ನಾಳೆ ಸ್ವರ್ಣಕ್ಕೆ ಇಂಡೋ-ಪಾಕ್ ಕದನ! ಗೆಲುವಿಗಿಂತ ಕ್ರಿಕೆಟ್​ ಪ್ರಿಯರನ್ನು ಬೆಂಬಿಡದೆ ಕಾಡುತ್ತಿದೆ ಇದೊಂದು ವಿಷಯ​ | IND vs PAK

ಇಲ್ಲಿ ಗೋಲ್ಡ್ ಮೆಡಲ್​ ಮಾತ್ರವಲ್ಲ, ಪಂದ್ಯದ ಮೇಲೂ ಅಷ್ಟೇ ನಿರೀಕ್ಷೆಗಳಿವೆ. ಕಾರಣ, ಎದುರಾಳಿ ಸ್ಥಾನದಲ್ಲಿ ಇರುವುದು ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನ.
IND vs PAK
ನಾಳೆ ಸ್ವರ್ಣಕ್ಕೆ ಇಂಡೋ-ಪಾಕ್ ಕದನ! ಗೆಲುವಿಗಿಂತ ಇದೊಂದು ಮಾತ್ರ ಕ್ರಿಕೆಟ್​ ಪ್ರಿಯರನ್ನು ಬೆಂಬಿಡದೆ ಕಾಡುತ್ತಿದೆ​ | IND vs PAK
Published on: 

IND vs PAK: ಪ್ರಸಕ್ತ ಆತಿಥೇಯ ಜಪಾನ್​ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಹಲವು ವಿಭಾಗಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಪದಕಗಳ ಸುರಿಮಳೆಯೇ ಹರಿದುಬಂದಿದ್ದು, ಈಗ ಪುರುಷರ ಕ್ರಿಕೆಟ್‌ನಲ್ಲಿ ಚಿನ್ನದ ಪದಕಕ್ಕೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಇಲ್ಲಿ ಗೋಲ್ಡ್ ಮೆಡಲ್​ ಮಾತ್ರವಲ್ಲ, ಪಂದ್ಯದ ಮೇಲೂ ಅಷ್ಟೇ ನಿರೀಕ್ಷೆಗಳಿವೆ. ಕಾರಣ, ಎದುರಾಳಿ ಸ್ಥಾನದಲ್ಲಿ ಇರುವುದು ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನ.

ಇದೇ ಶನಿವಾರ (ಅ.3) ನಡೆಯಲಿರುವ ಏಷ್ಯನ್​ ಗೇಮ್ಸ್​ ಪುರುಷರ ಕ್ರಿಕೆಟ್​ ಅಂತಿಮ ಹಣಾಹಣಿಯಲ್ಲಿ ಶ್ರೇಯಸ್​ ಅಯ್ಯರ್ ಪಡೆ, ಚಿನ್ನದ ಪದಕ್ಕಾಗಿ ಪಾಕಿಸ್ತಾನ ಎದುರು ಸೆಣಸಲಿದೆ. ಉಭಯ ತಂಡಗಳ ಅಭಿಮಾನಿಗಳು ಚಿನ್ನದ ಪದಕ ಗೆಲ್ಲಬೇಕೆಂಬ ಆಸೆಯಿದ್ದರೂ ಎಲ್ಲರ ಗಮನ ಈಗ ಮೂಡಿರುವುದು ಪಂದ್ಯದ ಆರಂಭಕ್ಕೂ ಏನಾಗಲಿದೆ ಎಂಬುದರ ಮೇಲೆ. ಅದುವೇ ಹಸ್ತಲಾಘವ. ದಿ ಮೋಸ್ಟ್​ ಕಾಂಟ್ರೋವರ್ಶಿಯಲ್​ ಹ್ಯಾಂಡ್​ಶೇಕ್​ ಎಂಬ ಹಳೆಯ ವಿವಾದ.

ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಟೀಮ್ ಇಂಡಿಯಾ, ಏಷ್ಯಾಕಪ್​ ಟ್ರೋಫಿ ಸೇರಿದಂತೆ ಹಲವಾರು ಸಂದರ್ಭಗಳಲ್ಲಿ ಎದುರಾಳಿ ಪಾಕ್​ ತಂಡದ ಆಟಗಾರರ ಜತೆ ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿಯೂ ಕೈಕುಲುಕಿಲ್ಲ. ಇದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿದರೂ ಭಾರತ ಮಾತ್ರ ಇಂದಿಗೂ ಹ್ಯಾಂಡ್​ಶೇಕ್​ಗೆ ಒಪ್ಪಿಲ್ಲ. ಇದು ಇತ್ತೀಚಿನ ಏಷ್ಯನ್ ಗೇಮ್ಸ್‌ ಮಹಿಳೆಯರ ವಿಭಾಗದಲ್ಲಿ ರಿಪೀಟ್ ಆಗಿದೆ. ಸನಾ ಪಡೆಯೊಂದಿಗೆ ಹರ್ಮನ್​ ಪಡೆ ಹಸ್ತಲಾಘವ ಮಾಡದೆ, ತಮ್ಮ ಪಾಡಿಗೆ ಪಂದ್ಯ ಮುಗಿದ ಕೂಡಲೇ ಡ್ರೆಸ್ಸಿಂಗ್ ರೂಮ್​ಗೆ ಮರಳಿದರು. ಈಗ ಶ್ರೇಯಸ್​ ತಂಡವು ಇದನ್ನೇ ಮಾಡಲಿದೆಯಾ ಅಥವಾ ಏಷ್ಯನ್​ ಗೇಮ್ಸ್​ನಲ್ಲಿ ನಿಯಮ ಏನಾದರೂ ಬೇರೆ ಹೇಳಲಿದ್ಯಾ ಎಂಬ ಪ್ರಶ್ನೆಗಳು ಕಾಡಲಾರಂಭಿಸಿದೆ.

ಒಂದೇ ಪೋಡಿಯಂನಲ್ಲಿ 2 ತಂಡಗಳು

ಈ ಪಂದ್ಯದಲ್ಲಿ ಯಾರೇ ಗೆದ್ದರೂ ಎರಡೂ ತಂಡಗಳು ಕೊನೆಯಲ್ಲಿ ಪೋಡಿಯಂನಲ್ಲಿ ವೇದಿಕೆ ಹಂಚಿಕೊಳ್ಳಬೇಕಿದೆ. ಈ ಪಂದ್ಯಕ್ಕೆ, ಐಸಿಸಿ ಅಧ್ಯಕ್ಷ ಜಯ್ ಶಾ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇರಲಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದು ಸಂಗತಿ ಎಂದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಸ್ವರ್ಣ ಯಾರ ಮುಡಿಗೆ ಎಂಬ ಪ್ರಶ್ನೆಗಳು ಸಹ ಕ್ರಿಕೆಟ್​ ಅಭಿಮಾನಿಗಳಲ್ಲಿ ಕಾಡತೊಡಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net