ಭಾರತ 114 ಪದಕ ಗೆಲುವಿನ ಇತಿಹಾಸ: ಏಷ್ಯನ್​ ಪ್ಯಾರಾ ಗೇಮ್ಸ್​ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಸಾಧನೆ

ಕೋಟಾ ಸ್ಥಾನ ಜತೆಗೆ ಕ್ರೀಡಾಸ್ಪರ್ಧಿಗಳ ಸಂಖ್ಯೆಯೂ ಕಡಿತಗೊಳಿಸಿದ ಸವಾಲಿನ ನಡುವೆ ನಿರೀಕ್ಷೆಗೂ ಮೀರಿದ ನಿರ್ವಹಣೆ ತೋರಿದ ಭಾರತದ ಪ್ಯಾರಾ ಕ್ರೀಡಾಪಟುಗಳು ಐದನೇ ಆವೃತ್ತಿಯ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ ಸಾರ್ವಕಾಲಿಕ ಶ್ರೇಷ್ಠ 114 ಪದಕ ಗೆಲುವಿನ ಹೊಸ ದಾಖಲೆ ಸೃಷ್ಟಿಸಿದ್ದಾರೆ. 2023ರ ಆವೃತ್ತಿಯಲ್ಲಿ 108 ಪದಕ ಜಯಿಸಿದ್ದು, ಹಿಂದಿನ ಅತ್ಯುತ್ತಮ ಸಾಧನೆ ಆಗಿದೆ.
ತುಳಸಿಮತಿ- ಮಾನಸಿ ಜೋಶಿ
ತುಳಸಿಮತಿ- ಮಾನಸಿ ಜೋಶಿ
Published on: 

ಐಚಿ-ನಗೋಯಾ: ಕೋಟಾ ಸ್ಥಾನ ಜತೆಗೆ ಕ್ರೀಡಾಸ್ಪರ್ಧಿಗಳ ಸಂಖ್ಯೆಯೂ ಕಡಿತಗೊಳಿಸಿದ ಸವಾಲಿನ ನಡುವೆ ನಿರೀಕ್ಷೆಗೂ ಮೀರಿದ ನಿರ್ವಹಣೆ ತೋರಿದ ಭಾರತದ ಪ್ಯಾರಾ ಕ್ರೀಡಾಪಟುಗಳು ಐದನೇ ಆವೃತ್ತಿಯ ಪ್ಯಾರಾ ಏಷ್ಯನ್​ ಗೇಮ್ಸ್​ನಲ್ಲಿ ಸಾರ್ವಕಾಲಿಕ ಶ್ರೇಷ್ಠ 114 ಪದಕ ಗೆಲುವಿನ ಹೊಸ ದಾಖಲೆ ಸೃಷ್ಟಿಸಿದ್ದಾರೆ. 2023ರ ಆವೃತ್ತಿಯಲ್ಲಿ 108 ಪದಕ ಜಯಿಸಿದ್ದು, ಹಿಂದಿನ ಅತ್ಯುತ್ತಮ ಸಾಧನೆ ಆಗಿದೆ.

ಪದಕ ಸ್ಪರ್ಧೆಯ ಐದನೇ ದಿನವಾದ ಶುಕ್ರವಾರ ಭಾರತದ ಅಂಗವಿಕಲ ಕ್ರೀಡಾಪಟುಗಳು ಒಟ್ಟು 26 ಪದಕ ಬಾಚಿಕೊಳ್ಳುವ ಮೂಲಕ ಅಭಿಯಾನಗೊಳಿಸಿದ್ದು, ಇದರಲ್ಲಿ 9 ಸ್ವರ್ಣ, 8 ರಜತ ಹಾಗೂ 8 ಕಂಚು ಸೇರಿವೆ. ಈ ಮೂಲಕ ಭಾರತ ಸತತ ಎರಡನೇ ಬಾರಿಗೆ ಆವೃತ್ತಿಯೊಂದರಲ್ಲಿ 100ಕ್ಕಿಂತ ಅಧಿಕ ಪದಕ ಗೆದ್ದ ಸಾಧನೆಯನ್ನೂ ಮಾಡಿತು. ಭಾರತ ಇದುವರೆಗೆ ಗೆದ್ದಿರುವ ಒಟ್ಟು 114 ಪದಕಗಳಲ್ಲಿ 30 ಚಿನ್ನ, 35 ಬೆಳ್ಳಿ ಮತ್ತು 49 ಕಂಚಿನ ಪದಕಗಳಾಗಿವೆ.

112 ಪುರುಷ, 156 ಮಹಿಳೆಯರ ಸಹಿತ ಒಟ್ಟು 168 ಅಂಗವಿಕಲ ಕ್ರೀಡಾಪಟುಗಳ ಬೃಹತ್​ ತಂಡದೊಂದಿಗೆ ಕಣಕ್ಕಿಳಿಯಳಿದಿದ್ದ ಭಾರತ ಪದಕ ಪಟ್ಟಿಯಲ್ಲಿ ಸದ್ಯ 4ನೇ ಸ್ಥಾನದಲ್ಲಿದ್ದು, ಅಗ್ರ 5ರೊಳಗೆ ಸ್ಥಾನ ಖಾತ್ರಿ ಎನಿಸಿದೆ. ಶನಿವಾರ ಇನ್ನೂ ಕೆಲ ವಿಭಾಗಗಳ ೈನಲ್​ ನಡೆಯಲಿದ್ದು, ಭಾರತದ ಯಾವುದೇ ಸ್ಪರ್ಧಿಗಳು ಅರ್ಹತೆ ಪಡೆದಿಲ್ಲ. ಸದ್ಯ 5ನೇ ಸ್ಥಾನದಲ್ಲಿರುವ ದ.ಕೊರಿಯಾ ಕೂಟದ ಅಂತಿಮ ದಿನ ಕನಿಷ್ಠ 2 ಚಿನ್ನ ಗೆದ್ದರೂ, 4ನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ.

ಎಫ್​​51 ಕ್ಲಬ್​ ಥ್ರೋನಲ್ಲಿ ಪ್ರಣವ್​ ಸೂರ್ಮ (32.87 ಮೀಟರ್​) ನೂತನ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಧರಮ್​ಬೀರ್​ ನೈನಾ (27.71 ಮೀ) ಕಂಚಿಗೆ ಕೊರಳೊಡ್ಡಿದರು.

ಪುರುಷರ ಎಫ್​​​37/38 ಜಾವೆಲಿನ್​ ಥ್ರೋನಲ್ಲಿ ಹೆನಿ 60.49 ಮೀಟರ್​ ದೂರದ ಎಸೆತದೊಂದಿಗೆ ನೂತನ ವಿಶ್ವ ದಾಖಲೆ ಸಹಿತ ಚಿನ್ನ ಗೆದ್ದರು. ಎಫ್​​​40/41 ಫೈನಲ್​ನಲ್ಲಿ ನವದೀಪ್​ ಸಿಂಗ್​ (42.55 ಮೀ), 200 ಮೀಟರ್​ ಓಟ ಎಫ್​​​ 37 ವಿಭಾಗದಲ್ಲಿ ರಾಕೇಶ್​ ಭಾಯಿ ಭಟ್​ (23.64ಸೆ) ಹಾಗೂ 100 ಮೀಟರ್​ ಓಟ ಟಿ44 ವಿಭಾಗದಲ್ಲಿ ಸಂದೀಪ್​ (11.67 ಸೆ) ಕಂಚು ಜಯಿಸಿದರು.

ಸುಮಿತ್​ ಮತ್ತೆ ಚಿನ್ನದ ಎಸೆತ

ಸುಮಿತ್​ ಆಂಟಿಲ್​ ಎಫ್​​42/44/61&64 ವಿಭಾಗದ ಜಾವೆಲಿನ್​ ಥ್ರೋನಲ್ಲಿ ಚಾಂಪಿಯನ್​ಪಟ್ಟ ಉಳಿಸಿಕೊಂಡರು. ವಿಶ್ವ ದಾಖಲೆ ವೀರ 28 ವರ್ಷದ ಸುಮಿತ್​ 74.82 ದೂರದ ಎಸೆತದೊಂದಿಗೆ ಚಿನ್ನ ಗೆದ್ದರು.ಮಹೇಂದ್ರ ಗುಜ್ಜರ್​ (59.03 ಮೀ) ರಜತ, ಸಂದೀಪ್​ ಸಂಜಯ್​ ಸಾಗರ್​ (64.88 ಮೀ)ಕಂಚಿ ಜಯಿಸುವ ಮೂಲಕ ಭಾರತ ಪೋಡಿಯಂ ಕ್ಲೀನ್​ಸ್ವೀಪ್​ ಮಾಡಿತು. ಪ್ಯಾರಾ ಶೂಟಿಂಗ್​ ಜತೆಗೆ ಅಥ್ಲೆಟಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಎರಡು ವಿಶ್ವದಾಖಲೆ ಸಹಿತ ಚಿನ್ನ ಗೆದ್ದರು. 400 ಮೀಟರ್​ ಟಿ64 ವಿಭಾಗದಲ್ಲಿ ಸಂದೀಪ್​ 52.28 ಸೆಕೆಂಡ್​ಗಳಲ್ಲಿ ಕ್ರಮಿಸಿ ನೂತನ ವಿಶ್ವದಾಖಲೆ ರಚಿಸಿದರು. ಭಾರತದವರೇ ಆದ ಅಜಯ್​ ಕುಮಾರ್​ (53.61 ಸೆ)ಕಂಚು ಗೆದ್ದರು. 1,500 ಮೀಟರ್​ ಓಟದಲ್ಲಿ ಪ್ರಮೋದ್​, ಮಹಿಳೆಯರ ಎಫ್​​​47 ಲಾಂಗ್​ ಜಂಪ್​ನಲ್ಲಿ ನಿಮಿಷ ಚಕ್ಕುಂಗಲ್ಪರಂಬಿಲ್​ ಬೆಳ್ಳಿ ಜಯಿಸಿದರು.

ಜೆಹಾನ್​-ಶುಭಂಗೆ ಕಂಚು

ಪುರುಷರ ಡಬಲ್ಸ್​ ಎಂಡಿ 4 ವಿಭಾಗದಲ್ಲಿ ಭಾರತದ ಜೆಹಾನ್​ ದೊರಾಬ್​ ಮದನ್​ ಹಾಗೂ ಶುಭಂ ವಾಧ್ವಾ ಕಂಚಿನ ಪದಕ ಗೆದ್ದುಕೊಂಡರು. ಎ ಗುಂಪಿನ ಅಂತಿಮ ಪಂದ್ಯದಲ್ಲಿ ಜೆಹಾನ್​&ಶುಭಂ ಜೋಡಿ 0&3 ರಿಂದ ದ.ಕೊರಿಯಾದ ಪಾಕ್​ ಜಿಂಚಿಯೋಲ್​&ಕಿಮ್​ ಕ್ಯುಂಗ್​ ಹ್ಯುನ್​ ಎದುರು ಸೋಲು ಕಂಡಿತು. ಇದರ ಹೊರತಾಗಿಯೂ ಗುಂಪಿನ ಅಗ್ರ4ರಲ್ಲಿ ಸ್ಥಾನ ಖಾತ್ರಿಪಡಿಸಿಕೊಂಡ ಭಾರತೀಯ ಜೋಡಿ ಕಂಚಿಗೆ ಕೊರಳೊಡ್ಡಿತು.

ನಿತೀಶ್​ ಶೈನ್​

ಪ್ಯಾರಾ ಬ್ಯಾಡ್ಮಿಂಟನ್​ನಲ್ಲಿ ಭಾರತಕ್ಕೆ ಮೂರು ಚಿನ್ನದ ಪದಕ ಒಲಿದವು. ಪ್ಯಾರಿಸ್​ ಪ್ಯಾರಾಲಿಂಪಿಕ್​ ಚಾಂಪಿಯನ್​ ನಿತೀಶ್​ ಕುಮಾರ್​ ಪುರುಷರ ಸಿಂಗಲ್ಸ್​ ಎಸ್​ಎಲ್​ 3 ವಿಭಾಗದಲ್ಲಿ ದೇಶಬಾಂಧವ ಪ್ರಮೋದ್​ ಭಗತ್​ರನ್ನು 21&18, 21&16 ರಿಂದ ಮಣಿಸಿ ಚಾಂಪಿಯನ್​ ಪಟ್ಟ ಉಳಿಸಿಕೊಂಡರು. ಕಳೆದ ಆವೃತ್ತಿಯಲ್ಲೂ ಚಿನ್ನ ಜಯಿಸಿದ್ದ 31 ವರ್ಷದ ನಿತೀಶ್​ ಮಿಶ್ರ ಡಬಲ್ಸ್​ನಲ್ಲಿ ತುಳಸಿಮತಿ ಮುರುಗೇಸನ್​ ಜತೆಗೂಡಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಎಸ್​ಎಲ್​4ನಲ್ಲಿ ನವೀನ್​ 21&9, 21&17 ರಿಂದ ಇಂಡೋನೇಷ್ಯಾದ ಫ್ರಿಡಿ ಸೆಟಿವಾನ್​ ಎದುರು ಗೆದ್ದು ಬಂಗಾರ ಬಾಚಿಕೊಂಡರು.

24 ವರ್ಷದ ತುಳಸಿಮತಿ ಮಹಿಳಾ ಡಬಲ್ಸ್​ ಎಸ್​ಎಲ್​3&ಎಸ್​ಯು5 ವಿಭಾಗದಲ್ಲಿ ಮಾನಸಿ ಜೋಶಿ ಜತೆಯಾಗಿ ಚಿನ್ನ ಗೆದ್ದರು.

ಮೋನಾಗೆ ಪ್ಯಾರಾಲಿಂಪಿಕ್​ ಅರ್ಹತೆ

ಪ್ಯಾರಾ ಶೂಟರ್​ ಮೋನಾ ಅಗರ್ವಾಲ್​ ಮಹಿಳೆಯರ 50 ಮೀಟರ್​ ರೈಲ್​ 3 ಪೊಸಿಷನ್​ ಎಸ್​ಎಚ್​1 ಸ್ಪರ್ಧೆಯಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದರು. ೈನಲ್​ನಲ್ಲಿ 357.5 ಅಂಕ ಗಳಿಸಿದ ಮೋನಾ, ಹಾಲಿ ವರ್ಷ ವಿಶ್ವಕಪ್​ನಲ್ಲಿ ಸ್ವೀಡನ್​ನ ಅನ್ನಾ ಬೆನ್ಸನ್​ (356) ರಚಿಸಿದ ವಿಶ್ವ ದಾಖಲೆಯನ್ನು ಮುರಿದರು. ಇದರೊಂದಿಗೆ 2028ರ ಪ್ಯಾರಾಲಿಂಪಿಕ್​ ಅರ್ಹತೆ ಪಡೆದ ಮೊದಲ ಭಾರತೀಯ ಶೂಟರ್​ ಎನಿಸಿದ 38 ವರ್ಷದ ಮೋನಾ, ಇದಕ್ಕೆ ಮುನ್ನ ಎಸ್​ಎಚ್​1 10 ಮೀಟರ್​ ಏರ್​ ರೈಲ್​ನಲ್ಲಿ ಕೂಟ ದಾಖಲೆಯೊಂದಿಗೆ ಸ್ವರ್ಣ ಗೆದ್ದು ಸಂಭ್ರಮಿಸಿದ್ದರು.

ಹರ್ವಿಂದರ್​-ವಿಜಯ್​ ಬಂಗಾರದ ಬಾಣ

ಪ್ಯಾರಾಲಿಂಪಿಕ್​ ಚಾಂಪಿಯನ್​ ಹರ್ವಿಂದರ್​ ಸಿಂಗ್​ ಹಾಗೂ ವಿಜಯ್​ ಸುಂದಿ ಜೋಡಿ ಪುರುಷರ ಪ್ಯಾರಾ ಆರ್ಚರಿ ರಿಕರ್ವ್​ ಡಬಲ್ಸ್​ನಲ್ಲಿ 5&1ರಿಂದ ಚೀನಾದ ಯುನ್​ ಡುವಾ&ಝಹೊ ಲಿಕ್ಸು ಜೋಡಿಯನ್ನು ಮಣಿಸಿದರು. ಮಹಿಳಾ ವಿಭಾಗದಲ್ಲಿ ಭಾವನ ಚೌಧರಿ&ಪೂಜಾ ಜತ್ಯಾನ್​ 0&6 ರಿಂದ ಚೀನಾದ ಗವೊ ಜಿಹನ್​&ವಾಂಗ್​ ಕ್ಸಿಕ್ಯುನ್​ ಎದುರು ಸೋತು ಬೆಳ್ಳಿಗೆ ಸಮಾಧಾನ ಕಂಡರು.

ಪ್ಯಾರಾ ಈಜಿನಲ್ಲಿ ಭಾರತ ನಿರೀಕ್ಷೆ ಅಧಿಕ ಪದಕ (11) ಗೆದ್ದು ಅಚ್ಚರಿ ಮೂಡಿಸಿತು. ಈಜು ಸ್ಪರ್ಧೆಯ ಕೊನೇ ದಿನ 100 ಮೀಟರ್​ ಫ್ರೀಸ್ಟೆಲ್​ ಎಸ್​11ನಲ್ಲಿ ಕಂಚು ಗೆದ್ದ 22 ವರ್ಷದ ಹಿಮಾಂಶು ನಂದಲ್​ ಹ್ಯಾಟ್ರಿಕ್​ ಪದಕ ಸಾಧನೆ ಮಾಡಿದರು. ಹುಟ್ಟಿನಿಂದಲೇ ಕುರುಡನಾಗಿರುವ ಹಿಮಾಂಶು 1 ನಿಮಿಷ 3.90 ಸೆಕೆಂಡ್​ಗಳಲ್ಲಿ ಗುರಿ ಕ್ರಮಿಸಿದರು. ಇದಕ್ಕೆ ಮುನ್ನ 400 ಮೀಟರ್​ ಫ್ರೀಸ್ಟೆಲ್​, 100 ಮೀಟರ್​ ಬ್ಯಾಕ್​ ಸ್ಟ್ರೊಕ್​ನಲ್ಲಿ ಕಂಚು ಜಯಿಸಿದ್ದರು. ರವಿ ಬುಡಿಗಿನಾ ಸಹ 2 ರಜತ, 1 ಕಂಚು ಸಹಿತ ಮೂರು ಮೆಡಲ್​ ತನ್ನದಾಗಿಸಿಕೊಂಡರು.

ಪ್ಯಾರಾ ಗೇಮ್ಸ್​ಗೆ ಇಂದು ತೆರೆ

ಏಷ್ಯನ್​ ಪ್ಯಾರಾ ಗೇಮ್ಸ್​ ಐದನೇ ಆವೃತ್ತಿಗೆ ಶನಿವಾರ ಅದ್ದೂರಿ ಸಮಾರೋಪ ಸಮಾರಂಭದೊಂದಿಗೆ ತೆರೆ ಬೀಳಲಿದೆ. ಸಮಾರಂಭದ ನಿರ್ಗಮನ ಪಥಸಂಚಲನದಲ್ಲಿ ಧ್ವಜಧಾರಿಗಳಾಗಿ ನಿಶಾದ್​ ಕುಮಾರ್​ ಹಾಗೂ ಮೋನಾ ಅಗರ್ವಾಲ್​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net