

ಬೆಂಗಳೂರು: ಅಧಿಧಿಕಾರಯುತ ಪ್ರದರ್ಶನ ನೀಡಿದ ಹೊಯ್ಸಳ ಎಂಪೈರ್ ಹಾಸನ ಮತ್ತು ಉತ್ತರ ಕನ್ನಡ ಸ್ಟಾಲಿಯಾನ್ಸ್ ತಂಡಗಳು ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್‌ನ ತಮ್ಮ ನಾಲ್ಕನೇ ಪಂದ್ಯಗಳಲ್ಲಿ ಎದುರಾಳಿ ತಂಡಗಳನ್ನು ಸೋಲಿಸಿ ಮತ್ತೆ ಜಯದ ಹಳಿಗೆ ಮರಳಿದವು.
ಈ ಮಧ್ಯೆ, ಪಂದ್ಯದ ಕೊನೆಯವರೆಗೂ ಕುತೂಹಲವನ್ನು ಹಿಡಿದಿಟ್ಟ ಪಂದ್ಯದಲ್ಲಿಒತ್ತಡವನ್ನು ಸಮರ್ಥವಾಗಿ ಮೆಟ್ಟಿನಿಂತ ಬಾಗಲಕೋಟೆ ತಂಡ 37-36 ಅಂಕಗಳ ಅಂತರದಿಂದ ವಿಜಯಪುರ ಲಯನ್ಸ್ ವಿರುದ್ಧ ರೋಚಕ ಜಯ ಗಳಿಸಿತು. ಇದರೊಂದಿಗೆ ಪೂರ್ಣ 5 ಅಂಕಗಳನ್ನು ಕಲೆಹಾಕಿದ ಚಾಲುಕ್ಯನೇನೆ ತಂಡ ಲೀಗ್‌ನಲ್ಲಿಮೂರನೇ ಜಯ ಗಳಿಸಿತು.
ಇಲ್ಲಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿಭಾನುವಾರ ನಡೆದ ಮೂರನೇ ಪಂದ್ಯದಲ್ಲಿಲಯನ್ಸ್ ಮತ್ತು ಚಾಲುಕ್ಯ ಸೇನೆ ಜಿದ್ದಾಜಿದ್ದಿನ ಹೋರಾಟ ನಡೆಸಿದವು. 3 -3, 6-6, 12-12 ಹೀಗೆ ಪಂದ್ಯದ ಕೊನೆಯವರೆಗೂ ಹೋರಾಟ ಸಾಗಿತು. ಆದರೆ ಕೊನೆಯ ಘಟ್ಟದಲ್ಲಿಬಾಗಲಕೋಟೆ ಕೇವಲ 1 ಅಂಕದಿಂದ ಜಯಭೇರಿ ಬಾರಿಸಿ ಸಂಭ್ರಮಿಸಿತು.
ಇದಕ್ಕೂ ಮುನ್ನ ನಡೆದ ಮೊದಲೆರಡು ಪಂದ್ಯಗಳಲ್ಲಿ ಹಾಸನ, ಉತ್ತರ ಕನ್ನಡ ಪೂರ್ಣ ಅಂಕ ಸಂಪಾದಿಸಿದವು. ತಮ್ಮ ಮೂರನೇ ಪಂದ್ಯಗಳಲ್ಲಿಸ್ಥಿರತೆ ಕಾಯ್ದುಕೊಳ್ಳಲು ವಿಫಲಗೊಂಡು ಸೋಲಿನ ರುಚಿ ಅನುಭವಿಸಿದ್ದ ಹೊಯ್ಸಳ ಎಂಪೈರ್ ಹಾಸನ ಮತ್ತು ಉತ್ತರ ಕನ್ನಡ ಸ್ಟಾಲಿಯಾನ್ಸ್ ತಂಡಗಳು ತಮ್ಮ ನಾಲ್ಕನೇ ಪಂದ್ಯದಲ್ಲಿಗೆಲುವಿನ ಲಯಕ್ಕೆ ಮರಳಿ, ಪೂರ್ಣ ಐದು ಅಂಕಗಳನ್ನು ಕಲೆಹಾಕಿದವು. ಇದರ ಪರಿಣಾಮ ಹೊಯ್ಸಳ ಮತ್ತು ಸ್ಟಾಲಿಯಾನ್ಸ್ ತಲಾ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿಮೊದಲೆರಡು ಸ್ಥಾನದಲ್ಲಿದ್ದವು.
ದಿನದ ಮೊದಲ ಪಂದ್ಯದಲ್ಲಿಉತ್ತರ ಕನ್ನಡ ತಂಡ 33-27 ಅಂಕಗಳ ಅಂತರದಿಂದ ಮಂಗಳೂರು ಇಂಡಿಯನ್ಸ್ ತಂಡವನ್ನು ಪರಾಭವಗೊಳಿಸಿತು. ಪಂದ್ಯದ ಮೊದಲಾರ್ಧಕ್ಕೆ 19-15ರಲ್ಲಿಅಂತರ ಕಾಯ್ದುಕೊಂಡ ಸ್ಟಾಲಿಯಾನ್ಸ್, ದ್ವಿತೀಯಾರ್ಧದಲ್ಲೂಅದೇ ಲಯವನ್ನು ಕಾಯ್ದುಕೊಂಡಿತು. 5 ಬೋನಸ್ ಹಾಗೂ ಎರಡು ಆಲೌಟ್ ಪಾಯಿಂಟ್ಸ್ ಗಿಟ್ಟಿಸಿದ ಉತ್ತರ ಕನ್ನಡ ತಂಡ ದ್ವಿತೀಯಾರ್ಧದಲ್ಲಿಅಧಿಕಾರಯುತ ಪ್ರದರ್ಶನ ನೀಡಿತು. ಅತ್ತ ಮಂಗಳೂರು ತಂಡ ಸತತ ಮೂರನೇ ಸೋಲಿಗೆ ಒಳಗಾಯಿತು.
ಎಂಪೈರ್ ಆರ್ಭಟಕ್ಕೆ ತಣ್ಣಗಾದ ಬಿಸನ್ಸ್
ದಿನದ ಎರಡನೇ ಪಂದ್ಯದಲ್ಲಿಹೊಯ್ಸಳ ಎಂಪೈರ್ ತಂಡ 13 ಅಂಕಗಳ ಅಂತರದಿಂದ ಬೆಂಗಳೂರು ಬಿಸನ್ಸ್ ತಂಡವನ್ನು ಬಗ್ಗು ಪರಾಭವಗೊಳಿಸಿತು. ವಿರಾಮಕ್ಕೆ ಮೊದಲು 10-8ರಲ್ಲಿಮುನ್ನಡೆ ಕಂಡುಕೊಂಡ ಹಾಸನ, ದ್ವಿತೀಯಾರ್ಧದಲ್ಲಿಸಂಪೂರ್ಣ ಪ್ರಾಬಲ್ಯ ಮೆರೆಯಿತು. ಎರಡು ಬಾರಿ ಬೆಂಗಳೂರು ತಂಡವನ್ನು ಆಲೌಟ್ ಮಾಡಿದ ಹಾಸನ ತಂಡದ ಆಟಗಾರರು ಸೂಪರ್ ಟ್ಯಾಕಲ್‌ನಲ್ಲೂಮಿಂಚಿದರು. ಮೊದಲಾರ್ಧದಲ್ಲಿಕೇವಲ 2 ಅಂಕಗಳ ಹಿನ್ನಡೆಯಲ್ಲಿದ್ದ ಬೆಂಗಳೂರು ತಂಡ ದ್ವಿತೀಯಾರ್ಧದಲ್ಲಿಸಂಘಟಿತ ಹೋರಾಟ ನೀಡಲು ಹೆಣಗಾಡಿತು. ರೇಡಿಂಗ್ ಮತ್ತು ಟ್ಯಾಕಲ್‌ನಲ್ಲಿಸಮನ್ವಯತೆ ಕೊರತೆ ಎದುರಿಸಿದ್ದು ತಂಡದ ಸೋಲಿಗೆ ಪ್ರಮುಖ ಕಾರಣಾಯಿತು. ಹೀಗಾಗಿ ಸತತನೇ ಪಂದ್ಯದಲ್ಲೂಬೆಂಗಳೂರು ತಂಡ ಸೋತು ಖಾತೆ ತೆರೆಯಲು ವಿಫಲಗೊಂಡಿತು.
ಅಕ್ಟೋಬರ್ 5ರ ಪಂದ್ಯಗಳು:
ಹೊಯ್ಸಳ ಎಂಪೈರ್ ಹಾಸನ ಮತ್ತು ವಿಜಯಪುರ ಲಯನ್ಸ್ (ಸಂಜೆ 6ಕ್ಕೆ), ಬೆಳಗಾವಿ ಬುಲ್ಸ್ ಮತ್ತು ಮಂಗಳೂರು ಇಂಡಿಯನ್ಸ್ (ಸಂಜೆ 7ಕ್ಕೆ ), ಬೆಂಗಳೂರು ಬಿಸನ್ಸ್ ಮತ್ತು ಮೈಸೂರು ಮಹಾಸೇನೆ (ರಾತ್ರಿ 8ಕ್ಕೆ) ಮತ್ತು ಚಾಲುಕ್ಯಸೇನೆ ಬಾಗಲಕೋಟೆ ಮತ್ತು ಉತ್ತರ ಕನ್ನಡ ಸ್ಟಾಲಿಯಾನ್ಸ್(ರಾತ್ರಿ 10ಕ್ಕೆ).