ಬೆಂಗಳೂರಿನಲ್ಲಿ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್: 9 ರಾಷ್ಟ್ರಗಳ ಈಜುಗಾರರು ಭಾಗಿ

ಬೆಂಗಳೂರಿನ ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿ ಅಕ್ಟೋಬರ್ 4ರಿಂದ 10ರವರೆಗೆ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ 2026 ನಡೆಯಲಿದೆ. ಏಷ್ಯಾದ ವಿವಿಧ ರಾಷ್ಟ್ರಗಳ 1,500ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಭಾಗವಹಿಸುವವರು ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
Asian Masters Swimming Championship
Asian Masters Swimming Championship
Published on: 

ಬೆಂಗಳೂರು: ಬೆಂಗಳೂರಿನ ಪಡುಕೋಣೆ–ದ್ರಾವಿಡ್ ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿ ಅಕ್ಟೋಬರ್ 4ರಿಂದ 10ರವರೆಗೆ 2ನೇ ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ 2026 ನಡೆಯಲಿದೆ. ಏಷ್ಯಾದ ವಿವಿಧ ರಾಷ್ಟ್ರಗಳ 1,500ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಭಾಗವಹಿಸುವವರು ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

2016ರಲ್ಲಿ ಜಪಾನ್‌ನಲ್ಲಿ ನಡೆದ ಮೊದಲ ಆವೃತ್ತಿಯ ಬಳಿಕ ಈ ಪ್ರತಿಷ್ಠಿತ ಚಾಂಪಿಯನ್‌ಶಿಪ್ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲ ಬಾರಿ. ಏಷ್ಯಾ ಅಕ್ವಾಟಿಕ್ಸ್ ಮಾರ್ಗದರ್ಶನದಲ್ಲಿ ಈಜು ಫೆಡರೇಷನ್ ಆಫ್ ಇಂಡಿಯಾ (SFI) ಆತಿಥ್ಯ ವಹಿಸಿದ್ದು, ಕರ್ನಾಟಕ ಈಜು ಅಸೋಸಿಯೇಷನ್ (KSA) ಸ್ಥಳೀಯ ಆಯೋಜನಾ ಪಾಲುದಾರವಾಗಿದೆ.

ಭಾರತ, ಶ್ರೀಲಂಕಾ, ಇರಾನ್, ಥೈಲ್ಯಾಂಡ್, ಜಪಾನ್, ಚೀನಾ, ಓಮನ್, ಮಲೇಷ್ಯಾ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 9 ರಾಷ್ಟ್ರಗಳ ಈಜುಗಾರರು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ. ಆತಿಥೇಯ ಭಾರತದಿಂದ 1,000ಕ್ಕೂ ಹೆಚ್ಚು ಈಜುಗಾರರು ಸ್ಪರ್ಧಿಸಲಿದ್ದು, ಇತ್ತೀಚೆಗೆ ಹರಿಯಾಣದಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಚಾಂಪಿಯನ್‌ಶಿಪ್ ಹಾಗೂ ವಿವಿಧ ರಾಜ್ಯಗಳ ಮಾಸ್ಟರ್ಸ್ ಚಾಂಪಿಯನ್‌ಶಿಪ್‌ಗಳ ಮೂಲಕ ಅವರು ಆಯ್ಕೆಯಾಗಿದ್ದಾರೆ.

ಭಾರತದ ಪ್ರಮುಖ ಸ್ಪರ್ಧಿಗಳಲ್ಲಿ ಪಾರ್ಥ ವರ್ಣಾಶಿ, ಅರವಿಂದ್ ನೈನಾರ್, ರೋಹಿತ್ ಹವಾಲ್ದಾರ್ ಮತ್ತು ಡಾ. ಭಾವನಾ ಆನಂದ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಚೀನಾದ ಗ್ಯಾಂಗ್ ಲೆ ಕೂಡ ಗಮನಾರ್ಹ ಸ್ಪರ್ಧಿಯಾಗಿದ್ದಾರೆ.

SFI ಪ್ರಧಾನ ಕಾರ್ಯದರ್ಶಿ ಮೋನಲ್ ಚೋಕ್ಸಿ ಮಾತನಾಡಿ, “ಏಷ್ಯನ್ ಮಾಸ್ಟರ್ಸ್ ಈಜು ಚಾಂಪಿಯನ್‌ಶಿಪ್ ಆಯೋಜಿಸುತ್ತಿರುವುದು ಹೆಮ್ಮೆಯ ಸಂಗತಿ. 1,000ಕ್ಕೂ ಹೆಚ್ಚು ಭಾರತೀಯ ಈಜುಗಾರರು ಸೇರಿದಂತೆ 1,500ಕ್ಕೂ ಅಧಿಕ ಮಂದಿಯ ಭಾಗವಹಿಸುವಿಕೆ ಮಾಸ್ಟರ್ಸ್ ಈಜಿನ ಜನಪ್ರಿಯತೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ,” ಎಂದರು.

ಆಯೋಜನಾ ಸಮಿತಿ ಅಧ್ಯಕ್ಷ ಗೋಪಾಲ್ ಹೋಸೂರ್ ಹಾಗೂ SFI ಉಪಾಧ್ಯಕ್ಷ ಸತೀಶ್ ಕುಮಾರ್ ಅವರು, ಈ ಚಾಂಪಿಯನ್‌ಶಿಪ್ ಈಜನ್ನು ಜೀವಿತಾವಧಿಯ ಕ್ರೀಡೆಯಾಗಿ ಉತ್ತೇಜಿಸುವುದರ ಜೊತೆಗೆ ಆರೋಗ್ಯ, ಫಿಟ್‌ನೆಸ್ ಮತ್ತು ಸಕ್ರಿಯ ಜೀವನಶೈಲಿಗೆ ಪ್ರೇರಣೆ ನೀಡಲಿದೆ ಎಂದು ಹೇಳಿದರು.

ವಿವಿಧ ಮಾಸ್ಟರ್ಸ್ ವಯೋಮಾನದ ಈಜುಗಾರರು ಸ್ಪರ್ಧಿಸಲಿರುವ ಈ ಚಾಂಪಿಯನ್‌ಶಿಪ್ ಮೂಲಕ ಭಾರತದಲ್ಲಿ ಮಾಸ್ಟರ್ಸ್ ಈಜು ಚಳವಳಿಗೆ ಮತ್ತಷ್ಟು ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net