

ಬೆಂಗಳೂರು: ಕೊಡವ ಸಮುದಾಯವು ಸಾವಿರಾರು ವರ್ಷಗಳ ತನ್ನದೇ ಆದ ವಿಶಿಷ್ಟ ಪರಂಪರೆ, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಇಂದಿನ ಆಧುನಿಕ ಜಗತ್ತಿನಲ್ಲಿಯೂ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ. ಕೊಡವ ಕುಟುಂಬಗಳ ಹಾಕಿ ಉತ್ಸವವು ಸಮುದಾಯದ ಒಗ್ಗಟ್ಟು, ಸಂಸ್ಕೃತಿ ಮತ್ತು ಕ್ರೀಡಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ವೇದಿಕೆಯಾಗಿದೆ ಎಂದು ಉಪಮುಖ್ಯಮಂತ್ರಿ, ಕಂದಾಯ ಮತ್ತು ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.
ಅಜ್ಜಿ ಕುಟ್ಟೀರ ಕುಟುಂಬ ಕ್ರೀಡಾ, ಶಿಕ್ಷಣ ಮತ್ತು ಸಾಂಸ್ಕೃತಿಕ ಧರ್ಮದತ್ತಿ ವತಿಯಿಂದ ಭಾನುವಾರ ಸಂಜೆ ಬೆಂಗಳೂರಿನ ಅಕ್ಕಿತಿಮ್ಮನಹಳ್ಳಿಯ ಕರ್ನಾಟಕ ರಾಜ್ಯ ಹಾಕಿ ಸ್ಟೇಡಿಯಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 'ಅಜ್ಜಿ ಕುಟ್ಟೀರ ಹಾಕಿ ನಮ್ಮೆ' 27ನೇ ಕೊಡವ ಕುಟುಂಬಗಳ ಹಾಕಿ ಉತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೊಡವ ಸಮುದಾಯದ ಇತಿಹಾಸವನ್ನು ಸ್ಮರಿಸಿದ ಡಿಸಿಎಂ, ಜನರಲ್ ಕಾರ್ಯಪ್ಪ, ತಿಮ್ಮಯ್ಯ ಸೇರಿದಂತೆ ದೇಶಕ್ಕೆ ಅಪಾರ ಕೊಡುಗೆ ನೀಡಿದ ಅನೇಕ ಮಹನೀಯರು ಈ ಸಮುದಾಯದಲ್ಲಿ ಜನಿಸಿದ್ದಾರೆ. ರಾಜಕೀಯ, ಪೊಲೀಸ್, ಕ್ರೀಡೆ, ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೊಡವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕೇವಲ ಒಂದೂವರೆ ಲಕ್ಷದಷ್ಟು ಜನಸಂಖ್ಯೆ ಹೊಂದಿದ್ದರೂ ಇಡೀ ದೇಶದ ಗಮನ ಸೆಳೆಯುವಂತಹ ಸಾಧನೆ ಮಾಡಿರುವುದು ಅವರ ಶಿಸ್ತು, ಸಂಸ್ಕಾರ, ಧೈರ್ಯ ಮತ್ತು ಸಂಘಟನಾ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.
ಕೊಡವ ಕುಟುಂಬಗಳ ಒಗ್ಗಟ್ಟಿಗೆ ಹಾಕಿ ಉತ್ಸವ ನಾಂದಿ: 1997ರಲ್ಲಿ ಕುಟ್ಟಪ್ಪನವರು ಕುಟುಂಬ ಹಾಕಿ ಉತ್ಸವದ ಪರಿಕಲ್ಪನೆಯನ್ನು ಹುಟ್ಟುಹಾಕಿದಾಗ ಅವರ ಮನಸ್ಸಿನಲ್ಲಿ ಸಮುದಾಯವನ್ನು ಒಗ್ಗೂಡಿಸುವ ಉದ್ದೇಶವಿದ್ದಿರಬಹುದು. ವಿವಿಧ ಕುಟುಂಬಗಳ ನಡುವೆ ಒಗ್ಗಟ್ಟು ಮತ್ತು ಸಹಬಾಳ್ವೆಯನ್ನು ಬೆಳೆಸಲು ಸಮುದಾಯದ ನೆಚ್ಚಿನ ಕ್ರೀಡೆಯಾದ ಹಾಕಿಯನ್ನು ವೇದಿಕೆಯನ್ನಾಗಿ ಮಾಡಿಕೊಂಡರು. ಅಂದು ಸುಮಾರು 60 ಕುಟುಂಬಗಳಿಂದ ಆರಂಭವಾದ ಈ ಉತ್ಸವ ಇಂದು 250ರಿಂದ 300ಕ್ಕೂ ಹೆಚ್ಚು ಕುಟುಂಬಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಆಟಕ್ಕೆ ಅಗತ್ಯವಿರುವ 11 ಆಟಗಾರರನ್ನು ಹೊಂದಿರದ ಕುಟುಂಬಗಳೂ ತಮ್ಮ ಕುಟುಂಬದ ಗುರುತು ಮತ್ತು ಅಸ್ಮಿತೆಯನ್ನು ಉಳಿಸಿಕೊಂಡು ಈ ಉತ್ಸವದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಇದು ಕೇವಲ ಕ್ರೀಡಾಕೂಟವಲ್ಲ, ಕೊಡವ ಸಮುದಾಯದ ಒಗ್ಗಟ್ಟು, ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿರಿಸುವ ಅಭಿಯಾನವಾಗಿದೆ ಎಂದು ತಿಳಿಸಿದರು.
ಕೊಡವ ಸಮುದಾಯದೊಂದಿಗೆ ತಮಗಿರುವ ನಿಕಟ ಸಂಬಂಧವನ್ನು ಸ್ಮರಿಸಿದ ಅವರು, 1989ರಲ್ಲಿ ವೀರೇಂದ್ರ ಪಾಟೀಲರ ಅಧ್ಯಕ್ಷತೆಯಲ್ಲಿ ಪಕ್ಷದ ಜಂಟಿ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಕೊಡಗು ಪುರಸಭೆ ಚುನಾವಣೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ರಾಜಕೀಯಕ್ಕೆ ಹೊಸದಾಗಿ ಪ್ರವೇಶಿಸಿದ್ದ ನನಗೆ ನೀಡಲಾದ ಮೊದಲ ಪ್ರಮುಖ ಜವಾಬ್ದಾರಿಯೇ ಕೊಡಗು ಜಿಲ್ಲೆಯದ್ದಾಗಿತ್ತು. ಅಂದಿನಿಂದ ಇಂದಿನವರೆಗೂ ಕೊಡಗನ್ನು ಹತ್ತಿರದಿಂದ ಗಮನಿಸುತ್ತಾ ಬಂದಿದ್ದೇನೆ. ಅಲ್ಲಿನ ಜನರ ಸಂಸ್ಕೃತಿ, ಪರಂಪರೆ ಮತ್ತು ಜೀವನಶೈಲಿಯ ಬಗ್ಗೆ ವಿಶೇಷ ಗೌರವವಿದೆ ಎಂದರು.
ಪೊನ್ನಣ್ಣ ಅವರು ಕೊಡವ ಸಮುದಾಯದ ಭವಿಷ್ಯದ ನಾಯಕ: ಕೊಡವ ಸಮುದಾಯದ ಯುವ ನಾಯಕ ಎನ್.ಎ.ಪೊನ್ನಣ್ಣ ಅವರ ಬಗ್ಗೆ ವಿಶೇಷ ವಿಶ್ವಾಸವಿದೆ. ಅವರನ್ನು ಕೇವಲ ಇಂದಿನ ನಾಯಕನಾಗಿ ಮಾತ್ರವಲ್ಲದೆ, ಕೊಡವ ಸಮುದಾಯದ ಭವಿಷ್ಯದ ನಾಯಕನಾಗಿ ನೋಡುತ್ತೇನೆ. ಇಡೀ ಕೊಡವ ಸಮುದಾಯದ ಜವಾಬ್ದಾರಿಯನ್ನು ಹೊತ್ತುಕೊಂಡು, ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುನ್ನಡೆಯಬೇಕು. ಆ ಜವಾಬ್ದಾರಿಯನ್ನು ಅವರು ಸಮರ್ಥವಾಗಿ ನಿಭಾಯಿಸಬೇಕು ಎಂಬ ಆಶಯದಿಂದಲೇ ಅವರನ್ನು ಭವಿಷ್ಯದ ನಾಯಕ ಎಂದು ಹೇಳಿದ್ದೇನೆ ಎಂದರು.
ಹಾಕಿ ಭಾರತದ ಕ್ರೀಡಾ ಹೆಮ್ಮೆ; ಮತ್ತೆ ಚಿನ್ನದ ಪದಕ ಗೆಲ್ಲುವಂತಾಗಬೇಕು : ಹಾಕಿ ಕ್ರೀಡೆಯ ಮಹತ್ವವನ್ನು ವಿವರಿಸಿದ ಡಾ.ಜಿ.ಪರಮೇಶ್ವರ ಅವರು, ಭಾರತವು 1928ರಿಂದ ಒಲಿಂಪಿಕ್ಸ್ನಲ್ಲಿ ಎಂಟು ಬಾರಿ ಹಾಕಿಯಲ್ಲಿ ಚಿನ್ನದ ಪದಕ ಗೆದ್ದಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗದಿರುವುದಕ್ಕೆ ಕಾರಣಗಳೇನು ಎಂಬುದನ್ನು ಹಲವು ಬಾರಿ ಚಿಂತಿಸಿದ್ದೇನೆ. ನನ್ನ ಸಹಪಾಠಿಗಳು ಹಾಗೂ ರೂಮ್ಮೇಟ್ಗಳಾಗಿದ್ದ ಅನೇಕ ಕೊಡವ ಸ್ನೇಹಿತರು ಹಾಕಿ ಆಡುತ್ತಿದ್ದರು. ಹಾಕಿ ಕ್ರೀಡೆಯ ಬಗ್ಗೆ ಕೊಡವ ಸಮುದಾಯಕ್ಕಿರುವ ಆಸಕ್ತಿ ಮತ್ತು ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.
ಹಾಕಿಯನ್ನು ಭಾರತ ಸರ್ಕಾರ ಅಧಿಕೃತವಾಗಿ ರಾಷ್ಟ್ರೀಯ ಕ್ರೀಡೆ ಎಂದು ಘೋಷಿಸಿಲ್ಲವಾದರೂ, ಭಾರತೀಯರ ಮನಸ್ಸಿನಲ್ಲಿ ಹಾಕಿಗೆ ವಿಶೇಷ ಸ್ಥಾನವಿದೆ. ಈ ಕ್ರೀಡೆಯನ್ನು ಇನ್ನಷ್ಟು ಬೆಳೆಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮತ್ತೊಮ್ಮೆ ಚಿನ್ನದ ಪದಕಗಳನ್ನು ಗೆಲ್ಲುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ; ಶಾಲಾ ಹಂತದಿಂದಲೇ ಪ್ರೋತ್ಸಾಹ ಅಗತ್ಯ: ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಅನುದಾನ ನೀಡುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಸಿದ್ದರಾಮಯ್ಯ ಅವರಿಂದ ಹಿಡಿದು ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದೆ. ಶಾಲೆಗಳಲ್ಲಿ ದೈಹಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಾಲಾ ಹಾಗೂ ವಿಶ್ವವಿದ್ಯಾಲಯಗಳ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಭಾಗವಹಿಸಲು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಬೇಕು. ಪ್ರತಿಯೊಬ್ಬ ಯುವಕನಿಗೂ ತನ್ನ ಪ್ರತಿಭೆ ಪ್ರದರ್ಶಿಸಲು ವೇದಿಕೆ ದೊರೆಯಬೇಕು ಎಂಬುದು ಸರ್ಕಾರದ ಆಶಯವಾಗಿದೆ ಎಂದರು.
ತುಮಕೂರಿನಲ್ಲಿ ಸುಮಾರು 78 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿದೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಉದ್ದೇಶವಿದೆ. ಕ್ರೀಡೆ ಕೇವಲ ಮಾತುಗಳಿಂದ ಬೆಳೆಯುವುದಿಲ್ಲ. ಅಗತ್ಯ ಮೂಲಸೌಕರ್ಯ, ತರಬೇತಿ ಮತ್ತು ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಕ್ರೀಡಾಪಟುಗಳು ಬೆಳೆಯಲು ಸಾಧ್ಯ. ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿ, ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಎನ್.ಎ.ಹ್ಯಾರಿಸ್ ಅವರು ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಐದು ಎಕರೆ ಜಮೀನು ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಡಾ.ಜಿ.ಪರಮೇಶ್ವರ ಅವರು, ಕಂದಾಯ ಇಲಾಖೆಯಿಂದ ಅಗತ್ಯ ಜಮೀನು ಗುರುತಿಸುವ ಕಾರ್ಯಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.
ತಾವು ಸುಮಾರು 14 ತಿಂಗಳು ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ನಗರದ ನಾಲ್ಕು ಭಾಗಗಳಲ್ಲಿ ನಾಲ್ಕು ಕ್ರೀಡಾಂಗಣಗಳು ಹಾಗೂ ನಾಲ್ಕು ಕಬ್ಬನ್ ಪಾರ್ಕ್ ಮಾದರಿಯ ಉದ್ಯಾನವನಗಳನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಕಾಂಗ್ರೆಸ್ ಪಕ್ಷದ 2023ರ ಪ್ರಣಾಳಿಕೆಯಲ್ಲಿ ಸೇರಿಸಿದ್ದಾಗಿ ತಿಳಿಸಿದರು. ಈ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಬಿಡಿಎ ಅಧ್ಯಕ್ಷರಾದ ಹ್ಯಾರಿಸ್ ಅವರು ಬೆಂಗಳೂರಿನ ನಾಲ್ಕು ಭಾಗಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಸೂಕ್ತ ಜಾಗಗಳನ್ನು ಗುರುತಿಸಬೇಕು. ಜಾಗ ಗುರುತಿಸಿದರೆ 50ರಿಂದ 100 ಕೋಟಿ ರೂ.ವರೆಗೆ ಅನುದಾನ ಒದಗಿಸಲು ಮುಖ್ಯಮಂತ್ರಿಗಳ ಮನವೊಲಿಸುವುದಾಗಿ ತಿಳಿಸಿ, ಈ ಕಾರ್ಯದಲ್ಲಿ ಸಹಕರಿಸುವಂತೆ ಮನವಿ ಮಾಡಿದರು.
ಪ್ರತಿ ಜಿಲ್ಲೆಯಲ್ಲಿ ಕ್ರೀಡೆಗೆ ಪೂರಕವಾದ ಮೂಲಸೌಕರ್ಯ: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸುವುದು ಸೇರಿದಂತೆ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೊಸ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ. ಪ್ರತಿಯೊಂದು ಪ್ರದೇಶದ ವೈಶಿಷ್ಟ್ಯ ಹಾಗೂ ಅಲ್ಲಿನ ಜನರ ಆಸಕ್ತಿಗೆ ಅನುಗುಣವಾಗಿ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಬೇಕು. ವಿಜಯಪುರದಲ್ಲಿ ಸೈಕ್ಲಿಂಗ್ ಕ್ರೀಡೆಗೆ ಹೆಚ್ಚಿನ ಆಸಕ್ತಿಯಿದ್ದು, ಅಲ್ಲಿ ವೆಲೋಡ್ರೋಮ್ ನಿರ್ಮಿಸುವ ಅಗತ್ಯವಿದೆ. ಕ್ರೀಡಾಪಟುಗಳ ಬೆಳವಣಿಗೆಗೆ ಪೂರಕವಾದ ಸೌಲಭ್ಯಗಳು ಅವರಿರುವ ಪ್ರದೇಶದಲ್ಲಿಯೇ ಲಭ್ಯವಾಗಬೇಕು ಎಂದರು.
ತುಮಕೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಹಾಕಿ ಮೈದಾನ ನಿರ್ಮಿಸುವ ಉದ್ದೇಶದಿಂದ 14 ಎಕರೆ ಜಮೀನನ್ನು ಮೀಸಲಿಡಲಾಗಿದೆ. ಇದೇ ವೇಳೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಿದ್ದು, ಇದಕ್ಕಾಗಿ 42 ಎಕರೆ ಭೂಮಿಯನ್ನು ಒದಗಿಸಲಾಗಿದೆ. ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಕ್ರೀಡಾಪಟುಗಳಿಗೆ ನಗದು ಪ್ರೋತ್ಸಾಹ; ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ: ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ ಪದಕ ಗೆದ್ದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ 1 ಕೋಟಿ ರೂ. ಪ್ರೋತ್ಸಾಹಧನ ನೀಡುತ್ತಿದೆ. ಇತ್ತೀಚೆಗೆ ಕರ್ನಾಟಕದ ಏಳು ಕ್ರೀಡಾಪಟುಗಳು ಸಾಧನೆ ಮಾಡಿ ಮರಳಿದಾಗ ತಲಾ ಒಂದು ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ ಎಂದರು.
ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿಯೂ ಅವಕಾಶ ಕಲ್ಪಿಸಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕ್ರೀಡಾ ಮೀಸಲಾತಿ ಜಾರಿಗೊಳಿಸಲಾಗಿದ್ದು, ಈಗಾಗಲೇ ನೂರಾರು ಕ್ರೀಡಾಪಟುಗಳು ಇದರ ಪ್ರಯೋಜನ ಪಡೆದಿದ್ದಾರೆ. ರಾಜ್ಯ ಸರ್ಕಾರ 72 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದ್ದು, ಈ ನೇಮಕಾತಿ ಪ್ರಕ್ರಿಯೆಯಲ್ಲಿ 1,500 ಹುದ್ದೆಗಳನ್ನು ಕ್ರೀಡಾಪಟುಗಳಿಗಾಗಿ ಮೀಸಲಿಡಲಾಗಿದೆ. ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ಗಳಲ್ಲಿ ಸಾಧನೆ ಮಾಡಿರುವ ಅರ್ಹ ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದರು.
ಇತ್ತೀಚೆಗೆ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 14 ವಯೋಮಿತಿ ಮಕ್ಕಳ ಕ್ರೀಡಾಕೂಟದಲ್ಲಿ ಸುಮಾರು 5,000 ಮಕ್ಕಳು ಭಾಗವಹಿಸಿದ್ದರು. ಆ ಮಕ್ಕಳಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಕಂಡು ಸಂತೋಷವಾಯಿತು. ಪೋಷಕರು ಮಕ್ಕಳ ಕ್ರೀಡಾಸಕ್ತಿಗೆ ಪ್ರೋತ್ಸಾಹ ನೀಡಿದರೆ ಅವರು ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಲು ಸಾಧ್ಯ. ತಾವು ಕೂಡ 19 ವಯೋಮಿತಿ ವಿಭಾಗದಲ್ಲಿ ಮೊದಲ ಬಾರಿಗೆ ರಾಜ್ಯವನ್ನು ಪ್ರತಿನಿಧಿಸಿ, ಕೊಟ್ಟಾಯಂನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದರಿಂದಲೇ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಅನುಭವ ಪಡೆಯಲು ಸಾಧ್ಯವಾಯಿತು. ಪ್ರತಿಯೊಬ್ಬ ಪ್ರತಿಭಾವಂತ ಮಗುವಿಗೂ ಇಂತಹ ಅವಕಾಶಗಳು ದೊರೆಯಬೇಕು ಎಂದರು.
ರಾಜ್ಯದಾದ್ಯಂತ ಪ್ರತಿಭಾವಂತ ಯುವ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ಮತ್ತು ಅವಕಾಶಗಳನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಪ್ರತಿವರ್ಷ 10K ಮ್ಯಾರಥಾನ್ ಆಯೋಜಿಸಲಾಗುತ್ತಿದ್ದು, ಸುಮಾರು 50 ಸಾವಿರ ಜನರು ಭಾಗವಹಿಸುತ್ತಾರೆ. ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳೂ ಮ್ಯಾರಥಾನ್ಗಳ ಆಯೋಜನೆಯಲ್ಲಿ ಕೈಜೋಡಿಸುತ್ತಿವೆ. ಇಂತಹ ಕಾರ್ಯಕ್ರಮಗಳು ಸಾರ್ವಜನಿಕರಲ್ಲಿ, ವಿಶೇಷವಾಗಿ ಯುವಜನರಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದರು.
ಯುವಜನರನ್ನು ಮಾದಕ ವಸ್ತುಗಳಿಂದ ದೂರವಿಡಲು ಕ್ರೀಡೆ ಸಹಕಾರಿ: ತಾವು ಗೃಹ ಸಚಿವರಾಗಿ ಎಂಟು ವರ್ಷ ಕಾರ್ಯನಿರ್ವಹಿಸಿದ ಸಂದರ್ಭದಲ್ಲಿ ಯುವಜನರಲ್ಲಿ ಮಾದಕ ವಸ್ತುಗಳ ವ್ಯಸನ ಹೆಚ್ಚುತ್ತಿರುವುದು ಗಂಭೀರ ಸವಾಲಾಗಿ ಕಂಡುಬಂದಿತ್ತು. ಶಾಲಾ-ಕಾಲೇಜುಗಳ ಸುತ್ತಮುತ್ತ ಮಾದಕ ವಸ್ತುಗಳ ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿದ್ದು, ಕೆಲವರು ಮಕ್ಕಳಿಗೆ ಚಾಕೊಲೇಟ್ಗಳಲ್ಲಿ ಮಾದಕ ವಸ್ತುಗಳನ್ನು ಬೆರೆಸಿ ಉಚಿತವಾಗಿ ನೀಡಿ, ನಂತರ ಅವರನ್ನು ವ್ಯಸನದ ಜಾಲಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಮೊದಲಿಗೆ ಉಚಿತವಾಗಿ ನೀಡಿ, ಬಳಿಕ ಹಣ ಪಡೆದು ಮಾರಾಟ ಮಾಡುವ ಮೂಲಕ ಮಕ್ಕಳನ್ನು ತಮ್ಮ ಗ್ರಾಹಕರನ್ನಾಗಿ ಮಾಡಿಕೊಳ್ಳುತ್ತಾರೆ. ಈ ರೀತಿಯ ಜಾಲಗಳನ್ನು ಪತ್ತೆಹಚ್ಚಿ ನಿಯಂತ್ರಿಸಲು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ. ಆದರೂ ಹೊರದೇಶಗಳಿಂದ ಹಾಗೂ ಇತರ ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳು ಬರುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇದು ನಡೆಯಬಾರದು. ಹಾಗಾಗಿ ಮಾದಕ ವಸ್ತುಗಳಿಂದ ದೂರವಿಡಲು ಮಕ್ಕಳನ್ನು ಕ್ರೀಡೆಯತ್ತ ಪ್ರೋತ್ಸಾಹಿಸಬೇಕು ಎಂದರು.
ಯುವಜನರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರೆ ಅವರಲ್ಲಿ ಶಿಸ್ತು, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವ ಬೆಳೆಯುತ್ತದೆ. ಇದರಿಂದ ಮಾದಕ ವಸ್ತುಗಳಂತಹ ದುಶ್ಚಟಗಳಿಂದ ಅವರನ್ನು ದೂರವಿಡಲು ಸಾಧ್ಯವಾಗುತ್ತದೆ. ಆದ್ದರಿಂದ ಕ್ರೀಡೆಯನ್ನು ಕೇವಲ ಪದಕ ಗೆಲ್ಲುವ ಸಾಧನವಾಗಿ ನೋಡದೆ, ಆರೋಗ್ಯಕರ ಸಮಾಜ ನಿರ್ಮಾಣದ ಪ್ರಮುಖ ಸಾಧನವಾಗಿಯೂ ಪರಿಗಣಿಸಬೇಕು ಎಂದು ಹೇಳಿದರು.
ಕೊಡವ ಹಾಕಿ ಉತ್ಸವದ ಬಗ್ಗೆ ಮೆಚ್ಚುಗೆ: ಕೊಡವ ಸಮುದಾಯದ ಸಂಸ್ಕೃತಿ, ಪರಂಪರೆ ಮತ್ತು ಸಂಘಟನಾ ಶಕ್ತಿಯನ್ನು ಕಂಡು ಅಚ್ಚರಿಯಾಯಿತು. ಕುಟುಂಬಗಳ ನಡುವೆ ಇಷ್ಟೊಂದು ಒಗ್ಗಟ್ಟು ಹಾಗೂ ಕ್ರೀಡೆಯ ಬಗ್ಗೆ ಇಷ್ಟೊಂದು ಅಭಿಮಾನ ಹೊಂದಿರುವುದು ವಿಶೇಷವಾಗಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಇಂತಹ ಕಾರ್ಯಕ್ರಮ ಆಯೋಜಿಸಿ, ವಿವಿಧ ಕುಟುಂಬಗಳ ಸದಸ್ಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಿರುವುದು ಸಂತೋಷದ ಸಂಗತಿ. ಕೊಡವ ಸಮುದಾಯದವರು ಕಾರು, ಬಸ್ ಸೇರಿದಂತೆ ವಿವಿಧ ರೀತಿಯಲ್ಲಿ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಉತ್ಸವದ ಮೇಲಿನ ಅವರ ಅಭಿಮಾನವನ್ನು ತೋರಿಸುತ್ತದೆ. ಈ ಪ್ರಯತ್ನ ಶ್ಲಾಘನೀಯವಾಗಿದೆ ಎಂದರು.
ಅಜ್ಜಿ ಕುಟ್ಟೀರ ಹಾಕಿ ನಮ್ಮೆ 2027 ಯಶಸ್ವಿಯಾಗಿ ನಡೆಯಲಿ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿರುವ ಈ ಕ್ರೀಡಾಕೂಟವನ್ನು ವೀಕ್ಷಿಸಲು ಅವಕಾಶ ದೊರೆತರೆ ಖಂಡಿತವಾಗಿಯೂ ಆಗಮಿಸುವುದಾಗಿ ತಿಳಿಸಿದರು. ಕೊಡವ ಸಮುದಾಯದ ಎಲ್ಲ ಕುಟುಂಬಗಳಿಗೂ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಚಿವ ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಬಿಡಿಎ ಅಧ್ಯಕ್ಷರು ಹಾಗೂ ಶಾಸಕ ಎನ್.ಎ.ಹ್ಯಾರೀಸ್, ಎಸ್.ಬೋಪಣ್ಣ, ಎಸ್.ವಿ.ಎಸ್.ಸುಬ್ರಹ್ಮಣ್ಯ ಗುಪ್ತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.