More

    ರೈತ ಹೋರಾಟ ದೇಶಾದ್ಯಂತ ವಿಸ್ತರಣೆ: ರಾಕೇಶ್ ಟಿಕಾಯತ್ ಎಚ್ಚರಿಕೆ

    ಶಿವಮೊಗ್ಗ: ಮೂರು ಕೃಷಿ ನೀತಿ ಕಾಯ್ದೆಗಳನ್ನು ಹಿಂಪಡೆಯಬೇಕು ಮತ್ತು ಎಂಎಸ್‌ಪಿ ಕಾನೂನು ಜಾರಿಗೆ ತರಬೇಕೆಂದು ಕಳೆದ ನಾಲ್ಕು ತಿಂಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಇದ್ಯಾವುದೂ ಕೇಂದ್ರ ಸರ್ಕಾರದ ಕಿವಿಗೆ ಕೇಳುತ್ತಿಲ್ಲ. ಮೇ ಅಥವಾ ಜೂನ್‌ನಲ್ಲಿ ರೈತರು ಹೋರಾಟ ನಿಲ್ಲಿಸುತ್ತಾರೆಂಬ ಭ್ರಮೆಯಲ್ಲಿ ಸರ್ಕಾರವಿದೆ. ಆದರೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ರಾಕೇಶ್ ಟಿಕಾಯತ್ ಎಚ್ಚರಿಕೆ ನೀಡಿದರು.
    ನಗರದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, ಬಹುರಾಷ್ಟ್ರೀಯ ಕಂಪನಿಗಳು ನಮ್ಮನ್ನಾಳಲು ಕಾತುರತೆಯಿಂದ ಕಾಯುತ್ತಿವೆ. ಈಗ ತರಕಾರಿ ಸೇರಿ ಹಲವು ವಸ್ತುಗಳು ಮಾಲ್ ಗಳಲ್ಲಿ ಖರೀದಿ ಮಾಡುತ್ತಿದ್ದೇವೆ. ಮುಂದೊಂದು ದಿನ ತಿನ್ನುವ ರೋಟ್ಟಿ ಕೂಡ ಮಾಲ್ ನಲ್ಲಿ ಖರೀದಿ ಮಾಡುವ ಪರಿಸ್ಥಿತಿ ಬರಬಹುದು ದೇಶದ ಜನರು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಕರೆ ನೀಡಿದರು.
    ಈಗಾಗಲೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಕರಣಗೊಳಿಸಲಾಗುತ್ತಿದೆ. ಇದರ ವಿರುದ್ಧ ನಾವುಗಳು ಹೋರಾಡುತ್ತಿದ್ದೇವೆ. ದೇಶದಲ್ಲಿ ಜನರ, ಜನರಿಗಾಗಿ ಸರ್ಕಾರ ಇರಬೇಕು. ಆದರೆ ಇದು ಕಾರ್ಪೊರೇಟ್ ಕಂಪನಿಗಳ ಪರವಾಗಿರುವ ಸರ್ಕಾರವಾಗಿದೆ ಎಂದು ಕಿಡಿಕಾರಿದರು.
    ಈ ಆಂದೋಲನ ಈ ಕಾಯ್ದೆಗಳನ್ನು ಹಿಂಪಡೆದು ರೈತರ ಹಿತ ಕಾಯುವವರೆಗೂ ಮುಗಿಯುವುದಿಲ್ಲ. ದೇಶದ ಎಲ್ಲ ರಾಜ್ಯಗಳಿಗೂ ವಿಸ್ತರಣೆ ಮಾಡುತ್ತೇವೆ. ಕರ್ನಾಟಕದಲ್ಲೂ ಕೃಷಿ ನೀತಿ ಕಾಯ್ದೆ ಜಾರಿಗೊಳಿಸಲಾಗುತ್ತಿದೆ. ಅದರ ವಿರುದ್ಧವೂ ಹೋರಾಟಗಳು ನಿರಂತರವಾಗಿ ನಡೆಯಬೇಕಿದೆ. ಯಾವುದೇ ಕಾರಣಕ್ಕೂ ರಾಜ್ಯದ ರೈತರು ಸುಮ್ಮನೆ ಕೂರಬಾರದು. ರೈತ ಪಂಚಾಯತ್ ಸಮಾವೇಶ ದೇಶದೆಲ್ಲೆಡೆ ಮುಂದುವರಿಯಬೇಕಿದೆ ಎಂದು ಮನವಿ ಮಾಡಿದರು.
    ಧರ್ಮ, ಜಾತಿಗಳನ್ನು ಮುಂದಿಟ್ಟುಕೊಂಡು, ಸರ್ಕಾರ ನಡೆಸಲಾಗುತ್ತಿದೆ. ರೈತರ ಹಿತ ಕಾಪಾಡುವ ರೀತಿಯಲ್ಲಿ ಸರ್ಕಾರ ಆಡಳಿತ ನಡೆಸಬೇಕಿದೆ. ಆಗ ಮಾತ್ರ ದೇಶ ಉಳಿಯಲಿದೆ. ಧರ್ಮ, ಜಾತಿ ವಿಚಾರದಲ್ಲಿ ಜನರ ಕಣ್ಣಿಗೆ ಮಣ್ಣೆರುಚುವ ಕೆಲಸ ನಡೆಸಲಾಗುತ್ತಿದೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts