More

    ಸ್ಮಶಾನ ಬಿಡಿಸಿಕೊಡಿ, ನೌಕರಿ ಕಲ್ಪಿಸಿ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಅಹವಾಲುಗಳ ಸುರಿಮಳೆ

    ಚನ್ನಪಟ್ಟಣ: ಜೀವನಾಧಾರಕ್ಕೆ ಇದ್ದ ಜಮೀನು ನೀಡಿ ಸಂಕಷ್ಟಕ್ಕೆ ಸಿಲುಕಿದ್ದೇವೆ, ದಯಮಾಡಿ ನಮಗೆ ಪರಿಹಾರ ದೊರಕಿಸಿಕೊಡಿ…, ಗ್ರಾಮದ ಜನತೆ ಸತ್ತರೆ ಹೂಳಲು ಜಾಗವಿಲ್ಲ, ಸ್ಮಶಾನ ಬಿಡಿಸಿಕೊಡಿ…, ಗ್ರಾಮಕ್ಕೆ ಮೂಲಸೌಲಭ್ಯ ಕಲ್ಪಿಸಿ…, ಮಗನಿಗೆ ಉದ್ಯೋಗ ಕೊಡಿಸಿ…

    ಇವು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಜನತೆ ಸಲ್ಲಿಸಿದ ಅಹವಾಲುಗಳು.
    ಎಚ್.ಡಿ.ಕುಮಾರಸ್ವಾಮಿ ಎರಡು ದಿನ ಸ್ವಕ್ಷೇತ್ರದ ಗ್ರಾಮಗಳಲ್ಲಿ ಜನತಾದರ್ಶನ ಆರಂಭಿಸಿದ್ದು, ಸೋಮವಾರ ಕೆಂಗಲ್ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಿದರು.

    ಪೂಜೆ ಮುಗಿಸಿ ದೇವಾಲಯದಿಂದ ಹೊರಬರುತ್ತಿದಂತೆ ಹಲವಾರು ಮಂದಿ ಅರ್ಜಿ ಹಿಡಿದು ಸಮಸ್ಯೆಗಳನ್ನು ಹೇಳಿಕೊಂಡರು. ಈ ವೇಳೆ ಗ್ರಾಮೀಣ ಭಾಗದಿಂದ ಅರ್ಜಿ ತಂದಿದ್ದ ವೃದ್ಧರನ್ನು ಗಮನಿಸಿದ ಎಚ್‌ಡಿಕೆ, ನಿಮ್ಮ ಗ್ರಾಮಗಳಿಗೆ ಭೇಟಿ ನೀಡಲಿದ್ದೇನೆ. ಇಲ್ಲಿವರೆಗೂ ಏಕೆ ಬಂದಿದ್ದೀರಾ? ನಿಮ್ಮನ್ನು ಭೇಟಿ ಮಾಡುವ ಸಲುವಾಗಿಯೇ ಈ ಪ್ರವಾಸ ಆಯೋಜಿಸಿದ್ದೇನೆ ಎಂದು ಸಮಾಧಾನಪಡಿಸಿದರು.

    ನಿಮ್ಮನ್ನು ಕೈಬಿಡಲ್ಲ: ಹನುಮಂತಪುರ ಗ್ರಾಮಕ್ಕೆ ಭೇಟಿ ನೀಡಿದ ಎಚ್‌ಡಿಕೆ ಅವರನ್ನು ಸುತ್ತುವರಿದ ಗ್ರಾಮದ ಮಹಿಳೆ ಪುಟ್ಟಲಿಂಗಮ್ಮ, 12 ವರ್ಷದ ಹಿಂದೆ ನಿಮ್ಮ ಮಾತು ಕೇಳಿ ದೊಡ್ಡಮಣ್ಣುಗುಡ್ಡೆ ವಸತಿ ಯೋಜನೆಗೆ ಭೂಮಿ ನೀಡಿದೆವು. ಆದರೆ ಇದುವರೆಗೂ ನಮಗೆ ಪರಿಹಾರ ನೀಡಿಲ್ಲ, ಇದ್ದ ಅಲ್ಪ ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದೇವೆ, ದಯಮಾಡಿ ನ್ಯಾಯ ದೊರಕಿಸಿಕೊಡಿ ಎಂದು ದುಂಬಾಲು ಬಿದ್ದರು. ಮಹಿಳೆಯನ್ನು ಸಮಾಧಾನಪಡಿಸಿದ ಎಚ್‌ಡಿಕೆ, ಈ ವಿಚಾರ ಇಂದಿಗೂ ಗಮನದಲ್ಲಿದೆ. ಅಂದು ನನ್ನ ಮನವಿಯನ್ನು ಗೌರವಿಸಿ ಜಾಗ ನೀಡಿದ್ದೀರಿ, ಕೆಲವು ಗೊಂದಲಗಳಿದ್ದು ಶೀಘ್ರವಾಗಿ ನಿಮಗೆ ನ್ಯಾಯ ದೊರಕಿಸಿಕೊಡುತ್ತೇನೆ ಎಂದು ತಿಳಿಸಿದರು. ಈ ವೇಳೆ ಗ್ರಾಮಸ್ಥರು ಗ್ರಾಮದ ಶಾಲೆ ರಿಪೇರಿ ಹಾಗೂ ದೇವಸ್ಥಾನ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.

    ಸ್ಮಶಾನದ ಸಮಸ್ಯೆ ಬಹೆಹರಿಸಿಕೊಡಿ: ಕರಿಕಲ್‌ದೊಡ್ಡಿ ಗ್ರಾಮದಲ್ಲಿ ಯಾರಾದರೂ ಸತ್ತರೆ ಹೂಳಲು ಜಾಗವಿಲ್ಲ, ಜಿಲ್ಲಾಡಳಿತ ನೀಡಿರುವ ಜಾಗದ ಬಗ್ಗೆ ಸಮಸ್ಯೆ ಸೃಷ್ಟಿಯಾಗಿದೆ. ದಯಮಾಡಿ ಗ್ರಾಮದ ಸ್ಮಶಾನದ ಜಾಗ ವಿವಾದವನ್ನು ಬಗೆಹರಿಸಿಕೊಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿದ್ದ ತಹಸೀಲ್ದಾರ್ ಸುದರ್ಶನ್ ಅವರನ್ನು ಕರೆದು ಜಾಗದ ಕುರಿತು ಇರುವ ಸಮಸ್ಯೆಯನ್ನು ಬಗೆಹರಿಸಿ ಪ್ರಕರಣ ಇತ್ಯರ್ಥ ಪಡಿಸಿಕೊಡುವಂತೆ ಸೂಚಿಸಿದರು.

    ಸೋಮವಾರ ತಾಲೂಕಿನ ಕೆಂಗಲ್, ಹನುಮಂತಪುರ, ಚಂದ್ರಗಿರಿದೊಡ್ಡಿ, ವಂದಾರಗುಪ್ಪೆ, ಪೌಳಿದೊಡ್ಡಿ, ಲಂಬಾಣಿತಾಂಡ್ಯ, ಕನ್ನಮಂಗಲ, ಅಂಗರಹಳ್ಳಿ, ಎಲೇ ಹೊಸಹಳ್ಳಿ, ದೇವರಹೊಸಳ್ಳಿ, ರಾಂಪುರ, ಕೋಮನಹಳ್ಳಿ ಸೇರಿ ಹಲವು ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸುವ ಜತೆಗೆ ಕೆಲ ಗ್ರಾಪಂಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಮಾಹಿತಿ ಪಡೆದರು.

    ಪ್ರತಿಗ್ರಾಮಗಳಲ್ಲಿ ಎಚ್‌ಡಿಕೆ ಗೆ ಸ್ವಾಗತ ಕೋರಿದ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅಹವಾಲುಗಳ ಸುರಿಮಳೆ ಸುರಿಸಿದರು. ಸಾಗುವಳಿ ಚೀಟಿ ಸಮಸ್ಯೆ, ಖಾತೆ ಸಮಸ್ಯೆ, ವೃದ್ಧಾಪ್ಯ ಹಾಗೂ ವಿಧವಾ ವೇತನ ಸೇರಿ ಹಲವು ಸಮಸ್ಯೆಗಳ ಬಗ್ಗೆ ಎಚ್‌ಡಿಕೆ ಗಮನ ಸೆಳೆದರು. ಪ್ರತಿಯೊಂದು ಸಮಸ್ಯೆಯನ್ನೂ ಆಲಿಸಿದ ಎಚ್‌ಡಿಕೆ, ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹೇಳಿ ಬಗೆಹರಿಸಿಕೊಟ್ಟರೇ, ಕೆಲ ಸಮಸ್ಯೆಗಳನ್ನು ಪರಿಹರಿಸಿಕೊಡುವ ಭರವಸೆೆ ನೀಡಿದರು.

    ಬೆಂಗ್ಳೂರಿಗೆ ಬನ್ನಿ: ತಾಲೂಕಿನ ಬೈರನಾಯ್ಕನ ಹಳ್ಳಿ ವ್ಯಕ್ತಿಯೊಬ್ಬರು, ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದೇನೆ, ಆರ್ಥಿಕ ಸಹಾಯ ಮಾಡಿ ಎಂದು ಮನವಿ ಮಾಡಿದರು. ಈ ವೇಳೆ ಎಲ್ಲ ವೈದ್ಯಕೀಯ ದಾಖಲೆಗಳೊಂದಿಗೆ ಬೆಂಗಳೂರಿಗೆ ಆಗಮಿಸು ವಂತೆ ಸೂಚಿಸಿ, ಆಸ್ಪತ್ರೆ ವೆಚ್ಚ ಭರಿಸುವುದಾಗಿ ತಿಳಿಸಿದರು.

    ತಹಸೀಲ್ದಾರ್ ಸುದರ್ಶನ್, ತಾಪಂ ಇಒ ಚಂದ್ರು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts