶಸ್ವಿ ಪಯಣವನ್ನು ಸಂಭ್ರಮಿಸುತ್ತಿರುವ ಈ 20ನೇ ಬೆಂಗಳೂರು ವಾಕಥಾನ್; ಸಾರ್ವಜನಿಕರು, ಕಾರ್ಪೊರೇಟ್ ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಘಟನೆಗಳನ್ನು ಒಂದೇ ವೇದಿಕೆಯಡಿ ತರುವ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಆ ಮೂಲಕ ಆರೋಗ್ಯಕರ ಹಾಗೂ ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಾಣದತ್ತ ಸಾಮೂಹಿಕ ಹೆಜ್ಜೆ ಇಡಲು ಇದು ಪ್ರೇರಣೆ ನೀಡುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮರ್ಥನಂ ವಿಶೇಷಚೇತನರ ಸಂಸ್ಥೆಯ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಡಾ. ಮಹಾಂತೇಶ್ ಜಿ. ಕಿವಡಸಣ್ಣವರ್ ಮತ್ತು ಓಪನ್‌ಟೆಕ್ಸ್ಟ್‌ನ ಕಾರ್ಪೊರೇಟ್ ಸಿಟಿಜನ್‌ಶಿಪ್ ವಿಭಾಗದ ಉಪಾಧ್ಯಕ್ಷೆ ಜೂಲಿ ಮಿಲ್ಲಾರ್ಡ್ ಮಾತನಾಡಿದರು. ಇದೇ ವೇಳೆ ಒಗ್ಗಟ್ಟು, ಎಲ್ಲರನ್ನೂ ಒಳಗೊಳ್ಳುವಿಕೆ ಹಾಗೂ ಆಂದೋಲನದ ಸಾಮೂಹಿಕ ಸ್ಫೂರ್ತಿಯನ್ನು ಸಾರುವ ವಾಕಥಾನ್‌ನ ಅಧಿಕೃತ ಟಿ-ಶರ್ಟ್ ಬಿಡುಗಡೆಗೊಳಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಮಹಾಂತೇಶ್ ಜಿ. ಕಿವಡಸಣ್ಣವರ್, ‘‘ಕಳೆದ ಎರಡು ದಶಕಗಳಲ್ಲಿ ಬೆಂಗಳೂರು ವಾಕಥಾನ್ ಕೇವಲ ವಾರ್ಷಿಕ ಕಾರ್ಯಕ್ರಮವಾಗಿ ಉಳಿಯದೆ, ಸಾಮಾಜಿಕ ಬದಲಾವಣೆ ಮತ್ತು ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಸಲು ಜನರನ್ನು ಒಗ್ಗೂಡಿಸುವ ಬೃಹತ್ ಆಂದೋಲನವಾಗಿ ಬೆಳೆದಿದೆ. ವ್ಯಕ್ತಿಯ ಸಾಮರ್ಥ್ಯ ಏನೇ ಇರಲಿ, ಪ್ರತಿಯೊಬ್ಬರಿಗೂ ಸುಲಭವಾಗಿ ಸಿಗುವ ಹೆಲ್ತ್‌ಕೇರ್ ಹಾಗೂ ಉತ್ತಮ ಆರೋಗ್ಯದ ಮಹತ್ವವನ್ನು ಸಾರುವುದು ಈ ಬಾರಿಯ ‘ಎಲ್ಲರಿಗೂ ಆರೋಗ್ಯ’ ಧ್ಯೇಯದ ಮುಖ್ಯ ಗುರಿಯಾಗಿದೆ. ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಾಣದ ನಮ್ಮ ಈ ಪಯಣದಲ್ಲಿ ಕೈಜೋಡಿಸಿರುವ ಓಪನ್‌ಟೆಕ್ಸ್ಟ್ ಸೇರಿದಂತೆ ಎಲ್ಲಾ ಪಾಲುದಾರರು ಹಾಗೂ ಬೆಂಬಲಿಗರಿಗೆ ನಾವು ಕೃತಜ್ಞರಾಗಿದ್ದೇವೆ’’ ಎಂದು ಹೇಳಿದರು.

ಓಪನ್‌ಟೆಕ್ಸ್ಟ್ ಕಾರ್ಪೊರೇಟ್ ಸಿಟಿಜನ್‌ಶಿಪ್ ವಿಭಾಗದ ಉಪಾಧ್ಯಕ್ಷೆ ಜೂಲಿ ಮಿಲ್ಲಾರ್ಡ್ ಮಾತನಾಡಿ, ‘‘ಎಲ್ಲರನ್ನೂ ಒಳಗೊಳ್ಳುವ ಜಗತ್ತನ್ನು ನಿರ್ಮಿಸುವ ಶಕ್ತಿ ತಂತ್ರಜ್ಞಾನಕ್ಕಿದೆ ಎಂಬುದು ಓಪನ್‌ಟೆಕ್ಸ್ಟ್‌ನ ನಂಬಿಕೆ. ಆದರೆ ಆರಂಭದಿಂದಲೇ ಎಲ್ಲರಿಗೂ ಸುಲಭವಾಗಿ ಬಳಸಲು ಸಾಧ್ಯವಾಗುವಂತಹ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದಾಗ ಮಾತ್ರ ನಿಜವಾದ ಒಳಗೊಳ್ಳುವಿಕೆ ಆರಂಭವಾಗುತ್ತದೆ. ಇದರಿಂದ ಎಲ್ಲಾ ಸಾಮರ್ಥ್ಯದ ಜನರೂ ಸಕ್ರಿಯವಾಗಿ ಭಾಗವಹಿಸಲು, ಸಂಪರ್ಕ ಸಾಧಿಸಲು ಮತ್ತು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ. ಈ ತತ್ವವು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗದೆ ನಾವು ಸೇವೆ ಸಲ್ಲಿಸುವ ಸಮುದಾಯಗಳಿಗೂ ಅನ್ವಯಿಸುತ್ತದೆ’’ ಎಂದರು.

‘‘ಸುಗಮ ವ್ಯವಸ್ಥೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ಸ್ಪಷ್ಟ ಉದ್ದೇಶದಿಂದ ಅಳವಡಿಸಿಕೊಂಡಾಗ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಸಮರ್ಥನಂ ಸಂಸ್ಥೆಯ ಕೆಲಸಗಳು ಸಾಬೀತುಪಡಿಸಿವೆ; ಈ ವಾಕಥಾನ್ ಆ ಬದ್ಧತೆಯನ್ನು ಸಾಕಾರಗೊಳಿಸುತ್ತಿದೆ. ಇದರ 20ನೇ ಆವೃತ್ತಿಯನ್ನು ಬೆಂಬಲಿಸಲು ಮತ್ತು ಎಲ್ಲರಿಗೂ ಅವಕಾಶಗಳು ಲಭ್ಯವಾಗುವ ಭವಿಷ್ಯವನ್ನು ಕಟ್ಟಲು ಓಪನ್‌ಟೆಕ್ಸ್ಟ್ ಹೆಮ್ಮೆಪಡುತ್ತದೆ’’ ಎಂದು ಅವರು ವಿವರಿಸಿದರು

ಕಾರ್ಯಕ್ರಮದ ವಿವರ:

ಕಾರ್ಯಕ್ರಮ: ಓಪನ್‌ಟೆಕ್ಸ್ಟ್ ಪ್ರೆಸೆಂಟ್ಸ್ 20ನೇ ಬೆಂಗಳೂರು ವಾಕಥಾನ್

ಧ್ಯೇಯವಾಕ್ಯ: ಎಲ್ಲರಿಗೂ ಆರೋಗ್ಯ (Health for All)

ದಿನಾಂಕ: ನವೆಂಬರ್ 28, 2026

ಸಮಯ: ಬೆಳಿಗ್ಗೆ 9 ಗಂಟೆಯಿಂದ

ಸ್ಥಳ: ಕಿತ್ತೂರು ರಾಣಿ ಚೆನ್ನಮ್ಮ ಮೈದಾನ, ಜಯನಗರ, ಬೆಂಗಳೂರು