More

    ಹುಣಸೂರಿನತ್ತ ಸಿದ್ದರಾಮಯ್ಯ ಒಲವು

    • ಕಡೇ ಚುನಾವಣೆ ತವರು ಜಿಲ್ಲೆಯಿಂದಲೇ ಗೆಲ್ಲುವ ಆಶಯ
    • ರಾಜಕೀಯ ವಿರೋಧಿಗಳ ಟೀಕೆಗೆ ಉತ್ತರ ನೀಡುವ ಪ್ರಯತ್ನ

    ಅವಿನಾಶ್ ಜೈನಹಳ್ಳಿ ಮೈಸೂರು
    2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಸೋತು ಮುಜುಗರ ಅನುಭವಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ತವರು ಜಿಲ್ಲೆಯಿಂದಲೇ ಸ್ಪರ್ಧಿಸಿ ವಿರೋಧಿಗಳಿಗೆ ತಕ್ಕ ಉತ್ತರ ನೀಡುವ ಚಿಂತನೆಯಲ್ಲಿದ್ದಾರೆ.


    ಚಾಮುಂಡೇಶ್ವರಿ ಕ್ಷೇತ್ರದ ಸೋಲು ಸಿದ್ದರಾಮಯ್ಯ ಅವರನ್ನು ಇನ್ನೂ ಕಾಡುತ್ತಲೇ ಇದೆ. ರಾಜಕೀಯ ವೈರಿಗಳೂ ಆ ಸೋಲಿನ ಬಗ್ಗೆಯೇ ಟೀಕಿಸುತ್ತಿರುವುದು ಅವರ ಪ್ರತಿಷ್ಠೆಗೆ ಧಕ್ಕೆ ತಂದಿದೆ. ಜತೆಗೆ, ಮುಜುಗರವನ್ನೂ ಉಂಟು ಮಾಡುತ್ತಿದೆ. ಹಾಗಾಗಿ, ಮತ್ತೆ ತವರು ಜಿಲ್ಲೆಯಿಂದಲೇ ಸ್ಪರ್ಧಿಸಿ, ಗೆಲುವು ಪಡೆದು ರಾಜಕೀಯ ವೈರಿಗಳಿಗೆ ತಕ್ಕ ಉತ್ತರ ನೀಡಲು ಮುಂದಾಗಿದ್ದಾರೆ. 2023ರ ವಿಧಾನಸಭಾ ಚುನಾವಣೆಯೇ ತನ್ನ ಕಡೇ ಚುನಾವಣೆ ಎಂದಿರುವ ಸಿದ್ದರಾಮಯ್ಯ, ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತರಾಗಿದ್ದಾರೆ.


    ಇದಕ್ಕೆ ಪುಷ್ಟಿ ನೀಡುವಂತೆ ಮೂರು ತಿಂಗಳಿಂದ ಅತಿ ಹೆಚ್ಚು ಬಾರಿ ಹುಣಸೂರು ಕ್ಷೇತ್ರಕ್ಕೆ ಭೇಟಿ ನೀಡಿ, ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಕ್ಷೇತ್ರದ ಕಾರ್ಯಕರ್ತರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮೈಸೂರಿಗೆ ಬಂದಾಗಲೆಲ್ಲ ಹುಣಸೂರು ಕಾರ್ಯಕರ್ತರ ಜತೆಗೆ ಹೆಚ್ಚಾಗಿ ಸಂಪರ್ಕ ಬೆಳೆಸುತ್ತಿದ್ದಾರೆ. ಹುಣಸೂರು ಶಾಸಕ ಎಚ್.ಪಿ.ಮಂಜುನಾಥ್ ಅವರನ್ನು ಎಂಎಲ್‌ಸಿ ಮಾಡಿ, ತಾವೇ ಕ್ಷೇತ್ರದ ಅಭ್ಯರ್ಥಿಯಾಗಬೇಕು ಎಂದು ಸ್ಥಳೀಯ ಕಾರ್ಯಕರ್ತರೂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ.


    ಹುಣಸೂರಿನಿಂದ ಸ್ಪರ್ಧೆ?:
    ‘ವರುಣ, ಚಾಮುಂಡೇಶ್ವರಿ, ಹುಣಸೂರು, ಹೆಬ್ಬಾಳ, ಚಾಮರಾಜಪೇಟೆ, ಬಾದಾಮಿ, ಕೋಲಾರ ಕ್ಷೇತ್ರದ ಜನರು ತಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ’ ಎಂದು ಈಚೆಗಷ್ಟೇ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಈ ಪೈಕಿ ಹುಣಸೂರು ಕ್ಷೇತ್ರದ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದಾರೆ. ವರುಣ ಕ್ಷೇತ್ರದಿಂದ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಮತ್ತೆ ನಿಲ್ಲಿಸಲು ಎಲ್ಲ ತಯಾರಿ ನಡೆಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.
    ಹುಣಸೂರು ಕ್ಷೇತ್ರ ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಕರ್ಮಭೂಮಿ. ತಮ್ಮ ರಾಜಕೀಯದುದ್ದಕ್ಕೂ ದೇವರಾಜ ಅರಸು ರೀತಿಯೇ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸಿದ್ದರಾಮಯ್ಯ ಕೆಲಸ ಮಾಡಿದ್ದಾರೆ. ಅಂತೆಯೆ, ಅರಸು ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದಲೇ ಕಡೆಯ ಚುನಾವಣೆಯನ್ನು ಎದುರಿಸಬೇಕು ಎಂಬ ಕನಸು ಕಂಡಿದ್ದಾರೆ. ಜತೆಗೆ, ಸುಲಭವಾಗಿ ಗೆಲ್ಲಬಹುದಾದ ವಾತಾವರಣ ನಿರ್ಮಾಣವಾಗಿರುವುದರಿಂದ ಹುಣಸೂರಿನಲ್ಲಿ ಸ್ಪರ್ಧಿಸುವ ಚಿಂತನೆಯಲ್ಲಿದ್ದಾರೆ.


    ಜಿಟಿಡಿ ಬಲವೂ ಇದೆ:
    ಶಾಸಕ ಜಿ.ಟಿ.ದೇವೇಗೌಡ ಕಾಂಗ್ರೆಸ್ ಸೇರುವುದಾಗಿ ಅನೇಕ ಬಾರಿ ಹೇಳಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಅವರು ಶೀಘ್ರದಲ್ಲೇ ಕಾಂಗ್ರೆಸ್ ಬಾವುಟ ಹಿಡಿಯಲಿದ್ದಾರೆ. ಜಿಟಿಡಿ ಕೂಡ ಹುಣಸೂರು ಕ್ಷೇತ್ರದಲ್ಲಿ ಅಪಾರ ಪ್ರಭಾವ ಹೊಂದಿದ್ದಾರೆ. ಅವರ ಜತೆಯಲ್ಲಿಯೇ ಅನೇಕ ಜೆಡಿಎಸ್ ಕಾರ್ಯಕರ್ತರೂ ಕಾಂಗ್ರೆಸ್ ಸೇರುವ ಸಾಧ್ಯತೆ ಇದ್ದು, ಈ ಎಲ್ಲ ಅಂಶಗಳೂ ಕಾಂಗ್ರೆಸ್ ಗೆಲುವಿಗೆ ವರವಾಗಲಿವೆ. ಇನ್ನು ಕ್ಷೇತ್ರದಲ್ಲಿ ಒಕ್ಕಲಿಗ, ದಲಿತ, ಕುರುಬ ಮತ್ತು ನಾಯಕ ಸಮುದಾಯದ ಮತದಾರರೇ ಹೆಚ್ಚಾಗಿದ್ದಾರೆ. ಕುರುಬ ಹಾಗೂ ದಲಿತ ಸಮುದಾಯದ ಹೆಚ್ಚು ಮತದಾರರು ಕಾಂಗ್ರೆಸ್ ಪರ ಇದ್ದಾರೆ. ಜಿ.ಟಿ.ದೇವೇಗೌಡ ಅವರು ಒಕ್ಕಲಿಗ ಮತದಾರರ ಮೇಲೆ ಹಾಗೂ ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ನಾಯಕ ಸಮುದಾಯದ ಮತದಾರ ಮೇಲೆ ಪ್ರಭಾವ ಬೀರಲಿದ್ದು, ಗೆಲುವು ಸುಲಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಸಿದ್ದರಾಮಯ್ಯ ಇದ್ದಾರೆ.


    ಪಕ್ಕದ ಕ್ಷೇತ್ರಗಳಿಗೂ ಅನುಕೂಲ:
    ಸಿದ್ದರಾಮಯ್ಯ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸುವುದರಿಂದ ಪಕ್ಕದ ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಹಾಗೂ ಚಾಮುಂಡೇಶ್ವರಿ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೂ ಅನುಕೂಲವಾಗುತ್ತದೆ.
    ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣದಲ್ಲಿ ಹಾಲಿ ಜೆಡಿಎಸ್ ಶಾಸಕರಿದ್ದಾರೆ. ಇನ್ನು ಕಾಂಗ್ರೆಸ್ ಶಾಸಕರಿರುವ ಎಚ್.ಡಿ.ಕೋಟೆಯಲ್ಲೂ ಜೆಡಿಎಸ್ ಪ್ರಬಲವಾಗಿದ್ದು, ಸಿದ್ದರಾಮಯ್ಯ ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಈ ಎಲ್ಲ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ.


    ಸಿದ್ದರಾಮಯ್ಯ ಅವರ ಏಳು-ಬೀಳು:
    ಡಿ.ದೇವರಾಜ ಅರಸು ಬಳಿಕ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸಿದ್ದರಾಮಯ್ಯ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 4 ದಶಕದಿಂದ ಜಿಲ್ಲೆಯ ರಾಜಕೀಯದಲ್ಲಿ ಹಿಡಿತ ಸಾಧಿಸಿರುವ ಅವರು, 1983ರಲ್ಲಿ ಚುನಾವಣಾ ರಾಜಕೀಯ ಆರಂಭಿಸಿ 10 ಚುನಾವಣೆಗಳನ್ನು ಎದುರಿಸಿ 8 ಬಾರಿ ಗೆದ್ದಿದ್ದಾರೆ.
    1983ರಲ್ಲಿ ಪಕ್ಷೇತರವಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಮೊದಲ ಬಾರಿಗೆ 26,614 ಮತ ಪಡೆದು ಶಾಸಕರಾಗಿ ಆಯ್ಕೆಯಾದರು. ಬಳಿಕ 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿದ ಅವರು ಮತ್ತೆ ಶಾಸಕರಾಗಿ ಆಯ್ಕೆಯಾಗಿ, ಸಚಿವರಾಗಿಯೂ ಕೆಲಸ ಮಾಡಿದರು. ಜತೆಗೆ, ರಾಜ್ಯಮಟ್ಟದ ನಾಯಕರಾಗಿ ಗುರುತಿಸಿಕೊಂಡರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ರಾಜಶೇಖರಮೂರ್ತಿ ವಿರುದ್ಧ ಸೋಲು ಕಂಡರು. 1994ರಲ್ಲಿ 76,823 ಮತ ಪಡೆಯುವ ಮೂಲಕ ಮೂರನೇ ಬಾರಿಗೆ ಶಾಸಕರಾಗಿ, ಸಚಿವರಾದರು. ಎಚ್.ಡಿ.ದೇವೇಗೌಡರು ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾದರು. ಆದರೆ, 1999ರ ಚುನಾವಣೆಯಲ್ಲಿ ಮತ್ತೆ ಸೋತರು. 2004ರಲ್ಲಿ ಗೆಲುವು ಪಡೆದು ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾದರು. ಕ್ಷೇತ್ರ ವಿಭಜನೆಯ ಕಾರಣ 2008ರಲ್ಲಿ ಸಿದ್ದರಾಮಯ್ಯ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಪಡೆದು, ಪ್ರತಿಪಕ್ಷದ ನಾಯಕರಾದರು. 2013ರಲ್ಲಿ ಮತ್ತೆ ವರುಣ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿಯಾದರು. 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿ, ಚಾಮುಂಡೇಶ್ವರಿಯಲ್ಲಿ ಸೋಗು, ಬಾದಾಮಿಯಲ್ಲಿ ಗೆಲುವು ಪಡೆದರು.

    2023ರ ಚುನಾವಣೆಯೇ ನನ್ನ ಕಡೆಯ ಚುನಾವಣೆ. ಬಳಿಕ ರಾಜಕೀಯದಲ್ಲಿರುತ್ತೇನೆಯೇ ಹೊರತು, ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹುಣಸೂರು ಸೇರಿದಂತೆ ವರುಣ, ಚಾಮುಂಡೇಶ್ವರಿ, ಹೆಬ್ಬಾಳ, ಚಾಮರಾಜಪೇಟೆ, ಬಾದಾಮಿ, ಕೋಲಾರ ಕ್ಷೇತ್ರದ ಜನರು ಅವರ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಆಹ್ವಾನ ನೀಡುತ್ತಿದ್ದಾರೆ. ಆದರೆ ಎಲ್ಲಿ ನಿಲ್ಲಬೇಕೆಂದು ನಾನಿನ್ನೂ ತೀರ್ಮಾನ ಮಾಡಿಲ್ಲ.
    ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts