More

    ಜಲ್ಲಿಕಲ್ಲು ರಸ್ತೆ ಮೇಲೆ ಸಂಚಾರ ದುಸ್ಥರ


    ಸಿಂಧನೂರು: ನಗರದ 40ನೇ ಉಪಕಾಲುವೆಗೆ ಹೊಂದಿಕೊಂಡ ರಸ್ತೆ ಸುಧಾರಣೆಗೆ ಜಲ್ಲಿಕಲ್ಲು ಹಾಕಿ ಮೂರು ವಾರಗಳಾಗಿದೆ. ಮೆಟಲಿಂಗ್ ಕಾಮಗಾರಿ ಕೈಗೊಳ್ಳದ ಹಿನ್ನೆಲೆಯಲ್ಲಿ ವಾಹನ ಸವಾರರ ಪ್ರಾಣಕ್ಕೆ ಸಂಚಕಾರ ಎದುರಾಗಿದ್ದು, ನಿತ್ಯ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಿವೆ.

    ನಗರಸಭೆ ವ್ಯಾಪ್ತಿಯಲ್ಲಿರುವ 40ನೇ ಉಪಕಾಲುವೆ 2 ಕಿಮೀ ರಸ್ತೆಗೆ 3 ಕೋಟಿ ರೂ. ಮಂಜೂರಾಗಿದ್ದು, 2 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ 1 ಕೋಟಿ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕಿದೆ. ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದ್ದು, ವ್ಯಕ್ತಿಯೊಬ್ಬರಿಗೆ ಕೆಲಸ ವಹಿಸಿದೆ.

    ಗಂಗಾವತಿ ಸಂಪರ್ಕ ರಸ್ತೆಯ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಹತ್ತಿರದಿಂದ 1 ಕಿಮೀ ದೂರದವರೆಗೆ ರಸ್ತೆ ನಿರ್ಮಾಣಕ್ಕೆ ಜಲ್ಲಿಕಲ್ಲು ಹಾಕಲಾಗಿದೆ. ಆದರೆ, ಕಾಮಗಾರಿ ಮುಂದುರಿಸದಿರುವುದು ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ಸಂಕಷ್ಟ ತಂದೊಡ್ಡಿದೆ. ಕಾಲುವೆ ಬದಿಯಿರುವ ಮನೆಗಳಿಗೆ ತೆರಳಲು ಇದೇ ರಸ್ತೆ ಅವಲಂಬಿಸಬೇಕಿದೆ. ಶಾಲಾ ವಾಹನಗಳ ಚಾಲಕರು ಕೂಡ ಸಂಕಷ್ಟ ಎದುರಿಸುತ್ತಿದ್ದಾರೆ.

    ಅಂದಾಜು ಪತ್ರಿಕೆಯಂತೆ ಹಳೆಯ ರಸ್ತೆ ಅಗೆದು ಮೆಟಲಿಂಗ್ ಮಾಡಬೇಕು. ಆದರೆ, ಅಲ್ಲಲ್ಲಿ ಜೆಸಿಬಿಯಿಂದ ಮರಂ ಸಮತಟ್ಟು ಮಾಡಿ ರಸ್ತೆ ತುಂಬೆಲ್ಲ ಜಲ್ಲಿಕಲ್ಲು ಹಾಕಲಾಗಿದೆ. ರಸ್ತೆ ನಿರ್ಮಾಣ ಸ್ಥಳದಲ್ಲಿ ಇಪ್ಪತ್ತಕ್ಕೂ ಹೆಚ್ಚು ಶೆಡ್‌ಗಳಿದ್ದು ತೆರವು ಮಾಡದೆ, ಲಭ್ಯವಿರುವ ಜಾಗದಲ್ಲಿಯೇ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಶಾಸಕ ವೆಂಕಟರಾವ ನಾಡಗೌಡ ಈ ಬಗ್ಗೆ ಗಮನಹರಿಸಿ, ರಸ್ತೆ ನಿರ್ಮಾಣ ತುರ್ತು ಕೈಗೊಳ್ಳಲು ಸೂಚನೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಬಹು ವರ್ಷಗಳ ನಂತರ 40ನೇ ಉಪಕಾಲುವೆಯ 2 ಕಿಮೀ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ಮಂಜೂರಾಗಿದೆ. ಈ ಪೈಕಿ 1 ಕಿಮೀ ರಸ್ತೆಯಲ್ಲಿ ಜಲ್ಲಿಕಲ್ಲು ಹಾಕಿದ್ದು, ಸಮರ್ಪಕ ರಸ್ತೆ ಸುಧಾರಣೆ ಅನುಮಾನ ಮೂಡಿಸಿದೆ.
    | ವೀರಭದ್ರಪ್ಪ ವಿಶ್ವಕರ್ಮ, 14ನೇ ವಾರ್ಡ್ ನಿವಾಸಿ, ಸಿಂಧನೂರು

    40ನೇ ಉಪಕಾಲುವೆ ರಸ್ತೆ ಕಾಮಗಾರಿ ಆರಂಭಿಸಲಾಗಿದೆ. ಜಲ್ಲಿಕಲ್ಲು ಹಾಕಿದ್ದು ಮೆಟಲಿಂಗ್ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ವಿಳಂಬಕ್ಕೆ ಅವಕಾಶ ನೀಡುವದಿಲ್ಲ.
    | ಮಹಾಂತೇಶ, ಕೆಆರ್‌ಐಡಿಎಲ್ ಜೆಇ, ಸಿಂಧನೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts