ಶಾಕಿಂಗ್​ ನ್ಯೂಸ್​- ರಾತ್ರಿ ಊಟಕ್ಕೆ ನರಮಾಂಸದ ಅಡುಗೆ ಮಾಡಿದ ಪತಿ, ಬೆದರಿ ಮನೆಯಿಂದ ಹೊರಗೋಡಿದ ಪತ್ನಿ

Man Death 29 Feb 20
Published on

ಲಖನೌ: ಡಿನ್ನರ್ ಗೆ ಚಿಕನ್​, ಮಟನ್ ಅಡುಗೆ ಮಾಡಿ ಬಳುಸುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಅವೆಲ್ಲ ಸಹಜ. ಇಲ್ಲೊಬ್ಬ ಪತಿರಾಯ ಮನೆಯಲ್ಲಿ ನರಮಾಂಸದ ಅಡುಗೆ ಮಾಡಲು ಶುರುಮಾಡಿಕೊಂಡಿದ್ದ. ಪತಿಯ ಕೃತ್ಯವನ್ನು ನೋಡಿ ಹೆದರಿ ಕಂಗಾಲಾದ ಪತ್ನಿ ಮನೆಯಿಂದ ಹೊರಗೋಡಿ ಶಾಕ್​ಗೆ ಒಳಗಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಬಿಜನೂರಿನ ತಿಕ್ಕೋಪುರ ಗ್ರಾಮದಲ್ಲಿ ಸೋಮವಾರ ಈ ವಿಲಕ್ಷಣ ಘಟನೆ ನಡೆದಿದೆ. ಕೃತ್ಯವೆಸಗಿದ ವ್ಯಕ್ತಿಯನ್ನು ಸಂಜಯ್​ (32) ಎಂದು ಗುರುತಿಸಲಾಗಿದೆ. ಆತನ ಪತ್ನಿ ನೀಡಿರುವ ಹೇಳಿಕೆ ಪ್ರಕಾರ, ಆಕೆ ಸೋಮವಾರ ಮಾರುಕಟ್ಟೆಗೆ ಹೋಗಿ ಮನೆಗೆ ಹಿಂತಿರುಗಿದ ವೇಳೆ ಪತಿ ಮನೆಯಲ್ಲಿ ನರಮಾಂಸದ ಅಡುಗೆ ಮಾಡುತ್ತಿರುವುದು ಕಂಡುಬಂದಿದೆ.

ನೆರೆಹೊರೆಯವರ ಮೂಲಕ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸಂಜಯ್ ಕುಡುಕನಾಗಿದ್ದು, ನಶೆಯಲ್ಲಿಯೇ ಸ್ಮಶಾನಕ್ಕೆ ತೆರಳಿದ್ದ. ಅಲ್ಲಿಂದ ಅರೆಬೆಂದ ನರಮಾಂಸವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಂದು ಪ್ಯಾನ್​ನಲ್ಲಿ ಇಟ್ಟು ಸುಡುತ್ತಿದ್ದ. ಆಗ ಆತನ ಪತ್ನಿ ಅಡುಗೆ ಮನೆ ಪ್ರವೇಶಿಸಿದ್ದಾರೆ.

ಪ್ಯಾನ್​ನಲ್ಲಿ ಮನುಷ್ಯನ ಕೈ ಮತ್ತು ಬೆರಳುಗಳನ್ನು ಕಂಡು ಸಿಕ್ಕಾಪಟ್ಟೆ ಭಯಭೀತಳಾದ ಸಂಜಯ್ ಪತ್ನಿ ಮನೆಯಿಂದ ಹೊರಗೋಡಿ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾರೆ. ಹಾಗೆ ಪೊಲೀಸರಿಗೂ ವಿಷಯ ತಲುಪಿದೆ. ಪೊಲೀಸರು ಸ್ಥಳಕ್ಕಾಗಮಿಸುವ ತನಕವೂ ಸಂಜಯ್​ನನ್ನು ಸ್ಥಳೀಯರು ಆ ಮನೆಯಲ್ಲಿಯೇ ಕೂಡಿ ಹಾಕಿದ್ದರು. ಈ ನಡುವೆ, ಸಂಜಯ್ ಪತ್ನಿ ಆ ಮನೆ ಪ್ರವೇಶಿಸಲು ನಿರಾಕರಿಸಿದ್ದಾರೆ.

ಈಗ್ಗೆ ಕೆಲವು ದಿನಗಳ ಹಿಂದೆ ಸಂಜಯ್ ತನ್ನ ತಂದೆಯ ಮೇಲೂ ಆಕ್ರಮಣ ಮಾಡಿದ್ದ ಎಂಬ ಅಂಶವೂ ಬೆಳಕಿಗೆ ಬಂದಿದೆ. ನರಮಾಂಸವನ್ನು ಸಂಜಯ್​ ಗಂಗಾ ನದಿ ದಂಡೆಯ ಮಸಣದಿಂದ ತಂದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಸ್ಥಳೀಯ ಸ್ಟೇಷನ್ ಹೌಸ್ ಆಫೀಸರ್ ಆರ್.ಸಿ.ಶರ್ಮಾ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net