ಸಮಾನತೆಯ ಹೆಜ್ಜೆಗೆ 10 ಸಾವಿರ ಮಂದಿ ಸಾಥ್; 20ನೇ ವರ್ಷದ ‘ಬೆಂಗಳೂರು ವಾಕಥಾನ್’ ಯಶಸ್ವಿ

ಸಮರ್ಥನಂ ಟ್ರಸ್ಟ್ ಹಾಗೂ ಓಪನ್‌ಟೆಕ್ಸ್ಟ್ ಸಹಯೋಗದಲ್ಲಿ ಆಯೋಜನೆ; ‘ಎಲ್ಲರಿಗೂ ಆರೋಗ್ಯ’ ಧ್ಯೇಯದೊಂದಿಗೆ ಜಾಗೃತಿ ನಡಿಗೆ
ಸಮಾನತೆಯ ಹೆಜ್ಜೆಗೆ 10 ಸಾವಿರ ಮಂದಿ ಸಾಥ್; 20ನೇ ವರ್ಷದ ‘ಬೆಂಗಳೂರು ವಾಕಥಾನ್’ ಯಶಸ್ವಿ
Published on: 

ಬೆಂಗಳೂರು: ಆರೋಗ್ಯ, ಸಮಾನತೆ ಹಾಗೂ ವಿಶೇಷ ಚೇತನಸ್ನೇಹಿ ಮುಕ್ತ ವಾತಾವರಣ ನಿರ್ಮಿಸುವ ಉದಾತ್ತ ಆಶಯದೊಂದಿಗೆ ಶನಿವಾರ ನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 20ನೇ ಆವೃತ್ತಿಯ ‘ಬೆಂಗಳೂರು ವಾಕಥಾನ್’ ನಗರವಾಸಿಗಳನ್ನು ಒಂದೇ ವೇದಿಕೆಯಡಿ ಬೆಸೆಯಿತು. ‘ಸಮರ್ಥನಂ ವಿಶೇಷ ಚೇತನರ ಸಂಸ್ಥೆ’ ಹಾಗೂ ‘ಓಪನ್‌ಟೆಕ್ಸ್ಟ್’ ಸಹಯೋಗದಲ್ಲಿ ‘ಎಲ್ಲರಿಗೂ ಆರೋಗ್ಯ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆದ ಈ ಬೃಹತ್ ಜಾಗೃತಿ ನಡಿಗೆಯಲ್ಲಿ 10,000ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಹೆಜ್ಜೆ ಹಾಕಿದರು. ವಿಶೇಷವಾಗಿ ವಿಶೇಷ ಚೇತನರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ, ಈ ಕಾರ್ಯಕ್ರಮವು ದೇಶದ ಅತ್ಯಂತ ಒಳಗೊಳ್ಳುವ ಸಾರ್ವಜನಿಕ ಆಂದೋಲನಗಳಲ್ಲಿ ಒಂದೆಂಬ ತನ್ನ ಸ್ಥಾನವನ್ನು ಮತ್ತೊಮ್ಮೆ ಗಟ್ಟಿಗೊಳಿಸಿತು.

ಡಿಸೆಂಬರ್ 3ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆಯ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಈ ವಾಕಥಾನ್, ಸಮಾಜದ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸುವ ಶಕ್ತಿಶಾಲಿ ವೇದಿಕೆಯಾಗಿ ರೂಪುಗೊಂಡಿದೆ. ವಿಶೇಷ ಚೇತನರು, ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಸ್ವಯಂಸೇವಕರು, ಕಾರ್ಪೊರೇಟ್ ಸಂಸ್ಥೆಗಳು, ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಮುದಾಯ ಸಂಘಟನೆಗಳ ಪ್ರತಿನಿಧಿಗಳು ಒಟ್ಟಾಗಿ ಹೆಜ್ಜೆ ಹಾಕುವ ಮೂಲಕ ಸಾಮಾಜಿಕ ಒಗ್ಗಟ್ಟು ಮತ್ತು ಸಾಮೂಹಿಕ ಜವಾಬ್ದಾರಿಯನ್ನು ಸಾರಿದರು.

ಸಮರ್ಥನಂ ವಿಶೇಷ ಚೇತನರ ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಡಾ. ಮಹಾಂತೇಶ್ ಜಿ. ಕಿವಡಸಣ್ಣವರ್ ಮತ್ತು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರೆ, ಓಪನ್‌ಟೆಕ್ಸ್ಟ್ ಸಂಸ್ಥೆಯ ಕಾರ್ಪೊರೇಟ್ ಸಿಟಿಜನ್‌ಶಿಪ್ ವಿಭಾಗದ ಉಪಾಧ್ಯಕ್ಷೆ ಜೂಲಿ ಮಿಲ್ಲರ್ಡ್ ಅವರ ನೇತೃತ್ವದಲ್ಲಿ ನಡಿಗೆ ಸಾಗಿತು. ಎಲ್ಲರನ್ನೂ ಒಳಗೊಳ್ಳುವ ಸಮುದಾಯಗಳನ್ನು ನಿರ್ಮಿಸಲು ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಮರ್ಥನಂ ಹಾಗೂ ಓಪನ್‌ಟೆಕ್ಸ್ಟ್ ನಡುವಿನ ದೀರ್ಘಕಾಲದ ಸಹಭಾಗಿತ್ವಕ್ಕೆ ಇವರ ಉಪಸ್ಥಿತಿ ಸಾಕ್ಷಿಯಾಯಿತು.

ಗಣ್ಯರು, ತಾರೆಯರ ಭಾಗಿ:

ಕಾರ್ಯಕ್ರಮದಲ್ಲಿ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಕೆ. ರಾಮಮೂರ್ತಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎನ್. ನಾಗರಾಜು ಹಾಗೂ ಆಸ್ಟ್ರೇಲಿಯನ್ ಹೈಕಮಿಷನ್‌ನ ಹಂಗಾಮಿ ಕಾನ್ಸುಲ್ ಜನರಲ್ ಸ್ಟೀವನ್ ಕೊನೊಲಿ ಗೌರವ ಅತಿಥಿಗಳಾಗಿ ಭಾಗವಹಿಸಿ ನಡಿಗೆಗೆ ಮೆರುಗು ನೀಡಿದರು. ಇದೇ ವೇಳೆ ಕಾರ್ಪೊರೇಟ್ ವಲಯದ ಹಿರಿಯ ನಾಯಕರಾದ ಎಎನ್‌ಝಡ್ ಸಂಸ್ಥೆಯ ಸಿಎಫ್‌ಒ ಕವಿತಾ ರಮೇಶ್, ಜಿಕೆಎನ್ ಏರೋಸ್ಪೇಸ್‌ನ ಹೆಚ್‌ಆರ್ ಮತ್ತು ಸುರಕ್ಷತಾ ವಿಭಾಗದ ಮುಖ್ಯಸ್ಥೆ ಪ್ರಾರ್ಥನಾ ಯು., ಅವಾನ್ಸ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ಹಿರಿಯ ಬ್ಯುಸಿನೆಸ್ ಹೆಡ್ (ವಿದ್ಯಾರ್ಥಿ ಸಾಲ ಮತ್ತು ಅಂತಾರಾಷ್ಟ್ರೀಯ ವ್ಯವಹಾರ) ಇಮ್ತಿಯಾಜ್ ದೊಡ್ಡಮನಿ, ಡೈವರ್ಸಿಫೈಡ್ ಎಪಿಎಸಿ ಖರೀದಿ ವಿಭಾಗದ ನಿರ್ದೇಶಕಿ ಸುರುಚಿ ದಾತಿರ್, ಕ್ಯೂ2 ಸಂಸ್ಥೆಯ ನಿರ್ದೇಶಕ ಹಾಗೂ ಅಕೌಂಟಿಂಗ್ ಮುಖ್ಯಸ್ಥ ವೆಂಕಟ್ ನಂದನ್ ಪಾಲ್ಗೊಂಡು ಸಾಥ್ ನೀಡಿದರು. ಅಲ್ಲದೆ, ಕನ್ನಡ ಚಿತ್ರರಂಗದ ನಟ ಹಾಗೂ ಬರಹಗಾರ ಸುಮುಖ, ನಟಿ ಇಶಾ ಲಂಕೇಶ್ ಹಾಗೂ ಖ್ಯಾತ ಚಿತ್ರಕಥೆಗಾರ ಮತ್ತು ನಿರ್ದೇಶಕ ಪ್ರೀತಮ್ ಗುಬ್ಬಿ ಭಾಗವಹಿಸಿ ವಾಕಥಾನ್‌ಗೆ ವಿಶೇಷ ಆಕರ್ಷಣೆ ತಂದರು.

‘ಎಲ್ಲರಿಗೂ ಆರೋಗ್ಯ’ ಪ್ರಮುಖ ಮೈಲಿಗಲ್ಲು:

ಈ ಸಂದರ್ಭದಲ್ಲಿ ಮಾತನಾಡಿದ ಸಮರ್ಥನಂ ಸಂಸ್ಥೆಯ ಸಂಸ್ಥಾಪಕ ಡಾ. ಮಹಾಂತೇಶ್ ಜಿ. ಕಿವಡಸಣ್ಣವರ್, "ಸಮಾನ ಅವಕಾಶ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಾಣದ ಸಮರ್ಥನಂ ಪಯಣದಲ್ಲಿ ಈ 20ನೇ ವಾಕಥಾನ್ ಒಂದು ಮಹತ್ವದ ಮೈಲಿಗಲ್ಲಾಗಿದೆ. ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಈ ವರ್ಷದ ‘ಎಲ್ಲರಿಗೂ ಆರೋಗ್ಯ’ ಎಂಬ ಧ್ಯೇಯವು, ನಿಜವಾದ ಯೋಗಕ್ಷೇಮ ಕೇವಲ ವೈದ್ಯಕೀಯ ಆರೈಕೆಗೆ ಸೀಮಿತವಾಗದೆ, ಪ್ರತಿಯೊಬ್ಬರಿಗೂ ಗೌರವ, ಸುಗಮ ಅವಕಾಶ ಮತ್ತು ಒಳಗೊಳ್ಳುವಿಕೆಯನ್ನು ಖಾತ್ರಿಪಡಿಸಬೇಕು ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ. ಈ ಸಾಮಾಜಿಕ ಕಾರ್ಯಕ್ಕೆ ಧ್ವನಿಯಾಗಿ, ಶಕ್ತಿ ತುಂಬಿದ ನಮ್ಮ ಎಲ್ಲಾ ಪ್ರಾಯೋಜಕರು, ಪಾಲುದಾರರು, ಬೆಂಬಲಿಗರು ಮತ್ತು ಸ್ವಯಂಸೇವಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು" ಎಂದರು.

ಸತತ ಮೂರನೇ ಬಾರಿಗೆ ವಾಕಥಾನ್‌ನ ಮುಖ್ಯ ಪ್ರಾಯೋಜಕತ್ವ ವಹಿಸಿದ್ದ ಓಪನ್‌ಟೆಕ್ಸ್ಟ್ ಸಂಸ್ಥೆಯನ್ನು ಪ್ರತಿನಿಧಿಸಿ ಮಾತನಾಡಿದ ಜೂಲಿ ಮಿಲ್ಲರ್ಡ್, "ತಂತ್ರಜ್ಞಾನವು ಹೆಚ್ಚು ಒಳಗೊಳ್ಳುವ ಜಗತ್ತನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ ಎಂದು ಓಪನ್‌ಟೆಕ್ಸ್ಟ್ ನಂಬುತ್ತದೆ. ಆದರೆ, ನಿಜವಾದ ಒಳಗೊಳ್ಳುವಿಕೆಯು ಆರಂಭದ ಹಂತದಲ್ಲೇ ಎಲ್ಲರಿಗೂ ಮುಕ್ತ ಅವಕಾಶಗಳನ್ನು ವಿನ್ಯಾಸಗೊಳಿಸುವುದರಿಂದ ಪ್ರಾರಂಭವಾಗುತ್ತದೆ. ಇದರಿಂದ ಎಲ್ಲಾ ಸಾಮರ್ಥ್ಯದ ಜನರು ಭಾಗವಹಿಸಲು, ಪರಸ್ಪರ ಬೆರೆಯಲು ಮತ್ತು ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಈ ತತ್ವವು ಕೇವಲ ತಂತ್ರಜ್ಞಾನಕ್ಕೆ ಸೀಮಿತವಾಗದೆ, ನಾವು ಸೇವೆ ಸಲ್ಲಿಸುವ ಸಮುದಾಯಗಳಿಗೂ ವಿಸ್ತರಿಸುತ್ತದೆ. ಉದ್ದೇಶಪೂರ್ವಕವಾಗಿ ಸುಗಮ ವ್ಯವಸ್ಥೆ ಮತ್ತು ಒಳಗೊಳ್ಳುವಿಕೆಗೆ ಆದ್ಯತೆ ನೀಡಿದಾಗ ಎಂತಹ ದೊಡ್ಡ ಬದಲಾವಣೆ ತರಬಹುದು ಎಂಬುದನ್ನು ಸಮರ್ಥನಂ ಸಂಸ್ಥೆಯ ಕೆಲಸ ತೋರಿಸಿಕೊಟ್ಟಿದೆ; ಈ ವಾಕಥಾನ್ ಆ ಬದ್ಧತೆಗೆ ಜೀವ ತುಂಬಿದೆ. ವಾಕಥಾನ್‌ನ 20ನೇ ಆವೃತ್ತಿಯನ್ನು ಬೆಂಬಲಿಸಲು ಮತ್ತು ಪ್ರತಿಯೊಬ್ಬರಿಗೂ ಸಮಾನ ಅವಕಾಶ ಲಭ್ಯವಿರುವ ಭವಿಷ್ಯವನ್ನು ನಿರ್ಮಿಸಲು ಕೈಜೋಡಿಸಿರುವುದಕ್ಕೆ ಓಪನ್‌ಟೆಕ್ಸ್ಟ್ ಹೆಮ್ಮೆಪಡುತ್ತದೆ" ಎಂದು ಹೇಳಿದರು.

ಕಳೆದ ಎರಡು ದಶಕಗಳಲ್ಲಿ ‘ಬೆಂಗಳೂರು ವಾಕಥಾನ್’ ವೈವಿಧ್ಯಮಯ ಸಮುದಾಯಗಳನ್ನು ಒಂದೇ ವೇದಿಕೆಯಡಿ ಬೆಸೆಯುವ ಶಕ್ತಿಶಾಲಿ ಆಂದೋಲನವಾಗಿ ರೂಪುಗೊಂಡಿದ್ದು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಒಗ್ಗಟ್ಟು, ಘನತೆ ಮತ್ತು ಸಾಮೂಹಿಕ ಜವಾಬ್ದಾರಿಯ ಪ್ರತೀಕವನ್ನಾಗಿ ಪರಿವರ್ತಿಸಿದೆ. ಪ್ರತಿಯೊಬ್ಬರಿಗೂ ಸಮಾನವಾಗಿ ಭಾಗವಹಿಸುವ ಅವಕಾಶ ದೊರೆತಾಗ ಮಾತ್ರ ನಿಜವಾದ ಒಳಗೊಳ್ಳುವಿಕೆ ಅರ್ಥಪೂರ್ಣವಾಗುತ್ತದೆ ಎಂಬುದನ್ನು 20ನೇ ಆವೃತ್ತಿಯ ಈ ವಾಕಥಾನ್ ಮತ್ತೊಮ್ಮೆ ದೃಢಪಡಿಸಿ, ತನ್ನ ಎರಡು ದಶಕಗಳ ಪರಂಪರೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ.