Asian Para Games: ಪ್ರಸಕ್ತ ಆತಿಥೇಯ ಜಪಾನ್ನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200 ಮೀಟರ್ ಟಿ35 ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಎರಡನೇ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಮಂಗಳವಾರ ನಡೆದ ಟಿ35 ಸ್ಪರ್ಧೆಯಲ್ಲಿ ಅವರು 29.53 ಸೆಕೆಂಡುಗಳಲ್ಲಿ ಮುಗಿಸಿದರು. ಚೀನಾದ ಝೌ ಕ್ಸಿಯಾ 28.03 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರು. 2022ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇದೇ ಸ್ಪರ್ಧೆಯಲ್ಲಿ 32.19 ಸೆಕೆಂಡ್‌ಗಳಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಪ್ರೀತಿ, ಈ ಬಾರಿ ತಮ್ಮ ಅಮೋಘ ಪ್ರದರ್ಶನದಿಂದ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
ಕಳೆದ ಬಾರಿಗಿಂತ 2.66 ಸೆಕೆಂಡ್‌ಗಳ ಕಡಿಮೆ ಅವಧಿಯಲ್ಲಿ ಮುಗಿಸಿ ಇದೀಗ ಬೆಳ್ಳಿ ಪದಕವನ್ನು ಗೆದ್ದು ಬೀಗಿದ್ದಾರೆ. ಈಜುಪಟು ನಿರಂಜನ್ ಮುಕುಂದನ್ ಕೂಡ ಭಾರತದ ಪದಕ ಸಾಧನೆಗೆ ಕೊಡುಗೆ ನೀಡಿದ್ದು, ಪುರುಷರ 200 ಮೀಟರ್ ವೈಯಕ್ತಿಕ ಮೆಡ್ಲೆ SM7 ವಿಭಾಗದಲ್ಲಿ ಕಂಚು ಗೆದ್ದಿದ್ದಾರೆ. ಇನ್ನು, ಸಿಮ್ರಾನ್ ಶರ್ಮಾ ಮತ್ತು ತೇಜಲ್ಬೆನ್ ದಾಮೋರ್ ಕೂಡ ಟ್ರ್ಯಾಕ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು.
ಮಹಿಳೆಯರ ಟಿ12 ವಿಭಾಗದಲ್ಲಿ ಸಿಮ್ರಾನ್ 24.80 ಸೆಕೆಂಡ್‌ಗಳಲ್ಲಿ ಮೊದಲ ಸ್ಥಾನ ಗಳಿಸಿ ಚಿನ್ನ ಗೆದ್ದರೆ, ತೇಜಲ್‌ಬೆನ್ 25.23 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚು ಗೆದ್ದರು. ಈ ಮೂಲಕ 5ನೇ ಏಷ್ಯನ್ ಪ್ಯಾರಾ ಗೇಮ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೆ ಭಾರತದ ಒಟ್ಟು ಪದಕ ಗಳಿಕೆ 30ಕ್ಕೆ ತಲುಪಿದೆ. ಭಾರತ ಇದುವರೆಗೆ ಏಳು ಚಿನ್ನ, 10 ಬೆಳ್ಳಿ ಹಾಗೂ 13 ಕಂಚು ಪದಕಗಳನ್ನು ಬಾಚಿಕೊಂಡಿದೆ,(ಏಜೆನ್ಸೀಸ್).