More

    ಸಿದ್ದರಾಮಯ್ಯರ ಕಣ್ಣು ಹಳದಿ ಆಗಿವೆ – ರಮೇಶ ಜಾರಕಿಹೊಳಿ

    ಬೆಳಗಾವಿ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಅವರ ಕಣ್ಣು ಹಳದಿ ಆಗಿವೆೆ. ಹೀಗಾಗಿ ಅವರು ಅದೇ ರೀತಿ ನೋಡಲಿ ಬಿಡಿ’ ಎಂದು ಟಾಂಗ್ ನೀಡಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮಹಾನ್ ನಾಯಕರು. ಅವರ ಬಗ್ಗೆ ನನಗೆ ಗೌರವವಿದೆ.

    ರಾಜ್ಯಸಭಾ ಚುನಾವಣೆ ವಿಚಾರವಾಗಿ ಬಿಜೆಪಿ ಶಾಸಕರ ಭೇಟಿ ಕುರಿತು ಅವರು ಏನು ಹೇಳಿದ್ದಾರೋ ಗೊತ್ತಿಲ್ಲ. ಆದರೆ, ನಮ್ಮ ಅನಿಸಿಕೆಯನ್ನು ಪಕ್ಷದ ನಾಯಕರಿಗೆ ಹೇಳಿದ್ದೇವೆ. ಅದನ್ನು ಬಹಿರಂಗ ಪಡಿಸುವುದಿಲ್ಲ. ಪಕ್ಷದ ತೀರ್ಮಾನಕ್ಕೆ ನಾನೂ ಬದ್ಧ ಎಂದರು.

    ನನ್ನ ಸಂಪರ್ಕದಲ್ಲಿ ಕೈ ಶಾಸಕರು: ಉಮೇಶ ಕತ್ತಿ ಅವರ ಮನೆಯಲ್ಲಿನ ನಡೆದ ಔತಣಕೂಟ ಬಂಡಾಯವಲ್ಲ. ಸದ್ಯ ಹೋಟೆಲ್‌ಗಳೆಲ್ಲ ಬಂದ್ ಇವೆ. ಹೀಗಾಗಿ ಶಾಸಕರು ಅವರ ಮನೆಯಲ್ಲಿ ಒಮ್ಮೆ ಊಟ ಮಾಡಿದ್ದಾರೆ ಅಷ್ಟೇ. ನಾಲ್ಕು ಜನ ಶಾಸಕರು ನಮ್ಮ ಮನೆಗೆ ಬಂದು ಊಟ ಮಾಡಿದರೆ ಅದನ್ನೂ ಬಂಡಾಯ ಅಂದ್ರೆ ನಾವೇನು ಮಾಡೋಣಾ..! ಎಂದ ಅವರು, ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಇನ್ನೂ ನನ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು. ಬೆಳಗಾವಿ ‘ರಾಜಕೀಯ’ ವಿಚಾರವಾಗಿ ಸಿಎಂ ಬಿಎಸ್‌ವೈ ಸಮಸ್ಯೆ ಎದುರಿಸುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರು ಚಿಕ್ಕ ವಯಸ್ಸಿನಿಂದಲೂ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಇಂತಹದ್ದನ್ನೆಲ್ಲ ತುಂಬಾ ಎದುರಿಸಿದ್ದಾರೆ. ಅವರು ಯಾವುದಕ್ಕೂ ಹೆದರುವವರಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ತಪ್ಪು ಸರಿಪಡಿಸಲು ಸಲಹೆ: ಕಳೆದ ಬಾರಿ ಪ್ರವಾಹದಿಂದಾದ ಹಾನಿ ಹಾಗೂ ಪರಿಹಾರ ಒದಗಿಸುವಲ್ಲಿ ಆಗಿದ್ದ ತಪ್ಪು ಸರಿ ಪಡಿಸಲು ಈಗಾಗಲೇ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ಮಾಡಲಾಗಿದೆ. ಜಿಲ್ಲೆಯ ನೇಕಾರರ ಸಮಸ್ಯೆಗೆ ಸ್ಪಂದಿಸಲು ಕೇಂದ್ರ ಸಚಿವರ ನೇತೃತ್ವದಲ್ಲಿ ಸಿಎಂ ಭೇಟಿ ಮಾಡಿ ಮನವಿ ಮಾಡುವೆ. ಜಿಲ್ಲೆಯ ಅಭಿವೃದ್ಧಿಗಾಗಿ ಶಾಸಕ ಹಾಗೂ ಸಹೋದರ ಸತೀಶ ಜಾರಕಿಹೊಳಿ ಸೇರಿ ಯಾರೇ ಸಲಹೆ ಕೊಟ್ಟರೂ ಪಕ್ಷಾತೀತವಾಗಿ ಪರಿಗಣಿಸಿ, ಕೆಲಸ ಮಾಡುತ್ತೇನೆ ಎಂದರು.

    ಮೂರನೇ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಈ ಮುಂಚೆ ಜಗದೀಶ ಶೆಟ್ಟರ್ ಅವರು ಉಸ್ತುವಾರಿ ಇದ್ದಾಗಲೂ ನಾನೇ ಕೆಲಸ ಮಾಡುತ್ತಿದ್ದೆ. ಇದೀಗ ಪೂರ್ಣ ಪ್ರಮಾಣದಲ್ಲಾಗಿರುವುದು ಅಷ್ಟೊಂದು ಬದಲಾವಣೆ ಎನಿಸಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವುದು ತಮ್ಮ ಜವಾಬ್ದಾರಿ ಎಂದರು. ಕೇಂದ್ರ ಸಚಿವ ಸುರೇಶ ಅಂಗಡಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts