

ಕಕಮಿಗಹರ: ಭಾರತದ ಮಹಿಳೆಯರ ತಂಡ ಏಷ್ಯಾಡ್ ಹಾಕಿ ಸ್ಪರ್ಧೆಯಲ್ಲಿ ಸತತ 4ನೇ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಚಿನ್ನದ ಪದಕ ಗೆಲುವಿನೊಂದಿಗೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ನೇರಅರ್ಹತೆ ಗಳಿಸುವ ಹಂಬಲದಲ್ಲಿರುವ ಸಲೀಮಾ ಟೆಟೆ ಪಡೆ ಶುಕ್ರವಾರ ನಡೆದ ತನ್ನ 4ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಜಪಾನ್ ಎದುರು 3-1 ಗೋಲುಗಳಿಂದ ಗೆಲುವು ದಾಖಲಿಸಿತು. ಈ ಮೂಲಕ ಬಿ ಗುಂಪಿನಲ್ಲಿ 12 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿತು.
ಕಳೆದ 3 ಪಂದ್ಯಗಳಲ್ಲಿ ಬರೋಬ್ಬರಿ 56 ಗೋಲು ಸಿಡಿಸಿದ್ದ ಭಾರತ ಈ ಬಾರಿ ಗೋಲಿನ ಮಳೆ ಹರಿಸದಿದ್ದರೂ, ಪಂದ್ಯದುದ್ದಕ್ಕೂ ಪ್ರಾಬಲ್ಯ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಭಾರತ ಪರ ಲಾಲ್ರೆಮ್ಸಿಯಾಮಿ (5ನೇ ನಿಮಿಷ), ಇಶಿಕಾ ಚೌಧರಿ (30) ಮತ್ತು ನವನೀತ್ ಕೌರ್ (36) ತಲಾ ಒಂದು ಗೋಲು ಬಾರಿಸಿದರು. ಜಪಾನ್ ಪರ ಶಿಹೊ ಕೊಬಯಕವಾ (46) ಏಕೈಕ ಗೋಲು ಗಳಿಸಿದರು.
ಕಳೆದ 3 ಪಂದ್ಯಗಳಲ್ಲಿ 20 ಗೋಲು ಸಿಡಿಸಿ ಮಿಂಚಿದ್ದ ದೀಪಿಕಾ ಸೆಹ್ರಾವತ್ ಈ ಬಾರಿ ಗೋಲಿನ ಖಾತೆ ತೆರೆಯಲು ವಿಫಲರಾದರು. ಭಾರತ ತಂಡ ತನ್ನ ಕೊನೇ ಲೀಗ್ ಪಂದ್ಯದಲ್ಲಿ ಭಾನುವಾರ ಸಿಂಗಾಪುರ ತಂಡವನ್ನು ಎದುರಿಸಲಿದೆ.