

ಶಿಕಾರಿಪುರ: ರಾಜ್ಯ ಸರ್ಕಾರದ ಅನುದಾನದ ಕೊರತೆ ಇದ್ದರೂ ಪುರಸಭೆಯು ಆರ್ಥಿಕ ಇತಿಮಿತಿಯೊಳಗೆ ಪಟ್ಟಣದ ಜನರಿಗೆ ಮೂಲ ಸೌಕರ್ಯ ಒದಗಿಸಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪುರಸಭೆ ನೂತನ ಅಧ್ಯಕ್ಷೆ ಸುನಂದಾ ಮಂಜುನಾಥ್ ಅವರನ್ನು ಸನ್ಮಾನಿಸಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರನ್ನು ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿದ್ದು ಇದೇ ಪುರಸಭೆ. ಜನಪ್ರತಿನಿಧಿಗಳು ಪಟ್ಟಣದ ಅಭಿವೃದ್ಧಿ ಶ್ರಮಿಸಿ ಜನಪರ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈಗ ಪ್ರಮುಖವಾಗಿ ಇ-ಸ್ವತ್ತಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಪಕ್ಷ ಭೇದವಿಲ್ಲದೆ ಎಲ್ಲರ ಸಹಕಾರ, ಮಾರ್ಗದರ್ಶನದಿಂದ ಸಮಸ್ಯೆ ಪರಿಹರಿಸಲು ಪ್ರಯತ್ನಿಸಬೇಕು. ಜನರು ನಿಮ್ಮ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಕೆಲಸ ಮಾಡಿ ಜನಸ್ನೇಹಿಯಾಗಿಸಬೇಕು ಎಂದರು.
ಪುರಸಭೆ ಅಧ್ಯಕ್ಷೆಯಾಗಿರುವ ಅವಧಿಯಲ್ಲಿ ಇ-ಸ್ವತ್ತು ಸಮಸ್ಯೆ ಸೇರಿ ಪಟ್ಟಣದ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತೇನೆ. ಇದೊಂದು ಸುವರ್ಣ ಅವಕಾಶ. ಶಾಸಕರು, ಸಂಸದರು ಹಾಗೂ ಎಲ್ಲ ಸದಸ್ಯರ ಸಲಹೆ, ಮಾರ್ಗದರ್ಶನ ಪಡೆದು ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ.
ಸುನಂದಾ ಮಂಜುನಾಥ್
ಪುರಸಭೆ ನೂತನ ಅಧ್ಯಕ್ಷೆ
ಪುರಸಭೆ ಉಪಾಧ್ಯಕ್ಷೆ ರೂಪಾ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಸದಸ್ಯರಾದ ಶೈಲಾ ಮಡ್ಡಿ, ಪ್ರಶಾಂತ್, ರೇಖಾಬಾಯಿ, ಲಕ್ಷ್ಮೀ ಮಹಾಲಿಂಗಪ್ಪ, ರೇಣುಕಸ್ವಾಮಿ, ಪಾಲಾಕ್ಷಪ್ಪ, ಉಮಾವತಿ, ಶಬೀನಾ ಬಾನು, ರೂಪಕಲಾ ಹೆಗಡೆ, ರಾಘವೇಂದ್ರ, ಸಾದಿಕ್, ಸುರೇಶ್, ಕಚೇರಿ ವ್ಯವಸ್ಥಾಪಕ ರಾಜ್ಕುಮಾರ್ ಇತರರಿದ್ದರು.