

ಐಚಿ-ನಗೋಯಾ: ಭಾರತದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ತಂಡಗಳು ಸ್ವರ್ಣ ಪದಕ ಉಳಿಸಿಕೊಳ್ಳವ ಸನಿಹದಲ್ಲಿದ್ದು, ಏಷ್ಯಾಡ್ 20ನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿವೆ. ಶುಕ್ರವಾರ ನಡೆದ ಪುರುಷರ ಸೆಮಿಫೈನಲ್ನಲ್ಲಿ ಭಾರತ ತಂಡ 66-28 ಅಂತರದಿಂದ ಥಾಯ್ಲೆಂಡ್ ಎದುರು ಗೆಲುವು ಸಾಧಿಸಿದರೆ, ಮಹಿಳಾ ತಂಡ ನೇಪಾಳ ವಿರುದ್ಧ 48-24ರಿಂದ ಜಯ ಒಲಿಸಿಕೊಂಡಿತು. ಎರಡೂ ವಿಭಾಗದ ಫೈನಲ್ನಲ್ಲಿ ಇರಾನ್ ಎದುರು ಭಾರತ ಸ್ವರ್ಣ ಪದಕಕ್ಕೆ ಹೋರಾಡಲಿದೆ.
1990ರಿಂದ ಪುರುಷರ ಕಬಡ್ಡಿ ಏಷ್ಯನ್ ಗೇಮ್ಸ್ನ ಭಾಗವಾಗಿದ್ದು, ಭಾರತ ಇದುವರೆಗೆ ಎಂಟು ಬಾರಿ ಚಿನ್ನದ ಪದಕ ಗೆದ್ದಿದೆ. ಪುರುಷರ ವಿಭಾಗದಲ್ಲಿ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ ಥಾಯ್ಲೆಂಡ್ ತಂಡ ಕಂಚಿನ ಪದಕ ಜಯಿಸಿದ್ದು, ಕರ್ನಾಟಕದ ರವೀಂದ್ರ ಶೆಟ್ಟಿ ಮುಖ್ಯ ಕೋಚ್ ಆಗಿದ್ದಾರೆ. ಪ್ರೊ ಕಬಡ್ಡಿ ಲೀಗ್ನ 9 ಆವೃತ್ತಿಗಳಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಅನುಭವವೂ ಇವರಿಗಿದೆ. ಭಾರತ ಮಹಿಳಾ ತಂಡ ಸತತ ಐದನೇ ಆವೃತ್ತಿಯಲ್ಲಿ ಪದಕ ಸುತ್ತಿಗೇರಿದೆ.
ಬಾಕ್ಸಿಂಗ್: ಪದಕದ ಸನಿಹ ಸಚಿನ್
ಭಾರತದ ಸಚಿನ್ ಸಿವಾಚ್ ಬಾಕ್ಸಿಂಗ್ ಸ್ಪರ್ಧೆಯ ಪುರುಷರ 60 ಕೆಜಿ ವಿಭಾಗದಲ್ಲಿ ಕ್ವಾರ್ಟರ್ಫೈನಲ್ಗೇರಿದ್ದು, ಪದಕ ಖಾತ್ರಿಯಿಂದ ಕೇವಲ ಒಂದು ಗೆಲುವು ದೂರವಿದ್ದಾರೆ. ಮತ್ತೊಂದೆಡೆ ಮಹಿಳೆಯರ 54 ಕೆಜಿ ವಿಭಾಗದಲ್ಲಿ ಕಳೆದ ಆವೃತ್ತಿಯ ಕಂಚು ವಿಜೇತೆ ಪ್ರೀತಿ ಪವಾರ್ 16ರ ಘಟ್ಟದಲ್ಲೇ ಸೋತು ಹೊರಬಿದ್ದರು. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ವಿಜೇತ ಸಚಿನ್ ಸಿವಾಚ್ 16ರ ಘಟ್ಟದಲ್ಲಿ ಜೋರ್ಡಾನ್ನ ಮೊಹಮ್ಮದ್ ಅದ್ನಾನ್ ಅಬು ಜಜೆಹ್ ವಿರುದ್ಧ 4-1ರಿಂದ ಗೆಲುವು ದಾಖಲಿಸಿದರು. ಅವರು ಸೆಮಿಫೈನಲ್ ಸ್ಥಾನಕ್ಕಾಗಿ ವಿಶ್ವ ಚಾಂಪಿಯನ್ಷಿಪ್ ಕಂಚು ವಿಜೇತ ಜಪಾನ್ನ ಶುನ್ಸುಕೆ ಕಿಟಮೊಟೊ ವಿರುದ್ಧ ಹೋರಾಡಲಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿದ್ದ ಪ್ರೀತಿ ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತೆ ಹಾಗೂ ಹಾಲಿ ಏಷ್ಯಾಡ್ ಚಾಂಪಿಯನ್ ಉತ್ತರ ಕೊರಿಯಾದ ಪಂಗ್ ಚೊಲ್ ಎಂ. ವಿರುದ್ಧ 0-5ರಿಂದ ಏಕಪಯ ಸೋಲು ಅನುಭವಿಸಿದರು.
ಸಾತ್ವಿಕ್-ಚಿರಾಗ್ ಜೋಡಿಗೆ ಶಾಕ್
ಹಾಲಿ ಚಾಂಪಿಯನ್ಗಳಾಗಿ ಕಣಕ್ಕಿಳಿದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋತು ಆಘಾತ ಎದುರಿಸಿತು. ಮಾಜಿ ವಿಶ್ವ ನಂ. 1 ಜೋಡಿಗೆ ಥಾಯ್ಲೆಂಡ್ನ ಪಕ್ಕಪೊನ್ ತೀರರಸಕುಲ್-ಪೀರಚೈ ಸುಕ್ನ್ ಜೋಡಿ 21-12, 19-21, 14-21 ಗೇಮ್ಗಳಿಂದ ಸೋಲುಣಿಸಿ ಪದಕ ಕನಸು ಭಗ್ನಗೊಳಿಸಿತು. ಮಿಶ್ರ ಡಬಲ್ಸ್ ವಿಭಾಗದಲ್ಲಿ ತನಿಷಾ ಕ್ರಾಸ್ಟೋ-ಧ್ರುವ ಕಪಿಲಾ ಜೋಡಿ, ಮಹಿಳಾ ಡಬಲ್ಸ್ನಲ್ಲಿ ತ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್ ಜೋಡಿ ಶುಭಾರಂಭ ಕಂಡಿದ್ದರೆ, ಉನ್ನತಿ ಹೂಡಾ ಮಹಿಳಾ ಸಿಂಗಲ್ಸ್ನಲ್ಲಿ 2ನೇ ಸುತ್ತಿಗೇರಿದರು.