More

    ಸಮಗ್ರ ನೋಟ 2020| ಕ್ರೀಡೆಗೂ ಕರೊನಾ ಕಾರ್ಮೋಡ

    ಮಹಾಯುದ್ಧದ ಬಳಿಕ ಮೊದಲ ಬಾರಿಗೆ ಜಾಗತಿಕ ಕ್ರೀಡಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡ ವರ್ಷವಿದು. ಇತರೆಲ್ಲರಂತೆ ಕ್ರೀಡಾಕ್ಷೇತ್ರ, ಕ್ರೀಡಾಪಟುಗಳಿಗೂ ಕರೊನಾ ವೈರಸ್ ಹಾವಳಿಯ ಬಿಸಿ ತಟ್ಟಿತು. ಟೋಕಿಯೊ ಒಲಿಂಪಿಕ್ಸ್, ಯುರೋಕಪ್ ಫುಟ್​ಬಾಲ್, ಟಿ20 ವಿಶ್ವಕಪ್​ನಂಥ ದೊಡ್ಡದೊಡ್ಡ ಕ್ರೀಡಾಕೂಟಗಳಿಗೆ ಈ ವರ್ಷ ಸಾಕ್ಷಿಯಾಗಬೇಕಾಗಿತ್ತು. ಆದರೆ, ಇತಿಹಾಸದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಒಂದು ವರ್ಷದ ಮಟ್ಟಿಗೆ ಮುಂದೂಡಲ್ಪಟ್ಟಿತು. ಕ್ರೀಡಾಕೂಟಗಳ ರದ್ದು ಮುಂದೂಡುವಿಕೆಯಿಂದ ಜಾಗತಿಕ ಕ್ರೀಡಾಲೋಕವೇ ತಲ್ಲಣಗೊಂಡಿತು. ಭಾರತೀಯ ಕ್ರೀಡಾಲೋಕ ಕೂಡ ಲಾಕ್​ಡೌನ್ ವೇಳೆ ಸಂಪೂರ್ಣ ಸ್ತಬ್ಧಗೊಂಡು ಅನ್​ಲಾಕ್ ಪ್ರಕ್ರಿಯೆಯ ವೇಳೆ ಒಂದೊಂದಾಗಿ ಅಭ್ಯಾಸ-ತರಬೇತಿ, ಸ್ಪರ್ಧೆಗೆ ಮರಳಿದವು. ವಿಶ್ವ ಮತ್ತು ಭಾರತೀಯ ಕ್ರಿಕೆಟ್ ಕೂಡ ಕರೊನಾಗೆ ತತ್ತರಿಸಿತು. ಕೊನೆಗೆ ಬಯೋ-ಬಬಲ್​ನಿಂದ ಕ್ರಿಕೆಟ್​ಗೆ ಮರುಜೀವ ದೊರೆಯಿತು. ಕ್ರೀಡೆಯ ಅವಿಭಾಜ್ಯ ಅಂಗವಾದ ಪ್ರೇಕ್ಷಕರನ್ನು ಕರೊನಾ ಭೀತಿಯಿಂದಾಗಿ ಸ್ಟೇಡಿಯಂನಿಂದ ಹೊರಗಿಡಬೇಕಾಯಿತು. ಈ ನಡುವೆ ಹಲವು ದಿಗ್ಗಜ ಕ್ರೀಡಾಪಟುಗಳ ಸಾವು-ವಿದಾಯಗಳನ್ನೂ ಕಂಡ 2020, ಸಿಹಿಗಿಂತ ಕಹಿಯನ್ನೇ ಯಥೇಚ್ಛವಾಗಿ ಉಣಬಡಿಸಿತು.

    ಟೀಮ್ ಇಂಡಿಯಾಗೂ ಲಾಕ್​ಡೌನ್ ಎಫೆಕ್ಟ್

    ವಿರಾಟ್ ಕೊಹ್ಲಿ ಬಳಗಕ್ಕೆ 2020ರಲ್ಲಿ ಬಿಡುವಿಲ್ಲದ ವೇಳಾಪಟ್ಟಿ ಸಿದ್ಧಗೊಂಡಿದ್ದರೂ, ಕರೊನಾದಿಂದಾಗಿ ಸುಮಾರು 8 ತಿಂಗಳ ಕಾಲ ಟೀಮ್ ಇಂಡಿಯಾ ಕ್ರಿಕೆಟ್​ನಿಂದ ದೂರ ಉಳಿದಿತ್ತು. ಶ್ರೀಲಂಕಾ ವಿರುದ್ಧ ತವರಿನಲ್ಲಿ ಟಿ20 ಸರಣಿಯಲ್ಲಿ ಸಮಗ್ರ ನೋಟ 2020| ಕ್ರೀಡೆಗೂ ಕರೊನಾ ಕಾರ್ಮೋಡ2-0ಯಿಂದ ಗೆದ್ದು ಭಾರತ ತಂಡ ಶುಭಾರಂಭ ಕಂಡಿತ್ತು. ಬಳಿಕ ಪ್ರವಾಸಿ ಆಸೀಸ್ ವಿರುದ್ಧ 2-1ರಿಂದ ಏಕದಿನ ಸರಣಿ ಜಯಿಸಿತು. ನ್ಯೂಜಿಲೆಂಡ್ ಪ್ರವಾಸದಲ್ಲೂ ಟಿ20 ಸರಣಿಯಲ್ಲಿ 5-0ಯಿಂದ ಗೆದ್ದು ಬೀಗಿದ ಭಾರತ ತಂಡ ಬಳಿಕ ಏಕದಿನ (0-3) ಮತ್ತು ಟೆಸ್ಟ್ (0-2) ಸರಣಿಯಲ್ಲಿ ಮಾತ್ರ ನಿರಾಸೆ ಎದುರಿಸಿತು. ತವರಿಗೆ ಮರಳಿದ ಭಾರತ ತಂಡ, ಐಪಿಎಲ್​ಗೆ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆಡಬೇಕಾಗಿತ್ತು. ಆದರೆ ಮಾರ್ಚ್ ನಲ್ಲಿ ಕರೊನಾ ಹಾವಳಿ ಶುರುವಾದ ಕಾರಣ ಸರಣಿ ಮೊಟಕುಗೊಂಡಿತು. ಅರಬ್ ನಾಡಿನಲ್ಲಿ ತಡವಾಗಿ ನಡೆದ ಐಪಿಎಲ್ 13ನೇ ಆವೃತ್ತಿಯ ಬಳಿಕ ನೇರವಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ ಭಾರತ ತಂಡ, ಏಕದಿನ ಸರಣಿಯಲ್ಲಿ 1-2ರಿಂದ ಸೋತರೂ, ಟಿ20 ಸರಣಿಯಲ್ಲಿ ಅಷ್ಟೇ ಅಂತರದಿಂದ ತಿರುಗೇಟು ನೀಡಿತು. ಬಾರ್ಡರ್-ಗಾವಸ್ಕರ್ ಟ್ರೋಫಿಯಲ್ಲಿ ಅಹರ್ನಿಶಿ ಟೆಸ್ಟ್​ನಲ್ಲಿ ಭಾರತ 2ನೇ ಇನಿಂಗ್ಸ್ ನಲ್ಲಿ ತನ್ನ 88 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ನಿಕೃಷ್ಟ 36 ರನ್​ಗಳಿಗೆ ಆಲೌಟ್ ಆಗಿ ಮುಖಭಂಗ ಎದುರಿಸಿದರೂ, ಮೆಲ್ಬೋರ್ನ್ ನಲ್ಲಿ ರಹಾನೆ ಸಾರಥ್ಯದಲ್ಲಿ ತಿರುಗೇಟು ನೀಡಿ ಬೀಗಿತು. ಈ ನಡುವೆ ರೋಹಿತ್ ಶರ್ಮ ಗಾಯದ ಬಗೆಗಿನ ಗೊಂದಲವೂ ಸಾಕಷ್ಟು ವಿವಾದವೆಬ್ಬಿಸಿತು.

    117 ದಿನ ಕ್ರಿಕೆಟ್ ಬಂದ್

    ಮಾರ್ಚ್ 13ರಂದು ಸಿಡ್ನಿಯಲ್ಲಿ ನಡೆದ ಆಸೀಸ್-ಕಿವೀಸ್ ಏಕದಿನ ಪಂದ್ಯದ ಬಳಿಕ ಜುಲೈ 8ರಿಂದ ಸೌಥಾಂಪ್ಟನ್​ನಲ್ಲಿ ನಡೆದ ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಪಂದ್ಯದವರೆಗೆ 117 ದಿನಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಪೂರ್ಣ ಸ್ಥಗಿತಗೊಂಡಿತ್ತು. ಇದು 2ನೇ ಮಹಾಯುದ್ಧದ ಬಳಿಕ ಕ್ರಿಕೆಟ್​ಗೆ ಬಿದ್ದ ಸುದೀರ್ಘ ಬ್ರೇಕ್.

    ಎಂಎಸ್ ಧೋನಿ ವಿದಾಯ

    ಭಾರತ ಕಂಡ ಅತ್ಯುತ್ತಮ ನಾಯಕ, ವಿಕೆಟ್ ಕೀಪರ್ ಎಂಎಸ್ ಧೋನಿ ನಿವೃತ್ತಿಯ ಬಗ್ಗೆ ವರ್ಷದಿಂದ ಹರಡಿದ್ದ ಗೊಂದಲಗಳಿಗೆ ಸ್ವಾತಂತ್ರ್ಯ ದಿನದ ಸಂಜೆ ಕೊನೆಗೂ ತೆರೆ ಎಳೆದರು. ಟಿ20 ವಿಶ್ವಕಪ್ ಮುಂದೂಡಿಕೆಯ ಬಳಿಕ, 39 ವರ್ಷದ ಧೋನಿ ನಿವೃತ್ತಿಯ ನಿರೀಕ್ಷೆ ಇಡಲಾಗಿದ್ದರೂ, ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿರುವ ನಡುವೆ ಅವರು ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಮತ್ತು ಚುಟುಕು ಸಂದೇಶದ ಮೂಲಕ ದಿಢೀರ್ ನಿರ್ಧಾರ ಪ್ರಕಟಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಅವರ ಗೆಳೆಯ, ಸಹ-ಆಟಗಾರ ಸುರೇಶ್ ರೈನಾ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಮತ್ತಷ್ಟು ಅಚ್ಚರಿ ನೀಡಿದರು. ಇತರ ಪ್ರಮುಖ ನಿವೃತ್ತಿ: ಪಾರ್ಥಿವ್ ಪಟೇಲ್ (ಕ್ರಿಕೆಟ್), ಮರಿಯಾ ಶರಪೋವಾ (ಟೆನಿಸ್), ಲಿನ್ ಡ್ಯಾನ್ (ಬ್ಯಾಡ್ಮಿಂಟನ್).

    ಪಿವಿ ಸಿಂಧು ನಿವೃತ್ತಿ ವಿವಾದ

    ಕರೊನಾದಿಂದಾಗಿ ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆದ ನಡುವೆ ಪಿವಿ ಸಿಂಧು, ‘ನಿವೃತ್ತಿ’ ಟ್ವೀಟ್ ಮೂಲಕ ಕ್ರೀಡಾವಲಯದಲ್ಲಿ ಸಂಚಲನ ಮೂಡಿಸಿದ್ದರು. ಕರೊನಾ ನಕಾರಾತ್ಮಕತೆಯಿಂದಷ್ಟೇ ನಿವೃತ್ತಿ ಹೊಂದುತ್ತಿದ್ದೇನೆ ಎಂದು ವಿವರಣೆಯನ್ನೂ ಜತೆಗೆ ನೀಡಿದರು. ಈ ನಡುವೆ ಪಿವಿ ಸಿಂಧು, ಹೆತ್ತವರ ಜತೆಗೆ ಜಗಳವಾಡಿ ಸಿಟ್ಟಿನಿಂದ ಹೈದರಾಬಾದ್​ನಿಂದ ಲಂಡನ್​ಗೆ ತೆರಳಿದ್ದಾರೆ ಎಂಬ ಊಹಾಪೋಹವೂ ಹರಡಿತ್ತು.

    ಸಾನಿಯಾ ಪುನರಾಗಮನ

    ತಾಯ್ತನದ 2 ವರ್ಷಗಳ ಬಿಡುವಿನ ಬಳಿಕ ಸಾನಿಯಾ ಮಿರ್ಜಾ ಮರಳಿ ಕಣಕ್ಕಿಳಿದು ಹೋಬರ್ಟ್ ಟೂರ್ನಿಯಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದರು. ಆದರೆ ಕರೊನಾದಿಂದಾಗಿ ಸಾನಿಯಾಗೆ ಬಳಿಕ ಹೆಚ್ಚಿನ ಟೂರ್ನಿಗಳಲ್ಲಿ ಆಡಲು ಸಾಧ್ಯವಾಗಲಿಲ್ಲ.

    ಪಂಚ ಖೇಲ್​ರತ್ನ

    ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್​ರತ್ನ ಪ್ರಶಸ್ತಿಯನ್ನು ಇದೇ ಮೊದಲ ಬಾರಿ ಐವರು ಪಡೆದರು. ರೋಹಿತ್ ಶರ್ಮ, ವಿನೇಶ್ ಪೋಗಟ್, ಮರಿಯಪ್ಪನ್ ತಂಗವೇಲು, ಮನಿಕಾ ಬಾತ್ರಾ ಮತ್ತು ರಾಣಿ ರಾಂಪಾಲ್ ಈ ಗೌರವ ಪಡೆದವರು.

    ಸೌರಾಷ್ಟ್ರಕ್ಕೆ ರಣಜಿ ಕಿರೀಟ

    ಸೌರಾಷ್ಟ್ರ ಚೊಚ್ಚಲ ರಣಜಿ ಟ್ರೋಫಿ ಒಲಿಸಿಕೊಂಡರೆ, ಬಂಗಾಳ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.

    ಕಣ್ಮರೆಯಾದ ದಿಗ್ಗಜರು

    ಅನೇಕ ಜಾಗತಿಕ ಕ್ರೀಡಾತಾರೆಯರು ಕಣ್ಮರೆಯಾದ ವರ್ಷವಿದು. ‘ದೇವರ ಕೈ’ ಖ್ಯಾತಿಯ ಅರ್ಜೆಂಟೀನಾದ ಫುಟ್​ಬಾಲ್ ದಿಗ್ಗಜ ಡೀಗೊ ಮರಡೋನಾ ಹೃದಯಾಘಾತದಿಂದ ನವೆಂಬರ್​ನಲ್ಲಿ ನಿಧನ ಹೊಂದಿದರು. ವರ್ಷಾರಂಭದಲ್ಲಿ ಅಮೆರಿಕದ ‘ಬ್ಲಾ್ಯಕ್ ಮಾಂಬ’ ಖ್ಯಾತಿಯ ಬಾಸ್ಕೆಟ್​ಬಾಲ್ ದಿಗ್ಗಜ ಕೋಬ್ ಬ್ರಿಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ಅಕಾಲಿಕವಾಗಿ ಅಸುನೀಗಿದರು. ಟೆಸ್ಟ್ ಕ್ರಿಕೆಟ್​ನಲ್ಲಿ ಸುನೀಲ್ ಗಾವಸ್ಕರ್ ಜತೆಗೆ ಯಶಸ್ವಿ ಆರಂಭಿಕ ಜೋಡಿ ಎನಿಸಿದ್ದ ಚೇತನ್ ಚೌಹಾಣ್ ಅವರನ್ನು ಕರೊನಾ ಸೋಂಕು ಬಲಿ ಪಡೆಯಿತು. ಉತ್ತರ ಪ್ರದೇಶ ಸರ್ಕಾರದ ಸಚಿವರಾಗಿದ್ದ ಚೌಹಾಣ್ ಕರೊನಾ ವಿರುದ್ಧದ ಹೋರಾಟದಲ್ಲಿ ಸೋಲು ಕಂಡರು. ಐಪಿಎಲ್ ವೀಕ್ಷಕವಿವರಣೆಗಾಗಿ ಭಾರತಕ್ಕೆ ಬಂದಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ಹೃದಯಾಘಾತದಿಂದ ಮೃತಪಟ್ಟರು. ಮೃತಪಟ್ಟ ಇತರ ಪ್ರಮುಖರು: ರಣಜಿಯಲ್ಲಿ ಗರಿಷ್ಠ ವಿಕೆಟ್ ಗಳಿಸಿದ ಮಾಜಿ ಸ್ಪಿನ್ನರ್ ರಾಜಿಂದರ್ ಗೋಯೆಲ್, ಶತಾಯುಷಿ ದೇಶೀಯ ಕ್ರಿಕೆಟಿಗ ವಸಂತ್ ರೈಜಿ; 3 ಒಲಿಂಪಿಕ್ಸ್ ಸ್ವರ್ಣ ವಿಜೇತ ಹಾಕಿ ಆಟಗಾರ ಬಲ್ಬೀರ್ ಸಿಂಗ್ ಸೀನಿಯರ್; ಚುನಿ ಗೋಸ್ವಾಮಿ (ಫುಟ್​ಬಾಲ್-ಕ್ರಿಕೆಟ್).

    ಗ್ರಾಂಡ್ ಸ್ಲಾಂ ಟೆನಿಸ್ ವಿಜೇತರು

    • ಆಸ್ಟ್ರೇಲಿಯನ್ ಓಪನ್: ನೊವಾಕ್ ಜೋಕೊವಿಕ್, ಸೋಫಿಯಾ ಕೆನಿನ್
    • ಯುಎಸ್ ಓಪನ್: ಡೊಮಿನಿಕ್ ಥೀಮ್ ನವೊಮಿ ಒಸಾಕಾ
    • ಫ್ರೆಂಚ್ ಓಪನ್: ರಾಫೆಲ್ ನಡಾಲ್ (13), ಇಗಾ ಸ್ವಿಯಾಟೆಕ್

    ವಿರಾಟ್ ಕೊಹ್ಲಿಗೆ ಶತಕವಿಲ್ಲದ ವರ್ಷ

    ತಂದೆಯಾಗುತ್ತಿರುವ ಸಿಹಿ ಸುದ್ದಿಯ ನಡುವೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಾರಿ ಮೈದಾನದಲ್ಲಿ ಹೆಚ್ಚಿನ ಯಶ ಕಾಣಲಿಲ್ಲ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಬಳಿಕ ಅವರು ಇದೇ ಮೊದಲ ಬಾರಿಗೆ ಶತಕವಿಲ್ಲದೆ ವರ್ಷ ಮುಗಿಸಿದರು. ಕೊಹ್ಲಿ ನಾಯಕತ್ವವೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿ, ರೋಹಿತ್ ಶರ್ಮಗೆ ಸೀಮಿತ ಓವರ್ ನಾಯಕತ್ವ ವಹಿಸಬೇಕೆಂಬ ಒತ್ತಾಯ ಬಂದವು.

    ಮತ್ತೆ ರನ್ನರ್​ಅಪ್

    ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳೆಯರ ಟಿ20 ವಿಶ್ವಕಪ್​ನಲ್ಲಿ ಭಾರತ ಮೊದಲ ಬಾರಿಗೆ ಫೈನಲ್​ಗೇರಿ ಇತಿಹಾಸ ನಿರ್ವಿುಸಿತು. ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8ರಂದು ಮೆಲ್ಬೋರ್ನ್​ನಲ್ಲಿ ದಾಖಲೆಯ ಸಂಖ್ಯೆಯ ಪ್ರೇಕ್ಷಕರ ಎದುರು ನಡೆದ ಫೈನಲ್​ನಲ್ಲಿ ಭಾರತ ತಂಡ ಆತಿಥೇಯ ಆಸ್ಟ್ರೇಲಿಯಾ ತಂಡ ಆರ್ಭಟದ ಎದುರು ಮಂಕಾಗಿ ರನ್ನರ್​ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ಹರ್ವನ್​ಪ್ರೀತ್ ಬಳಗ ಲೀಗ್ ಹಂತದಲ್ಲಿ ಅಜೇಯ ಸಾಧನೆ ಮಾಡಿತ್ತು.

    ಬಯೋ-ಬಬಲ್​ನಲ್ಲಿ ಐಪಿಎಲ್

    ಏಪ್ರಿಲ್-ಮೇನಲ್ಲಿ ನಡೆಯಬೇಕಿದ್ದ ಐಪಿಎಲ್ ಲಾಕ್​ಡೌನ್​ನಿಂದಾಗಿ ಮುಂದೂಡಲ್ಪಟ್ಟಿತು. ಕೊನೆಗೆ ಭಾರತದಲ್ಲಿ ಟೂರ್ನಿ ನಡೆಸುವುದು ಸಾಧ್ಯವಾಗದಿದ್ದಾಗ ಅರಬ್ ರಾಷ್ಟ್ರ ಯುಎಇಗೆ ಸ್ಥಳಾಂತರಗೊಂಡಿತು. ಕರೊನಾ ಭೀತಿಯ ನಡುವೆ ಟೂರ್ನಿಗಾಗಿ ನಿರ್ವಿುಸಲಾಗಿದ್ದ ಬಯೋ-ಬಬಲ್ ವಲಯದಲ್ಲಿ ಟೂರ್ನಿ ಯಶಸ್ವಿಯಾಗಿ ನಡೆಯಿತು. ಟೂರ್ನಿಯ ಆರಂಭದಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡ ಕರೊನಾ ಪ್ರಕರಣ ಎದುರಿಸಿದರೂ, ಬಳಿಕ ನಿರ್ವಿಘ್ನವಾಗಿ ಸಾಗಿತು. ರೋಹಿತ್ ಶರ್ಮ ಸಾರಥ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 5ನೇ ಬಾರಿ ಚಾಂಪಿಯನ್ ಎನಿಸಿದರೆ, ಇದೇ ಮೊದಲ ಬಾರಿಗೆ ಫೈನಲ್​ಗೇರಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ರನ್ನರ್​ಅಪ್​ಗೆ ತೃಪ್ತಿಪಟ್ಟಿತು. ಕನ್ನಡಿಗ ಕೆಎಲ್ ರಾಹುಲ್ ಟೂರ್ನಿಯಲ್ಲಿ ಸರ್ವಾಧಿಕ ರನ್ ಸ್ಕೋರರ್ ಎನಿಸಿದರು. ಕನ್ನಡಿಗ ದೇವದತ್ ಪಡಿಕಲ್, ಟಿ. ನಟರಾಜನ್, ವರುಣ್ ಚಕ್ರವರ್ತಿ, ರಾಹುಲ್ ತೆವಾಟಿಯಾ ಈ ಬಾರಿ ಗಮನ ಸೆಳೆದ ಹೊಸಬರು. ಆರ್​ಸಿಬಿ ಈ ಸಲವೂ ಕಪ್ ಕೈಚೆಲ್ಲಿದರೆ, ಚೆನ್ನೈ ಸೂಪರ್ಕಿಂಗ್ಸ್ ಟೂರ್ನಿ ಇತಿಹಾಸದಲ್ಲಿ ಮೊದಲ ಬಾರಿ ಪ್ಲೇಆಫ್​ಗೇರಲಿಲ್ಲ.

    ಮುಂದೂಡಲ್ಪಟ್ಟ ಕೂಟಗಳು

    • ಟೋಕಿಯೊ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್
    • ಯುರೋ ಕಪ್ ಫುಟ್​ಬಾಲ್
    • ಟಿ20 ವಿಶ್ವಕಪ್ (ಆಸ್ಟ್ರೇಲಿಯಾ ಆತಿಥ್ಯ)
    • ಟಿ20 ಏಷ್ಯಾಕಪ್
    • ಕ್ರೀಡಾಲೀಗ್​ಗಳೂ ಮುಂದೂಡಿಕೆ: ಪ್ರೊ ಕಬಡ್ಡಿ ಲೀಗ್, ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್, ಪ್ರೊ ಹ್ಯಾಂಡ್​ಬಾಲ್ ಲೀಗ್
    • ರದ್ದುಗೊಂಡ ಕೂಟಗಳು: ವಿಂಬಲ್ಡನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿ, ಭಾರತದಲ್ಲಿ ನಿಗದಿಯಾಗಿದ್ದ ಮಹಿಳೆಯರ 17 ವಯೋಮಿತಿ ಫಿಫಾ ವಿಶ್ವಕಪ್

    ಕಿರಿಯರಿಗೆ ಬಾಂಗ್ಲಾ ಶಾಕ್

    ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಅಜೇಯವಾಗಿ ಫೈನಲ್​ಗೇರಿತ್ತು. ಕ್ವಾರ್ಟರ್​ಫೈನಲ್​ನಲ್ಲಿ ಆಸ್ಟ್ರೇಲಿಯಾ, ಸೆಮೀಸ್​ನಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿತ್ತು. ಆದರೆ ಫೈನಲ್​ನಲ್ಲಿ ಉತ್ಸಾಹಿ ಬಾಂಗ್ಲಾದೇಶ ಹುಡುಗರ ವಿರುದ್ಧ ಭಾರತ ಆಘಾತ ಎದುರಿಸಿ ಸತತ 2ನೇ ಬಾರಿ ಕಿರಿಯರ ವಿಶ್ವಕಪ್ ಜಯಿಸುವ ಅವಕಾಶ ಕೈಚೆಲ್ಲಿತು. ಭಾರತದ ಯಶಸ್ವಿ ಜೈಸ್ವಾಲ್ (400) ಮತ್ತು ರವಿ ಬಿಷ್ಣೋಯಿ (17) ಟೂರ್ನಿಯಲ್ಲಿ ಅತ್ಯಧಿಕ ರನ್, ವಿಕೆಟ್ ಗಳಿಸಿದ ಸಾಧನೆ ಮಾಡಿದರು.

    ವಿವಾಹ

    • ಯಜುವೇಂದ್ರ ಚಾಹಲ್ (ಕ್ರಿಕೆಟ್)
    • ದೀಪಿಕಾ ಕುಮಾರಿ- ಅತನು ದಾಸ್ (ಆರ್ಚರಿ)
    • ಭಜರಂಗ್ ಪೂನಿಯಾ- ಸಂಗೀತಾ ಪೋಗಟ್ (ಕುಸ್ತಿ)

    ಬರಹ: ಪ್ರಸಾದ್ ಶೆಟ್ಟಿಗಾರ್, ರಘುನಾಥ್ ಡಿ.ಪಿ. -ಠಿ;ವಿನ್ಯಾಸ: ಹರೀಶ್ ಕುಮಾರ್ ಆರ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts