Asian Games: ಸ್ಕ್ವಾಷ್‌ನಲ್ಲಿ ಮತ್ತೆರಡು ಪದಕ ಖಾತ್ರಿ, ಅಶ್ಮಿತಾ 'ಬ್ಯಾಡ್' ಡೇ

ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಸೆಮಿಫೈನಲ್‌ಗೇರಿದ್ದು, ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿಕೊಂಡಿವೆ.
Asmita Dey
Asmita Dey
Published on: 

ನಗೋಯಾ: ಸ್ಕ್ವಾಷ್ ಸ್ಪರ್ಧೆಯಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಸೆಮಿಫೈನಲ್‌ಗೇರಿದ್ದು, ಕನಿಷ್ಠ ಕಂಚಿನ ಪದಕ ಖಾತ್ರಿಪಡಿಸಿಕೊಂಡಿವೆ. ಇದರೊಂದಿಗೆ ಹಾಲಿ ಆವೃತ್ತಿಯ ಸ್ಕ್ವಾಷ್ ವಿಭಾಗದಲ್ಲಿ ಭಾರತಕ್ಕೆ ಒಟ್ಟು ಐದು ಪದಕಗಳು ಲಭಿಸಿದಂತಾಗಿದೆ. ಅಗ್ರ ಶ್ರೇಯಾಂಕಿತ ಹಾಗೂ ಹಾಲಿ ಚಾಂಪಿಯನ್ ಪುರುಷರ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಕುವೈತ್ ವಿರುದ್ಧ 2-0 ಅಂತರದ ಗೆಲುವು ದಾಖಲಿಸಿತು.

ಎರಡು ಸಿಂಗಲ್ಸ್ ಪಂದ್ಯಗಳಲ್ಲಿ ವೀರ್ ಚೋತ್ರಾನಿ, ಬಾದರ್ ಅಲ್ಮೊಘ್ರೆಬಿ ವಿರುದ್ಧದ 34 ನಿಮಿಷಗಳ ಹೋರಾಟದಲ್ಲಿ 12-10, 8-11, 11-0, 11-5 ರಿಂದ ಜಯಿಸಿದರೆ, ಸಿಂಗಲ್ಸ್ ಬೆಳ್ಳಿ ವಿಜೇತ ಅಭಯ್ ಸಿಂಗ್, ಅಮ್ಮರ್ ಅಲ್ತಮಿಮಿ ವಿರುದ್ಧ 11-3, 11-4, 11-8 ರಿಂದ ಗೆಲುವು ಸಾಧಿಸುವ ಮೂಲಕ ತಂಡಕ್ಕೆ ಪದಕ ಖಚಿತಪಡಿಸಿದರು. ಮಹಿಳೆಯರ ವಿಭಾಗದಲ್ಲಿ ಅನಾಹತ್ ಸಿಂಗ್ ನೇತೃತ್ವದ ತಂಡ ಸಿಂಗಾಪುರ ವಿರುದ್ಧ 2-0 ರಿಂದ ಗೆಲುವು ಒಲಿಸಿಕೊಂಡಿತು. ತನ್ವಿ ಖನ್ನಾ, ಯೋಂಗ್ ವೈ ಇನ್ ವಿರುದ್ಧ 11-6, 4-11, 15-13, 11-1ರಿಂದ ದಿಟ್ಟ ಹೋರಾಟದೊಂದಿಗೆ ಜಯ ಸಾಧಿಸಿದರೆ, ಎರಡನೇ ಸಿಂಗಲ್ಸ್ ಪಂದ್ಯದಲ್ಲಿ 18 ವರ್ಷದ ಅನಾಹತ್, ಔ ಯೋಂಗ್ ವೈ ಯಾನ್‌ರನ್ನು 11-7, 11-3, 11-4 ರಿಂದ ಸೋಲಿಸಿ ತಂಡದ ಗೆಲುವನ್ನು ಖಚಿತಪಡಿಸಿದರು. ಮಹಿಳಾ ತಂಡ ಗುರುವಾರ ಸೆಮಿಫೈನಲ್‌ನಲ್ಲಿ ಹಾಂಕಾಂಗ್ ತಂಡವನ್ನು ಎದುರಿಸಲಿದ್ದು, ಪುರುಷರ ತಂಡ ಮಲೇಷ್ಯಾ ಸವಾಲು ಎದುರಿಸಲಿದೆ.

ಅಶ್ಮಿತಾಗೆ ಬ್ಯಾಡ್ ಡೇ

ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ವಿಜೇತೆ ಜುಡೋಪಟು ಅಶ್ಮಿತಾ ಡೇ ಏಷ್ಯಾಡ್‌ನಲ್ಲಿ ನಿರಾಸೆ ಅನುಭವಿಸಿದರು. ಮಹಿಳೆಯರ 48 ಕೆಜಿ ವಿಭಾಗದ ಕಂಚಿನ ಪದಕದ ಹೋರಾಟದಲ್ಲಿ ಮಂಗೋಲಿಯಾದ ನರಂಟ್ಸೆಟ್ಸೆಗ್ ಗನ್ಬಾಟರ್ ವಿರುದ್ಧ ಅಶ್ಮಿತಾ ಸೋಲು ಅನುಭವಿಸಿದರು. ಇದಕ್ಕೆ ಮುನ್ನ ಕ್ವಾರ್ಟರ್‌ಫೈನಲ್‌ನಲ್ಲಿ ಕಜಾಕ್‌ಸ್ತಾನದ ಅಬಿಬಾ ಅಬುಝಕಿನೋವಾ ವಿರುದ್ಧ ಸೋಲು ಕಂಡರು. ಅಬಿಬಾ ಅಬುಝಕಿನೋವಾ ಫೈನಲ್‌ಗೇರಿದ್ದರಿಂದ ಕಂಚಿಗಾಗಿ ಹೋರಾಡುವ ಅವಕಾಶ ಪಡೆದ ಅಶ್ಮಿತಾ ರೆಪಷಾಷ್‌ನಲ್ಲಿ ಹಾಂಕಾಂಗ್ ಕಾ ಲೀ ವಾಂಗ್ ವಿರುದ್ಧ 4-0ಯಿಂದ ಗೆಲುವು ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net