More

    ವೇಗ ಪಡೆಯದ ಸ್ಮಾರ್ಟ್ ಪಾರ್ಕಿಂಗ್, ಬಹು ಅಂತಸ್ತಿನ ಸಂಕೀರ್ಣ ನಿರ್ಮಾಣ ಕಾಮಗಾರಿ ನಿಧಾನ

    ಶ್ರವಣ್ ಕುಮಾರ್ ನಾಳ ಮಂಗಳೂರು

    ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಸ್ಮಾರ್ಟ್ ಸಿಟಿ ಹಾಗೂ ಸಾರ್ವಜನಿಕ ಸಹಭಾಗಿತ್ವದ ಬಹು ಅಂತಸ್ತಿನ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ.

    ಮಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ಬಿಗಡಾಯಿಸಿದ್ದರಿಂದ ದಶಕದ ಹಿಂದೆಯೇ ಮಂಗಳೂರು ಹಳೇ ಬಸ್ ನಿಲ್ದಾಣ ಪ್ರದೇಶದಲ್ಲಿ (ಹಂಪನಕಟ್ಟ) ಬಹುಅಂತಸ್ತಿನ ಪಾರ್ಕಿಂಗ್ ಸಂಕೀರ್ಣ ನಿರ್ಮಾಣದ ಪ್ರಸ್ತಾವ ಇತ್ತು. ಅದನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡು ವರ್ಷದ ಹಿಂದೆಯೇ ಶಿಲಾನ್ಯಾಸ ನಡೆದು ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಆದರೆ ಕಾರಣಾಂತರದಿಂದ ಕೆಲಸ ವೇಗ ಪಡೆಯಲೇ ಇಲ್ಲ. ವರ್ಷ ಸಂದರೂ ಕೆಲಸದಲ್ಲಿ ಪ್ರಗತಿ ಆಗಲೇ ಇಲ್ಲ. ಮಳೆಗಾಳದಲ್ಲಂತೂ ಬೃಹತ್ ಕೆರೆಯಾಕಾರದಲ್ಲಿ ಈ ಹೊಂಡ ಅಪಾಯಕಾರಿಯಾಗಿ ಕಾಣುತ್ತಿತ್ತು.

    ಅಂತೂ ಇಂತೂ ಕೆಲವು ದಿನಗಳಿಂದ ಮತ್ತೆ ಸ್ಮಾರ್ಟ್ ಪಾರ್ಕಿಂಗ್ ಕಾಮಗಾರಿಗೆ ವೇಗ ನೀಡುವ ಪ್ರಯತ್ನ ನಡೆಯುತ್ತಿದೆ. ಅಂದಾಜು 79.05 ಕೋಟಿ ರೂ.ಗಳಲ್ಲಿ ಈ ಯೋಜನೆ ನಡೆಸಲಾಗುತ್ತಿದೆ. ಮುಂದಿನ ವರ್ಷ ಸೆ.1ರೊಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ಆದರೆ ನಿಧಾನಗತಿಯಲ್ಲಿರುವ ಕೆಲಸದ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳೂ ಗಮನ ಹರಿಸುತ್ತಿಲ್ಲ.

    ಈ ಹಿಂದೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕಾರ್, ಬೈಕ್ ಪಾರ್ಕಿಂಗ್ ಮಾತ್ರವಲ್ಲದೆ ಸಣ್ಣಪುಟ್ಟ ವ್ಯಾಪಾರಸ್ಥರೂ ಕೂಡ ಇಲ್ಲಿ ವ್ಯಾಪಾರ ಮಾಡುತ್ತಿದ್ದರು. ಪಾರ್ಕಿಂಗ್ ಸಂಕೀರ್ಣ ನಿರ್ಮಾಣ ಕಾಮಗಾರಿಯಿಂದ ಎಂಜಿ ರಸ್ತೆ ಹಾಗೂ ಹಂಪನಕಟ್ಟೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ವಾಹನ ಪಾರ್ಕಿಂಗ್, ಬೀದಿ ವ್ಯಾಪಾರಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಕಾಮಗಾರಿಯ ನೆಪದಿಂದ ನಾಲ್ಕೂ ಭಾಗದಲ್ಲಿ ತಗಡು ಶೀಟ್ ಅಳವಡಿಸಿ ನಿರ್ಬಂಧ ವಿಧಿಸಿ ವರ್ಷ ಕಳೆದಿದೆ.

    ಸ್ಮಾರ್ಟ್ ಸಿಟಿಯ 79.05 ಕೋಟಿ ರೂ. ಮೊತ್ತದ ಬಹುಅಂತಸ್ತಿನ ಪಾರ್ಕಿಂಗ್ ಸಂಕೀರ್ಣ ನಿರ್ಮಾಣ ಯೋಜನೆಗೆ ಈ ಹಿಂದೆ ಇದ್ದ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಮುಂದಿನ ಏಳೆಂಟು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಪ್ರತಿ ತಿಂಗಳೂ ಸ್ಮಾರ್ಟ್ ಸಿಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ವಿವಿಧ ಕಾಮಗಾರಿಗೆ ವೇಗ ನೀಡಲಾಗುತ್ತದೆ.

    ವೇದವ್ಯಾಸ ಕಾಮತ್, ಮಂಗಳೂರು ದಕ್ಷಿಣ ಶಾಸಕ

    —————————–

    ಮಂಗಳೂರು ನಗರದ ಬಹುತೇಕ ಅಭಿವೃದ್ದಿ ಕಾಮಗಾರಿಗಳು ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ನಡೆಯುವಂಥದ್ದು. ಈ ಕಾರಣದಿಂದ ಹಂತಹಂತವಾಗಿ ಒಂದೊಂದೇ ಕೆಲಸ ಪೂರ್ಣಗೊಳಿಸಲು ಸಮಯ ನೀಡಲಾಗಿದೆ. ಬಹುಅಂತಸ್ತಿನ ಪಾರ್ಕಿಂಗ್ ಸಂಕೀರ್ಣ ಮಂಗಳೂರಿನ ಬೇಡಿಕೆಯ ಹಾಗೂ ಅಗತ್ಯದ ಯೋಜನೆ.

    ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts