More

    ಭಾರತದ ಕಿರಿಯರಿಗೆ ತಪ್ಪಿದ ಸರಣಿ ಕ್ಲೀನ್​ಸ್ವೀಪ್; ದಕ್ಷಿಣ ಆಫ್ರಿಕಾಕ್ಕೆ 2-1ರಿಂದ ಗೆಲುವು

    ಈಸ್ಟ್​ಲಂಡನ್: ಆತಿಥೇಯ ತಂಡದ ಸರ್ವಾಂಗೀಣ ನಿರ್ವಹಣೆ ಎದುರು ತಲೆಬಾಗಿದ ಭಾರತ ತಂಡ 19 ವಯೋಮಿತಿ ತಂಡಗಳ ಏಕದಿನ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ 5 ವಿಕೆಟ್​ಗಳಿಂದ ಶರಣಾಯಿತು. ಇದರಿಂದಾಗಿ ಕ್ಲೀನ್​ಸ್ವೀಪ್ ಅವಕಾಶ ತಪ್ಪಿಸಿಕೊಂಡ ಭಾರತ, 2-1ರಿಂದ ಸರಣಿ ವಶಪಡಿಸಿಕೊಂಡಿತು. ಆರಂಭಿಕ ಎರಡೂ ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿತ್ತು. ಇದರೊಂದಿಗೆ ಭಾರತ ಜನವರಿ 17ರಂದು ಆರಂಭವಾಗಲಿರುವ ಕಿರಿಯರ ವಿಶ್ವಕಪ್​ಗೆ ಭರ್ಜರಿ ಸಿದ್ಧತೆ ಕೈಗೊಂಡಿತು.

    ಬುಫಾಲೊ ಪಾರ್ಕ್​ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ನಾಯಕ ಪ್ರಿಯಂ ಗಾರ್ಗ್ (52 ರನ್, 76 ಎಸೆತ, 6 ಬೌಂಡರಿ) ಅರ್ಧಶತಕ ನೆರವಿನಿಂದ 8 ವಿಕೆಟ್​ಗೆ 192 ರನ್ ಪೇರಿಸಿತು. ಪ್ರತಿಯಾಗಿ ದಕ್ಷಿಣ ಆಫ್ರಿಕಾ ತಂಡ, ಜೊನಾಥನ್ ಬರ್ಡ್ (88*ರನ್, 121 ಎಸೆತ, 9 ಬೌಂಡರಿ, 1 ಸಿಕ್ಸರ್) ಏಕಾಂಗಿ ಹೋರಾಟದ ಫಲವಾಗಿ 48.2 ಓವರ್​ಗಳಲ್ಲಿ 5 ವಿಕೆಟ್​ಗೆ 193 ರನ್ ಗಳಿಸಿ ಜಯಿಸಿತು.

    ಭಾರತ ತಂಡ ಇನ್ನು ವಿಶ್ವಕಪ್​ಗೆ ಮುನ್ನ ಜನವರಿ 3 ರಿಂದ 9ರವರೆಗೆ ಆತಿಥೇಯ ದಕ್ಷಿಣ ಆಫ್ರಿಕಾ, ನ್ಯೂಜಿ ಲೆಂಡ್ ಮತ್ತು ಜಿಂಬಾಬ್ವೆ ಒಳಗೊಂಡ ಚತುಷ್ಕೋನ ಸರಣಿಯಲ್ಲಿ ಆಡಲಿದೆ. ಭಾರತ: 8 ವಿಕೆಟ್​ಗೆ 192 (ಪ್ರಿಯಂ ಗಾರ್ಗ್ 52, ತಿಲಕ್ ವರ್ಮ 25, ವಿದ್ಯಾಧರ್ ಪಾಟೀಲ್ 15, ಆಚೀಲೆ 46ಕ್ಕೆ 2, ಮೊಲೆಸ್ಟೇನ್ 36ಕ್ಕೆ 2), ದಕ್ಷಿಣ ಆಫ್ರಿಕಾ: 48.2 ಓವರ್​ಗಳಲ್ಲಿ 5 ವಿಕೆಟ್​ಗೆ 193 (ಜೊನಾಥನ್ ಬರ್ಡ್ 88*, ಜಾಕ್ ಲೀಸ್ 31, ಲೋವ್ 29, ಯಶಸ್ವಿ ಜೈಸ್ವಾಲ್ 41ಕ್ಕೆ 2, ಆಕಾಶ್ ಸಿಂಗ್ 23ಕ್ಕೆ 1, ದಿವ್ಯಾಂಶ್ ಸಕ್ಸೆನಾ 18ಕ್ಕೆ 1). -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts