More

    ಸಭ್ಯತೆಯ ಎಲ್ಲೆ ಮೀರದ ಮಾತು!

    ಡಿಕೆಸು ವಿರುದ್ಧ ಬಿಜೆಪಿ – ಜೆಡಿಎಸ್ ಟೀಕಾಪ್ರಹಾರ

     

    ಗಂಗಾಧರ್ ಬೈರಾಪಟ್ಟಣ


    ರಾಮನಗರ: ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವ ಗಾದೆ ಈ ಲೋಕಸಭೆ ಚುನಾವಣೆಯಲ್ಲಿ ಪ್ರಸ್ತುತ ಎನಿಸಿದೆ.

    ಪ್ರಭಲ ಪೈಪೋಟಿ ಏರ್ಪಟ್ಟಿರುವ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಪರಸ್ಪರರ ವಿರುದ್ಧ ಎಲ್ಲಿಯೂ ಟೀಕೆಗೆ ಇಳಿಯದೇ ಇರುವುದು ಈ ಬಾರಿಯ ವಿಶೇಷಗಳಲ್ಲಿ ಒಂದು.

    ಈ ಹಿಂದಿನ ಎಲ್ಲಾ ಚುಣಾವಣೆಗಳಲ್ಲಿ ಅಭ್ಯರ್ಥಿಗಳು ಪರಸ್ಪರ ವಿರುದ್ಧ ಟೀಕೆ ಮಾಡಿಕೊಂಡು ಮತದಾರರ ಬಾಯಿಗೆ ಆಹಾರವಾಗುತ್ತಿದ್ದರು. ಆದರೆ ಈವರೆಗೂ ಇಂತಹ ಮಾತುಗಳು ಇಬ್ಬರೂ ಅಭ್ಯರ್ಥಿಗಳಿಂದ ಹೊರ ಬಿದ್ದಿಲ್ಲ.

    ಡಾಕ್ಟರ್ ಬಗ್ಗೆ ಎಚ್ಚರಿಕೆ ನಡೆ

    DR Manjunath

    ಡಾ. ಸಿ.ಎನ್.ಮಂಜುನಾಥ್ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ ಎನ್ನುವ ಗುಸು ಗುಸುಗಳ ಸಂದರ್ಭದಲ್ಲಿ ಮಾಗಡಿ ಶಾಸಕ ಬಾಲಕೃಷ್ಣ, ಡಾಕ್ಟರ್ ಹರಕೆ ಕುರಿ, ಬಲಿಪಶು ಎಂದೆಲ್ಲಾ ಹೇಳಿದ್ದು ಬಿಟ್ಟರೆ. ಉಳಿದಂತೆ ಗುರುವಾರ ನಡೆದ ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಾಕ್ಟರ್ ವೈಟ್ ಕಾಲರ್, ಇವರು ಬೇಕಾ ಎನ್ನುವ ಮಾತುಗಳನ್ನು ಆಡಿದ್ದರು. ಆದರೆ ಎಲ್ಲಿಯೂ ಅವರ ಬಗ್ಗೆ ಟೀಕೆ ಮಾಡುವ ಯತ್ನಕ್ಕೆ ಮುಂದಾಗಲೇ ಇಲ್ಲ.

    ಮತ್ತೊಂದೆಡೆ ಡಿ.ಕೆ. ಶಿ ಸಹೋದರರು ಸಹ ಡಾಕ್ಟರ್ ಬಗ್ಗೆ ಎಚ್ಚರಿಕೆ ನಡೆಯಿಟ್ಟಿದ್ದಾರೆ. ಎಲ್ಲಿಯೂ ಡಾ.ಸಿ.ಎನ್.ಮಂಜುನಾಥ್ ಅವರನ್ನು ಟೀಕಿಸುವ ಸಾಹಸಕ್ಕೆ ಇಳಿಯಲಿಲ್ಲ. ಇಷ್ಟೇ ಅಲ್ಲದೆ, ತಮ್ಮ ಶಾಸಕರು ಹಾಗೂ ಪಕ್ಷದ ಮುಖಂಡರಿಗೂ ಸಹ ನಿದೇರ್ಶನ ನೀಡಿದ್ದು, ಯಾವುದೇ ಕಾರಣಕ್ಕೂ ಡಾಕ್ಟರ್ ಅವರನ್ನು ಟಾರ್ಗೆಟ್ ಮಾಡದಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

    ಗೆರೆ ದಾಟದ ಡಾಕ್ಟರ್


    ಒಂದೆಡೆ ಬಿಜೆಪಿ – ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ನಡುವೆ ಮಾತಿನ ಸಮರ ನಡೆಯುತ್ತಿದ್ದರೆ. ಅತ್ತ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರ ಸಭ್ಯತೆ ಗೆರೆಯನ್ನು ದಾಟುತ್ತಿಲ್ಲ. ತಮ್ಮದೇ ವೇದಿಕೆಯಲ್ಲಿ ಯಾವೆಲ್ಲಾ ನಾಯಕರೂ ತಮ್ಮ ಪ್ರತಿ ಸ್ಪರ್ಧಿ ವಿರುದ್ಧ ಎಷ್ಟೇ ಆರೋಪಗಳನ್ನು ಮಾಡಿ, ಟೀಕಾ ಪ್ರಹಾರಗಳನ್ನು ನಡೆಸಿದರೂ ಈವರೆವಿಗೂ ಎಲ್ಲಿಯೂ ತಮ್ಮ ಪ್ರತಿ ಸ್ಪರ್ಧಿಯನ್ನಾಗಲಿ, ಇಲ್ಲವೇ ಎದುರಾಳಿ ಪಕ್ಷದ ನಾಯಕರನ್ನಾಗಲಿ ಟೀಕಿಸುತ್ತಿಲ್ಲ. ಮಾಧ್ಯಮಗಳೂ ಪ್ರಶ್ನೆಗಳ ಮೂಲಕ ಕೆಣಕಿದರೂ ಎಲ್ಲದಕ್ಕೂ ಸಭ್ಯತೆ ಎಲ್ಲಿಯೇ ಉತ್ತರ ಕೊಡುವ ಮೂಲಕ ರಾಜಕೀಯ ನೈಪುಣ್ಯತೆಯನ್ನು ಮರೆಯುತ್ತಿದ್ದಾರೆ.

    ಮಂಡ್ಯ ಉದಾಹರಣೆ


    ಕಾಂಗ್ರೆಸ್ ನಾಯಕರು ಡಾ.ಮಂಜುನಾಥ್ ಅವರನ್ನಾಗಲಿ, ಮಂಜುನಾಥ್ ಅವರು ತಮ್ಮ ಪ್ರತಿ ಸ್ಪರ್ಧಿ ಡಿ.ಕೆ.ಸುರೇಶ್ ಅವರನ್ನಾಗಲಿ ಪರಸ್ಪರ ಟೀಕೆ ಮಾಡದೇ ಕಳೆದ ಬಾರಿ ಮಂಡ್ಯ ಲೋಕಸಭೆ ಚುಣಾವಣೆ ಕಲಿಸಿದ ಪಾಠ ಕಾರಣ ಎನ್ನಲಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಕಾರಣಗಳಲ್ಲಿ ನಾಯಕರು ಆಡಿದ ಮಾತುಗಳೂ ಒಂದು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ವೈಧ್ಯ ವೃತ್ತಿ ಮೂಲಕವೇ ಹೆಸರು ಮಾಡಿರುವ ಡಾ.ಸಿ.ಎನ್.ಮಂಜುನಾಥ್ ಅವರ ವಿರುದ್ಧ ಯಾರೂ ಟೀಕೆ ಮಾಡುತ್ತಿಲ್ಲ. ಅತ್ತ ಮಂಜುನಾಥ್ ಅವರೂ ಸಹ ಟೀಕೆ ಮಾಡುವುದರಿಂದ ದೂರವೇ ಉಳಿದಿದ್ದಾರೆ.



    ಮುನಿರತ್ನ – ಡಿಕೆಸು ಜಗಳ್ ಬಂದಿ

    muniratna DK Brothers
    ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ನಡುವೆ ಪ್ರತಿ ಕಾರ್ಯಕ್ರಮದಲ್ಲಿಯೂ ಜಗಳ್ ಬಂದಿ ನಡೆಯುತ್ತಲೇ ಇದೆ. ಬಿಜೆಪಿ ವೇದಿಕೆಗಳಲ್ಲಿ ಡಿ.ಕೆ ಸುರೇಶ್ ಅವರ ವಿರುದ್ಧ ಟೀಕಾ ಪ್ರಹಾರ ನಡೆಸುವ ಮುನಿರತ್ನ ಸಿನಿಮಾಗಳಲ್ಲಿ ಸೃಷ್ಠಿಯಾಗುವ ಸ್ವರ್ಗ, ನರಕಗಳಿಗೆ ಹೋಲಿಕೆ ಮಾಡಿ ಮಾತನಾಡುತ್ತಾರೆ.
    ಅತ್ತ ಡಿ.ಕೆ.ಸುರೇಶ್ ಸಹ ಮುನಿರತ್ನ ಹೆಸರು ಹೇಳದೆ, ಅವರು ಸಿನಿಮಾ ನಿರ್ಮಾಪಕರು ಅವರಿಗೆ, ಕಥೆ ಬರೆಯುವುದು, ನಿರ್ದೇಶನ ಮಾಡುವುದು ಗೊತ್ತಿದೆ, ಸ್ವರ್ಗ, ನರಕ ಎಲ್ಲಾ ಕ್ರಿಯೇಟ್ ಮಾಡೋದು ಗೊತ್ತಿದೆ ಎನ್ನುವ ರೀತಿಯಲ್ಲಿ ಟಾಂಗ್ ನೀಡುತ್ತಲೇ ಬರುತ್ತಿದ್ದಾರೆ. ಒಟ್ಟಾರೆ ಎಲ್ಲೆಡೆಯೂ ಮಂಜುನಾಥ್ – ಸುರೇಶ್ ನಡುವಿನ ಮಾತಿನ ಸಮರಕ್ಕಿಂತ ಮುನಿರತ್ನ – ಸುರೇಶ್ ನಡುವಿನ ಜಟಾಪಟಿಯೇ ಹೆಚ್ಚಿದೆ.

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts