More

    ಸಣ್ಣ ಡ್ಯಾಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    ಬೆಳಗಾವಿ: ಅಂತರ್ಜಲಮಟ್ಟ ವೃದ್ಧಿಸಲು, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ 1 ರಿಂದ 2 ಟಿಎಂಸಿ ಸಾಮರ್ಥ್ಯದ ಸಣ್ಣ ಡ್ಯಾಂ ನಿರ್ಮಿಸುವ ಅಗತ್ಯತೆ ಇದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ಸಮೀಪ ನಿರ್ಮಾಣ ಹಂತದಲ್ಲಿರುವ ‘ಕಿಣೆ ಡ್ಯಾಂ’ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಸಣ್ಣ ಡ್ಯಾಂಗಳ ನಿರ್ಮಾಣ ಮಾಡುವ ಕುರಿತು ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ನಾಲ್ಕೈದು ಕಡೆ ಸಣ್ಣ ಡ್ಯಾಂ ನಿರ್ಮಿಸಲಾಗುವುದು. ಅದಕ್ಕಾಗಿ ಶೀಘ್ರದಲ್ಲಿಯೇ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು. ಈ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವೂ ಸಿಗುತ್ತದೆ ಎಂದು ತಿಳಿಸಿದರು.

    ಮಾರ್ಚ್ ಅಂತ್ಯಕ್ಕೆ ಪೂರ್ಣ: 2013 ರಿಂದ ಆರಂಭವಾಗಿರುವ ಕಿಣೆ ಡ್ಯಾಂ ನಿರ್ಮಾಣ ಕಾಮಗಾರಿ ಲಾಕ್‌ಡೌನ್ ಸೇರಿ ವಿವಿಧ ಕಾರಣಗಳಿಂದ ವಿಳಂಬವಾಗಿದೆ. 2021ರ ಮಾರ್ಚ್ ಅಂತ್ಯದ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಜೂನ್‌ನಲ್ಲಿ ಡ್ಯಾಂ ಲೋಕಾರ್ಪಣೆಗೊಳಿಸಲಾ ಗುವುದು. ಇದರಿಂದ ಬೆಳಗಾವಿ ತಾಲೂಕಿನ ಕಿಣಯೇ, ಬಹದ್ದೂರ ವಾಡಿ, ಸಂತಿಬಸ್ತವಾಡ, ವಾಘವಾಡೆ, ರಣಕುಂಡೆ ಗ್ರಾಮಗಳ ಸುಮಾರು 1200 ಹೆಕ್ಟೇರ್ ಕೃಷಿ ಭೂಮಿ ನೀರಾವರಿಗೆ ಒಳಪಡಲಿದೆ ಎಂದರು.

    ಬೆಳಗಾವಿಗಿಲ್ಲ ನೀರಿನ ಸಮಸ್ಯೆ: ಈಗಾಗಲೇ ಬೆಳಗಾವಿ ನಗರಕ್ಕೆ ಹಿಡಕಲ್, ರಕ್ಕಸಕೊಪ್ಪ ಜಲಾಶಯದಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹಾಗಾಗಿ ಸದ್ಯ ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಮಾತ್ರ ಕಿಣೆ ಡ್ಯಾಂನಿಂದ ಕುಡಿಯುವ ನೀರು ಪೂರೈಕೆ ಮಾಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಒಂದೇ ಪ್ಯಾಕೇಜ್‌ನಡಿ ಟೆಂಡರ್: ಕಿಣೆ ಡ್ಯಾಂ ಬಲದಂಡೆ ಮತ್ತು ಎಡದಂಡೆ ಮುಖ್ಯ ಕಾಲುವೆ ಹಾಗೂ ವಿತರಣೆ ಕಾಲುವೆಗಳ ನಿರ್ಮಾಣಕ್ಕೆ ಒಂದೇ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ. 13.38 ಕೋಟಿ ರೂ. ವೆಚ್ಚವಾಗಲಿದೆ. ಈಗಾಗಲೇ 1.90 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ನೀರಾವರಿ ಇಲಾಖೆಯ ಇಂಜಿನಿಯರ್‌ಗಳು ತಿಳಿಸಿದರು. ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಜಿಪಂ ಸದಸ್ಯ ತುಕಾರಾಮ ಕಾಗಲ, ಮಡ್ಡೆಪ್ಪ ತೋಳಿನವರ, ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಅರವಿಂದ ಕಣಗಲಿ ಇತರರು ಇದ್ದರು.

    ಮಹದಾಯಿ ನೀರು ತರುವುದಿಲ್ಲ

    ಬೆಳಗಾವಿ ತಾಲೂಕಿನ ಕಿಣಯೇ ಗ್ರಾಮದ ಸಮೀಪದ ಕಿಣೆ ಡ್ಯಾಂ, ಸುತ್ತಮುತ್ತಲಿನ ಬೆಟ್ಟ-ಗುಡ್ಡದಿಂದ ಹರಿದು ಬರುವ ಮಳೆ ನೀರನ್ನೇ ಅವಲಂಬಿಸಿದೆ. ಕಿಣೆ ಡ್ಯಾಂಗೆ ಮಹದಾಯಿ ನದಿ ನೀರು ತರುವ ಯಾವುದೇ ಯೋಜನೆ ಇಲ್ಲ. ಕಿಣೆ ಡ್ಯಾಂಗೂ ಕಳಸಾ-ಬಂಡೂರಿ ಯೋಜನೆಗೂ ಯಾವುದೇ ಸಂಬಂಧ ಇಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಸ್ಪಷ್ಟಪಡಿಸಿದರು. ಬೆಳಗಾವಿ-ಗೋವಾ ಮಾರ್ಗದಲ್ಲಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಓಡಾಡುತ್ತಾರೆ. ಹೀಗಾಗಿ ಕಿಣೆ ಡ್ಯಾಂ ಸುತ್ತಮುತ್ತಲಿನ ಪ್ರದೇಶವನ್ನು ಸಾರ್ವಜನಿಕರ ಸಹಭಾಗಿತ್ವದಡಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣ ಮಾಡಲಾಗುವುದು. ಈ ನಿಟ್ಟಿನಲ್ಲಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ರಮೇಶ ಮಾಹಿತಿ ನೀಡಿದರು.

    ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಕುಟುಂಬದ ಹೆಸರು ಹೇಳಿಕೊಂಡು ಜನರಿಗೆ ಹೆದರಿಸುವವರ ಕುರಿತು ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಈ ಕುರಿತು ಯಾರಾದರೂ ಜಿಲ್ಲಾಧಿಕಾರಿ, ಎಸ್ಪಿ ಅವರಿಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದರೆ ತಕ್ಷಣ ಕ್ರಮ ಜರುಗಿಸುವಂತೆ ಸೂಚಿಸಲಾಗುವುದು.
    | ರಮೇಶ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts