

ಭೋಪಾಲ್: ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ ತನ್ನ ಅಬ್ಬರದ ಆಟ ಮುಂದುವರಿಸಿದೆ. ಭೋಪಾಲ್‌ನ ನಾಥು ಬರ್ಖೇಡಾ ಅಂತಾರಾಷ್ಟ್ರೀಯ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ (ನ.27) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 6-2 ಗೋಲುಗಳ ಭರ್ಜರಿ ಜಯ ಸಾಧಿಸಿರುವ ಟೀಮ್ ಇಂಡಿಯಾ, ಫೈನಲ್‌ಗೆ ಲಗ್ಗೆ ಇಟ್ಟಿದೆ.
ಈ ಮೂಲಕ ಭಾರತ ತಂಡವು ಟೂರ್ನಿಯ ಇತಿಹಾಸದಲ್ಲೇ ಆರನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಶನಿವಾರ (ನ.28) ನಡೆಯಲಿರುವ ರೋಚಕ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಚೀನಾ ತಂಡವನ್ನು ಎದುರಿಸಲಿದೆ.
ಪಂದ್ಯದ ಮೊದಲ ನಿಮಿಷದಿಂದಲೇ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಆರಂಭದಲ್ಲಿ ಮಲೇಷ್ಯಾ ತಂಡ ರಕ್ಷಣಾತ್ಮಕ ಆಟವಾಡಿ ಭಾರತದ ದಾಳಿಯನ್ನು ತಡೆಯಲು ಯತ್ನಿಸಿತು. ಆದರೆ, 10ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಮುಮ್ತಾಜ್ ಖಾನ್ ಗೋಲಾಗಿ ಪರಿವರ್ತಿಸಿ ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು.
ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಆಟ ಮತ್ತಷ್ಟು ಚುರುಕಾಯಿತು. 18ನೇ ನಿಮಿಷದಲ್ಲಿ ನವನೀತ್ ಕೌರ್ ತಮ್ಮ ಅದ್ಭುತ ಕೌಶಲದಿಂದ ಚೆಂಡನ್ನು ಗುರಿ ಸೇರಿಸಿ ಮುನ್ನಡೆಯನ್ನು 2-0ಕ್ಕೆ ಏರಿಸಿದರು. ಇದಾದ ಬಳಿಕ 25ನೇ ನಿಮಿಷದಲ್ಲಿ ದೀಪಿಕಾ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು.
27ನೇ ನಿಮಿಷದಲ್ಲಿ ಮಲೇಷ್ಯಾದ ನೂರ್ ಅಜರ್ ಒಂದು ಗೋಲು ಗಳಿಸಿ ತಿರುಗೇಟು ನೀಡಿದರಾದರೂ, 30ನೇ ನಿಮಿಷದಲ್ಲಿ ದೀಪಿಕಾ ಮತ್ತೊಂದು ಪೆನಾಲ್ಟಿ ಕಾರ್ನರ್ ಗೋಲು ಗಳಿಸಿ ವಿರಾಮದ ವೇಳೆಗೆ ಭಾರತಕ್ಕೆ 4-1ರ ಭದ್ರ ಮುನ್ನಡೆ ಒದಗಿಸಿದರು.
ವಿರಾಮದ ನಂತರವೂ 33ನೇ ನಿಮಿಷದಲ್ಲಿ ಸುನೇಲಿತಾ ಟೊಪ್ಪೊ ಗೋಲು ಗಳಿಸಿ ಭಾರತದ ಮುನ್ನಡೆಯನ್ನು 5-1ಕ್ಕೆ ಹೆಚ್ಚಿಸಿದರು. 52ನೇ ನಿಮಿಷದಲ್ಲಿ ಮಲೇಷ್ಯಾದ ಜುಲ್ಕಿಫ್ಲಿ ಗೋಲು ಗಳಿಸಿ ಅಂತರ ತಗ್ಗಿಸುವ ಪ್ರಯತ್ನ ಮಾಡಿದರು. ಆದರೆ, ಪಂದ್ಯ ಮುಗಿಯಲು ಮೂರು ನಿಮಿಷಗಳಿರುವಾಗ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಇಶಿಕಾ ಗೋಲು ಬಾರಿಸುವ ಮೂಲಕ ಭಾರತದ 6-2ರ ಭರ್ಜರಿ ಗೆಲುವನ್ನು ಖಚಿತಪಡಿಸಿದರು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಜಪಾನ್ ವಿರುದ್ಧ 1-0 ಅಂತರದ ರೋಚಕ ಗೆಲುವು ಸಾಧಿಸಿದ ಚೀನಾ ಫೈನಲ್ ಪ್ರವೇಶಿಸಿದೆ. 60ನೇ ನಿಮಿಷದಲ್ಲಿ ಜಾಂಗ್ ಹೇಯಾಂಗ್ ಗಳಿಸಿದ ಏಕೈಕ ಗೋಲು ಚೀನಾಗೆ ಜಯ ತಂದುಕೊಟ್ಟಿತು. ಇನ್ನೊಂದೆಡೆ, ಥೈಲ್ಯಾಂಡ್ ವಿರುದ್ಧ 4-1 ಅಂತರದಲ್ಲಿ ಗೆದ್ದ ಕೊರಿಯಾ ಟೂರ್ನಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದೆ. ಇದೀಗ ಶನಿವಾರ ನಡೆಯಲಿರುವ ಭಾರತ ಮತ್ತು ಚೀನಾ ನಡುವಿನ ಫೈನಲ್ ಕಾದಾಟದ ಮೇಲೆ ಕ್ರೀಡಾಭಿಮಾನಿಗಳ ಚಿತ್ತ ನೆಟ್ಟಿದೆ, (ಏಜೆನ್ಸೀಸ್).