More

    ಹುಲಿಯ ಜಾಡು ಪತ್ತೆಗೆ ವಿಶೇಷ ತಂಡ; ಕೂಂಬಿಂಗ್‌ಗೆ ಎಸಿಎಫ್ ಮಹೇಶ್ ಮಾಲಗತ್ತಿ ನೇತೃತ್ವದ ಟೀಮ್ 

     ತುಮಕೂರು: ಅಂಕಸಂದ್ರ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮೃತಪಟ್ಟ ಹುಲಿಯ ಜಾಡು ಪತ್ತೆಗೆ ಎಸಿಎಫ್ ಮಹೇಶ್ ಮಾಲಗತ್ತಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಹುಲಿ ಕಳೇಬರ ಪತ್ತೆಯಾದ 10 ಕಿ.ಮೀ., ಸುತ್ತಮುತ್ತಲಿನ ಪ್ರದೇಶದಲ್ಲಿ ಕೂಂಬಿಂಗ್ ನಡೆಸಲಿರುವ ತಂಡವು ಯಾವ ಕಡೆಯಿಂದ ಹುಲಿ ಬಂದಿರಬಹುದೆಂಬ ಸುಳಿವು ಪತ್ತೆ ಹಚ್ಚಲಿದೆ.

    ಗುಬ್ಬಿ ತಾಲೂಕು ಚೇಳೂರು ಹೋಬಳಿ ಚಿಕ್ಕಹೆಡಿಗೆಹಳ್ಳಿ ಬಳಿಯ ಚೇಳೂರು-ಶಿರಾ ಮಾರ್ಗದ ಅಂಕಸಂದ್ರ ಸಂರಕ್ಷಿತಾ ಅರಣ್ಯ ಪ್ರದೇಶದಲ್ಲಿನ ಮೂಡಲಪಾಳ್ಯದ ರಸ್ತೆ ಸೇತುವೆಯಡಿ 6-7 ವರ್ಷದ ಗಂಡು ಹುಲಿ ಕಳೇಬರ ಮಂಗಳವಾರ ಪತ್ತೆಯಾಗಿತ್ತು. ಹುಲಿಯ ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ನಿಖರ ಮಾಹಿತಿ ತಿಳಿಯಲು ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ಎಸಿಎಫ್ ನೇತೃತ್ವದ ತಂಡ: ತುಮಕೂರು ಜಿಲ್ಲೆ ಹುಲಿಯ ಆವಾಸ ಸ್ಥಾನವಲ್ಲ. ಹಾಗಾಗಿ, ನಿಗೂಢವಾಗಿ ಸಾವನ್ನಪ್ಪಿರುವ ಈ ಹುಲಿ ಭದ್ರಾ ಅಭಯಾರಣ್ಯ ಅಥವಾ ಬನ್ನೇರುಘಟ್ಟ ಜೈವಿಕ ಉದ್ಯಾನದ ಕಡೆಯಿಂದ ಬಂದಿರಬಹುದೆಂಬ ಶಂಕೆ ಇದೆ. ಈ ತಂಡವು 10 ಕಿ.ಮೀ., ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಹಸು, ಎಮ್ಮೆ ಅಥವಾ ಯಾವುದಾದರು ಪ್ರಾಣಿಗಳನ್ನು ಹುಲಿ ಬೇಟೆಯಾಡಿ ತಿಂದು ಬಿಟ್ಟಿರುವ ಸಾಧ್ಯತೆ, ಹುಲಿ ಹೆಜ್ಜೆ ಗುರುತು (ಪಂಜು), ಲದ್ದಿ ಸೇರಿ ವಿವಿಧ ಆಯಾಮಗಳನ್ನಿಟ್ಟುಕೊಂಡು ಕೂಂಬಿಂಗ್ ನಡೆಸಲಿದೆ ಎಂದು ಡಿಸಿಎಫ್ ಎಚ್.ಅನುಪಮಾ ಮಾಹಿತಿ ನೀಡಿದರು.

    ವಿಷಮಿಶ್ರಿತ ಆಹಾರ ಸೇವನೆ!? 6-7 ವರ್ಷದ ಗಂಡು ಹುಲಿ ಆರೋಗ್ಯಪೂರ್ಣವಾಗಿದ್ದು ದೇಹದ ಮೇಲೆ ಗಾಯದ ಗುರುತು ಇಲ್ಲ. ಹಾಗಾಗಿ, ರಸ್ತೆ ದಾಟುವಾಗ ವಾಹನ ಡಿಕ್ಕಿ ಹೊಡೆದು ಒಳಭಾಗದಲ್ಲಿ ತೀವ್ರ ಪೆಟ್ಟಾಗಿರಬಹುದು ಅಥವಾ ವಿಷಮಿಶ್ರಿತ ಆಹಾರ ಸೇವಿಸಿರಬಹುದು ಎಂಬುದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಆದರೆ, ಸಾವಿನ ನಿಖರ ಮಾಹಿತಿ ಪಡೆಯಲು ಬೆಂಗಳೂರಿನ ಜಿಕೆವಿಕೆ ಪ್ರಯೋಗಾಲಯಕ್ಕೆ ಹುಲಿ ಉಗುರು, ಕೂದಲು, ರಕ್ತ, ಲದ್ದಿ ಸೇರಿದಂತೆ ವಿವಿಧ ಅಂಗಾಂಗಳ ಮಾದರಿ ಕಳುಹಿಸಲಾಗಿದೆ. ಡಿಎನ್‌ಎ ಪರೀಕ್ಷೆಗೂ ಮಾದರಿ ಸಂಗ್ರಹಿಸಿ ಕಳುಹಿಸಲಾಗಿದೆ. 20 ದಿನಗಳಲ್ಲಿ ವರದಿ ಬರುವ ಸಾಧ್ಯತೆ ಇದೆ.

    ಕ್ಯಾಮರಾ ಅಳವಡಿಕೆ: ಕೊರಟಗೆರೆ ಭಾಗದಲ್ಲಿ ಹುಲಿ ಕಂಡು ಬಂದಿದೆ ಎಂಬ ಸುದ್ದಿ ಹಬ್ಬಿದ್ದು, ಈ ಹಿನ್ನೆಲೆಯಲ್ಲಿ ದೇವರಾಯನದುರ್ಗ ಸಂರಕ್ಷಿತಾ ಅರಣ್ಯ ಪ್ರದೇಶದ ಸುತ್ತಮುತ್ತಲಿನ ಭಾಗದಲ್ಲಿ ಕ್ಯಾಮರಾ ಅಳವಡಿಸಿ ಟ್ರಾೃಪ್‌ಗೆ ಅರಣ್ಯ ಇಲಾಖೆ ಕ್ರಮವಹಿಸಿದೆ.

    ರಾಜ್ಯದ ಹುಲಿ ಸಂರಕ್ಷಣಾ ತಾಣದ ದಾಖಲೆ ವಿಭಾಗಕ್ಕೆ ಕಳುಹಿಸಿರುವ ಗಂಡು ಹುಲಿಯ ಪಟ್ಟೆ ಹೋಲಿಕೆ ಆಗಿಲ್ಲ. ಹಾಗಾಗಿ, ರಾಷ್ಟ್ರ ದಾಖಲೆಗೆ ಕಳುಹಿಸಲಾಗಿದೆ. ಹುಲಿ ಸಾವಿನ ಮರಣೋತ್ತರ ವರದಿ ಬರಲು ಇನ್ನೂ 20 ದಿನ ಬೇಕಿದ್ದು ಆ ನಂತರವಷ್ಟೇ ಸಾವಿನ ನಿಖರ ಮಾಹಿತಿ ಸಿಗಲಿದೆ.
    ಎಚ್.ಅನುಪಮಾ ಡಿಸಿಎಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts