ಬೆಲೆ ಏರಿಕೆ ಮಾಫಿಯ ಬಗ್ಗೆ ಮಾತಾಡಿ: ಬಿಜೆಪಿ ನಾಯಕರಿಗೆ ಎಚ್​​ಡಿಕೆ ಸವಾಲು

hdk
Published on

ಬೆಂಗಳೂರು: ಇಂದು ಏರಿದ ಎಲ್​ಪಿಜಿ ಸಿಲಿಂಡರ್​ ಬೆಲೆಯ ಬಗ್ಗೆ ಪ್ರಸ್ತಾಪಿಸಿ ಟ್ವೀಟ್​ ಮಾಡಿರುವ ಮಾಜಿ ಸಿಎಂ ಹಾಗೂ ಜೆಡಿಎಸ್​ ಶಾಸಕ ಎಚ್​.ಡಿ.ಕುಮಾರಸ್ವಾಮಿ ಅವರು, ಅನಿಯಂತ್ರಿತ ಬೆಲೆ ಏರಿಕೆ ಮಾಫಿಯಾ ಹಿಂದೆ ಇರುವ ಶಕ್ತಿಗಳ ಬಗ್ಗೆ ಬಿಜೆಪಿ ನಾಯಕರು ಮಾತಾಡಬೇಕು ಎಂದಿದ್ದಾರೆ. ಬಡವರ ಭಾರತ ಮತ್ತು ಶ್ರೀಮಂತರ ಭಾರತದ ಬಗ್ಗೆ, ಅದಕ್ಕೆ ಕಾರಣವಾಗಿರುವ 7 ವರ್ಷಗಳ ಬಿಜೆಪಿ ಆಡಳಿತದ ಬಗ್ಗೆ ದನಿ ಎತ್ತಿ ಎಂದು ಆರ್​ಎಸ್​ಎಸ್​ಗೂ ಸವಾಲು ಹಾಕಿದ್ದಾರೆ.

"ಇಂದಿನ ಬೆಳಗಿನ ಶಾಕ್! 14.2 ಕೆಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ 15 ರೂ. ಹೆಚ್ಚಳ. ಈ ಸಿಲಿಂಡರ್ ಬೆಲೆ ಈಗ 900 ರೂ. ಗಡಿಯಲ್ಲಿದೆ. 7 ವರ್ಷಗಳ ಅಚ್ಛೇ ದಿನದ ಭ್ರಮೆಯಲ್ಲಿ ಜನರ ಬದುಕು ಬೆಂಕಿಯಲ್ಲಿ ಬೇಯುತ್ತಿದೆ" ಎಂದು ಒಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ಮತ್ತೊಂದು ಟ್ವೀಟ್​ನಲ್ಲಿ ಕೋವಿಡ್, "ಬೆಲೆ ಏರಿಕೆಯಿಂದ ಜನಜೀವನ ಹಳ್ಳಹಿಡಿದು ಹೋಗಿದೆ. ಬಡ ಭಾರತದ ಜೀವ ಹಿಂಡುತ್ತಿರುವ ಶ್ರೀಮಂತ ಭಾರತದ ಸಾರಥ್ಯ ವಹಿಸಿರುವವರು ಒಂದಿಬ್ಬರು ಉದ್ಯಮಗಳ ಜೋಳಿಗೆ ತುಂಬಿ ಜನರ ಬಾಳಿಗೆ ಕೊಳ್ಳಿ ಇಡುತ್ತಿರುವುದು ಎಲ್ಲರಿಗೂ ಗೊತ್ತಾಗುತ್ತಿದೆ. ಅನಿಯಂತ್ರಿತ ಬೆಲೆ ಏರಿಕೆ ಮಾಫಿಯಾ ಹಿಂದೆ ಇರುವ ಶಕ್ತಿಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ" ಎಂದಿದ್ದಾರೆ.

ಈ ಸರಣಿಯ ಕೊನೆಯ ಟ್ವೀಟ್​ನಲ್ಲಿ, "ದುಡಿಯುವ ಕೈಗಳಿಗೆ ಕೆಲಸವಿಲ್ಲ. ಅನ್ನಕ್ಕಾಗಿ ಹಾಹಾಕಾರವಿದೆ. ಸೇವೆ ಎಂದು ಸೋಗಲಾಡಿತನ ತೋರಿಸುವ ಆರ್​ಎಸ್​ಎಸ್​ ಬೆಲೆ ಏರಿಕೆ ಬಗ್ಗೆ ಮಾತನಾಡಬೇಕು. ಬಡವರ ಭಾರತ, ಶ್ರೀಮಂತರ ಭಾರತದ ಬಗ್ಗೆ ಹೇಳಬೇಕು. ಅದಕ್ಕೆ ಕಾರಣವಾದ 7 ವರ್ಷಗಳ ಆಡಳಿತದ ಬಗ್ಗೆ ದನಿಯೆತ್ತಬೇಕು. ಇಲ್ಲವಾದರೆ ಬಡವರ ಭಾರತದ ಆಕ್ರೋಶಕ್ಕೆ ನೀವು ತುತ್ತಾಗುವುದು ತಪ್ಪುವುದಿಲ್ಲ" ಎಂದು ಕುಮಾರಸ್ವಾಮಿ ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net