More

    ಸೋಯಾಅವರೆಗೆ ಬಸವನ ಹುಳು ಕಾಟ

    ಹಾವೇರಿ: ಜಿಲ್ಲೆಯಲ್ಲಿ ಸೋಯಾಅವರೆ ಬಿತ್ತನೆ ಮಾಡಿದ್ದ ರೈತರಿಗೆ ಈಗ ಬಸವನ ಹುಳುವಿನ ಕಾಟ ಆರಂಭವಾಗಿದೆ. ಕಳೆದ ವಾರದ ಜಿಟಿಜಿಟಿ ಮಳೆ ಹಿಡಿದಿದ್ದ ಪರಿಣಾಮ ಈ ಹುಳುಗಳ ಕಾಟ ಹೆಚ್ಚುತ್ತಿದ್ದು, ಸೋಯಾಅವರೆ ಬೆಳೆಯನ್ನು ಹುಟ್ಟುತ್ತಲೇ ತಿಂದು ಹಾಕುತ್ತಿವೆ.

    ಜಿಲ್ಲೆಯಲ್ಲಿ ಹೆಚ್ಚಿನ ತೇವಾಂಶದ ಜಾಗಗಳಲ್ಲಿ ಈ ಹುಳುಗಳ ಬಾಧೆ ಕಂಡುಬರತೊಡಗಿದೆ. ಪ್ರಮುಖವಾಗಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯ ಬಳಿ ಹೆಚ್ಚಾಗಿ ಕಂಡು ಬರತೊಡಗಿವೆ.

    ಹುಳು ಬಾಧೆಯ ಲಕ್ಷಣಗಳು: ಬಸವನ ಹುಳುಗಳು ಗಿಡದ ಎಲೆ, ದೇಟು, ಕಾಂಡ ಹಾಗೂ ಕಾಂಡದ ತೊಗಟೆಗಳನ್ನು ಕೆರೆದು ತಿನ್ನುತ್ತವೆ. ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶವಿರುವಾಗ ಹಗಲಿನಲ್ಲಿಯೂ ಇವುಗಳ ಬಾಧೆ ಕಾಣಿಸುತ್ತದೆ. ಮಳೆಗಾಲದಲ್ಲಿ ನೀರಿನ ಮೂಲದ ಸುತ್ತಮುತ್ತ ಹೊಲದಲ್ಲಿರುವ ನಡೆದಾಡಲು ಬಳಸುವ ಕಟ್ಟೆಗಳು, ಓಡಾಡುವ ಸ್ಥಳ, ಕಳೆ, ಕಸಗಳು ಈ ಪೀಡೆಯ ಅಡಗುದಾಣಗಳಾಗಿವೆ. ಈ ಹುಳು ತನ್ನ ಜೀವಿತಾವಧಿಯಲ್ಲಿ 100ರಿಂದ 500 ಮೊಟ್ಟೆಗಳನ್ನಿಡುವ ಸಾಮರ್ಥ್ಯ ಹೊಂದಿದೆ. 3ರಿಂದ 5 ಸೆಂ.ಮೀ. ಆಳದಲ್ಲಿ ಭೂಮಿಯ ಒಳಗಡೆ ಮೊಟ್ಟೆ ಇಟ್ಟು ನಂತರ ಅವುಗಳನ್ನು ಜಿಗುಟಾದ ವಸ್ತುವಿನಿಂದ ಮುಚ್ಚುತ್ತವೆ. ಅನುಕೂಲಕರ ವಾತಾವರಣವಿದ್ದಲ್ಲಿ ಮೊಟ್ಟೆಯಿಂದ ಮರಿಗಳು ಹೊರಬಂದು ಜೀವಿಸುತ್ತವೆ. ಇಲ್ಲದಿದ್ದಲ್ಲಿ ಸೂಪ್ತಾವಸ್ಥೆಗೆ ಹೋಗುತ್ತವೆ. ಈ ಹುಳುಗಳ ಬಾಧೆ ಕಂಡುಬಂದ ತಕ್ಷಣ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸಿದರೆ ರಾತ್ರೋರಾತ್ರಿ ಬೆಳೆಯೇ ಮಾಯವಾಗುತ್ತದೆ ಎನ್ನುತ್ತಾರೆ ರೈತ ಎಚ್.ಎಫ್. ಕಟ್ಟೇಗೌಡರ.

    ನಿರ್ವಹಣೆಗೆ ಸಲಹೆ: ಬಸವನ ಹುಳುವಿಗೆ ಆಸರೆಯಾಗಿರುವ ಅಡಗು ತಾಣಗಳಾದ ಹುಲ್ಲು, ಬಿದ್ದ ಕಸಕಡ್ಡಿ ಮುಂತಾದವುಗಳನ್ನು ತೆಗೆದು ಸ್ವಚ್ಛವಾಗಿಡಬೇಕು. ಹೊಲದಲ್ಲಿ ಅಲ್ಲಲ್ಲಿ ಕೃಷಿ ತ್ಯಾಜ್ಯಗಳ ಗುಂಪಿ ಹಾಕುವುದರಿಂದ ಹುಳುಗಳು ಆಸರೆಗಾಗಿ ಅಡಗಿ ಕೂರುತ್ತವೆ. ಈ ಗುಂಪಿಗಳನ್ನು ಸುಡಬೇಕು. ಹೊಲದಲ್ಲಿ ನಡೆದಾಡುವ ಕಟ್ಟೆ, ಗಡಿಗುಂಟ ಹರಳು ಉಪ್ಪನ್ನು ಸುರಿಯಬೇಕು. ಸಂಜೆ ಅಥವಾ ಬೆಳಗಿನ ಸಮಯದಲ್ಲಿ ಕೈಯಿಂದ ಆರಿಸಿ ಗೋಣಿ ಚೀಲದಲ್ಲಿ ಹಾಕಿ ಅವುಗಳ ಮೇಲೆ ಉಪ್ಪು ಹಾಕಿ ನಾಶಪಡಿಸಬಹುದು. ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನೆಸಿದ ಗೋಣಿಚೀಲ ಹರಡಿ ಅಥವಾ ಕಳಿತ ಕಸ ಹೊಲದಲ್ಲಿ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳುಗಳ ಮೇಲೆ ಬ್ಲಿಚಿಂಗ್ ಪುಡಿ(8ರಿಂದ 10 ಗ್ರಾಂ ಪ್ರತಿ ಎಕರೆಗೆ) ಸಿಂಪರಣೆ ಮಾಡಿ ನಾಶಪಡಿಸಬಹುದು. ಮೆಟಾಲ್ಡಿಹೈಡೆಡ್(2.5 ಶೇ) ಮಾತ್ರೆಗಳನ್ನು ಎಕರೆಗೆ 2 ಕಿ.ಗ್ರಾಂ ನಂತೆ ಹೊಲದಲ್ಲಿ ಎರಚಿದರೆ ಇವುಗಳಿಗೆ ಆಕರ್ಷಿತವಾಗಿ ಸಾಯುತ್ತವೆ ಎನ್ನುತ್ತಾರೆ ನಿವೃತ್ತ ಜಂಟಿ ಕೃಷಿ ನಿರ್ದೇಶಕ ಡಾ. ಆರ್.ಜಿ. ಗೊಲ್ಲರ.

    ಮಳೆ ಹೆಚ್ಚಾದ ಸಮಯದಲ್ಲಿ ಬಸವನ ಹುಳು ಮಾರಕ ಪೀಡೆ. ಅದರ ನಿರ್ವಹಣೆಗೆ 10 ಕೆಜಿ ತೌಡು, 150 ಮಿಲೀ ಮೊನೊಕ್ರೊಟೋಫಾಸ್, 2.50 ಕೆಜಿ ಬೆಲ್ಲ. 180 ಮಿಲೀ ಬ್ರಾಂದಿ(ಕ್ವಾಟರ್), ಹುಳಿಬೆಲ್ಲವನ್ನು ನೀರಿನಲ್ಲಿ ಬೆರೆಸಿ ನಂತರ ತೌಡಿಗೆ ಬೆರೆಸಿ ಆ ನಂತರ ಸಾರಾಯಿ ಬೆರೆಸಿ ಚೆನ್ನಾಗಿ ಕಲಸಬೇಕು. ಉಂಡುಂಡೆಯಾಗಿ ಇರುವಾಗ ಬಳಸಬೇಕು. ಬದುಪಕ್ಕ, ಹಸಿಯಿರುವ ಭಾಗಗಳ ಸುತ್ತ ಎಡೆ ಇಟ್ಟಂತೆ ಇಡಬೇಕು. ಸಾಕು, ಕಾಡುಪ್ರಾಣಿ, ಪಕ್ಷಿ ತಿನ್ನದಂತೆ ಎರಡರಿಂದ ಮೂರು ದಿನ ಕಾವಲು ಮಾಡಬೇಕು. ಅಲ್ಲದೇ ಪಾಷಾಣ ಬಳಕೆ ಮಾಡಿರುವ ಕುರಿತು ಅಕ್ಕಪಕ್ಕದ ಹೊಲದವರಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಏನಾದರೂ ಅವಘಡವಾಗುವ ಸಾಧ್ಯತೆ ಇರುತ್ತದೆ.

    | ಡಾ. ಆರ್.ಜಿ. ಗೊಲ್ಲರ, ನಿವೃತ್ತ ಜಂಟಿ ಕೃಷಿ ನಿರ್ದೇಶಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts