ಎಲ್ಲ ಧರ್ಮದ ಉಳಿವಿಗೆ ಹೋರಾಟ ಮಾಡಿದರು ಶಿವಾಜಿ

shivaji jayanti
ಕುವೆಂಪು ರಂಗಮಂದಿರದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಶಿವಾಜಿ ಜಯಂತಿಯನ್ನು ಉದ್ಘಾಟಿಸಿದರು. ಶ್ರೀಮಂಜುನಾಥ ಭಾರತೀ ಸ್ವಾಮೀಜಿ, ದಯಾನಂದಗಿರಿ ಸ್ವಾಮೀಜಿ, ಬಿ.ವೈ.ರಾಘವೇಂದ್ರ, ಬೇಳೂರು ಗೋಪಾಲಕೃಷ್ಣ, ಎಂ.ಜಿ.ಮುಳೆ, ಡಾ. ಧನಂಜಯ ಸರ್ಜಿ, ಸಚಿನ್ ಶಿವಾಜಿರಾವ್ ಸಿಂಧ್ಯಾ, ಎಂ.ಪ್ರವೀಣ್‌ಕುಮಾರ್, ಎಚ್.ಸಿ.ಯೋಗೇಶ್, ದೇವರಾಜ್ ಸಿಂಧ್ಯಾ, ಗೀತಾ ಸತೀಶ್ ಇದ್ದರು.
Published on

ಶಿವಮೊಗ್ಗ: ಛತ್ರಪತಿ ಶಿವಾಜಿ ಮಹಾರಾಜರು ಒಂದು ಧರ್ಮದ ವಿರುದ್ಧ ಹೋರಾಟ ಮಾಡಲಿಲ್ಲ. ಎಲ್ಲ ಧರ್ಮದ ಉಳಿವಿಗಾಗಿ ಹೋರಾಟ ಮಾಡಿದರು. ಆದರೆ ಇತಿಹಾಸ ತಿಳಿಯದೆ ಮಾತನಾಡುವವರ ಸಂಖ್ಯೆ ಹೆಚ್ಚಾಗಿದ್ದು, ಶಿವಾಜಿಯನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಳವಳ ವ್ಯಕ್ತಪಡಿಸಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಮರಾಠ ಸಮಾಜ ಮುಸ್ಲಿಂ ವಿರೋಧಿ ಎಂದು ಬಿಂಬಿಸಲಾಗುತ್ತಿರುವುದು ಸರಿಯಲ್ಲ. ಮೊಘಲರನ್ನು ಸೋಲಿಸುವ ಸಂದರ್ಭದಲ್ಲಿ ಶಿವಾಜಿ ಸೇನೆಯಲ್ಲಿ ಮುಸ್ಲಿಮರ ಒಂದು ಪಡೆಯೇ ಇತ್ತು. ಖಾಜಿ ಹೈದರ್ ಶಿವಾಜಿಯ ವಕೀಲರಾಗಿದ್ದ. ರುಸ್ತುಮ್ ಎ ಜಮಾಲ್ ಶಿವಾಜಿಗೆ ನಿರಂತರ ಸಹಾಯ ಮಾಡುತ್ತಿದ್ದ ಎಂದರು.

ದೇಶದಲ್ಲಿಂದು ಶ್ರೀಮಂತರಿಗೆ ಯಾವುದೇ ಜಾತಿ ಇಲ್ಲ. ಆದರೆ ಬಡವರು, ಮಧ್ಯಮ ವರ್ಗದವರಲ್ಲಿ ಮಾತ್ರ ಜಾತಿಯ ವಿಷ ಬೀಜ ಬಿತ್ತಲಾಗಿದೆ. ಎಲ್ಲರಿಗೂ ಸಮಪಾಲು, ಸಮಬಾಳು ಸಿಗದಿದ್ದರೆ ಸಮಾಜ ಕಟ್ಟಲು ಸಾಧ್ಯವಿಲ್ಲ. ಹಿಂದು ಸ್ವರಾಜ್, ಹಿಂದೂ ಸಂಘಟನೆ ಎಂದು ಹೇಳಿಕೊಂಡು ಓಡಾಡುವ ಯಾರೋಬ್ಬರೂ ತಮ್ಮ ಮನೆಯಲ್ಲಿ ಶಿವಾಜಿ ಭಾವಚಿತ್ರ ಹಾಕಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೇಶದಲ್ಲೇ ಮೊದಲ ಬಾರಿಗೆ ಮೀಸಲಾತಿ ಜಾರಿಗೆ ತಂದವರು ಶಾಹು ಮಹಾರಾಜ್. ಆದರೆ ಈಗ ನಮ್ಮ ಸಮಾಜವೇ 2ಎ ಮೀಸಲಾತಿ ಕೇಳಬೇಕಾದ ಸ್ಥಿತಿ ಬಂದಿದೆ. ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿ ತರಲಾಗಿದೆ. ಕರ್ನಾಟಕದಲ್ಲೂ ಶೇ.75ರಷ್ಟು ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗಿದೆ ಎಂದು ಹೇಳಿದರು.

ಎಂಎಲ್‌ಸಿ ಎಂ.ಜಿ.ಮುಳೆ ಮಾತನಾಡಿದರು. ಬೆಂಗಳೂರಿನ ಗೋಸಾಯಿ ಮಠದ ಶ್ರೀಮಂಜುನಾಥ ಭಾರತೀ ಸ್ವಾಮೀಜಿ ಹಾಗೂ ದಯಾನಂದಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಸಚಿನ್ ಶಿವಾಜಿರಾವ್ ಸಿಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶಾರದಾ ಪೂರ‌್ಯಾನಾಯ್ಕ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್,ಸಮಾಜದ ಗೌರವಾಧ್ಯಕ್ಷ ಎಂ.ಪ್ರವೀಣ್‌ಕುಮಾರ್, ಮುಖಂಡರಾದ ಎಚ್.ಸಿ.ಯೋಗೇಶ್, ಎಸ್.ಕೆ.ಮರಿಯಪ್ಪ, ದೇವರಾಜ್ ಸಿಂಧ್ಯಾ, ಗೀತಾ ಸತೀಶ್, ಶಿವಾಜಿರಾವ್, ಪ್ರಕಾಶ್ ಭಾಗೋಜಿ, ಕವಿತಾ ಯೋಗಪ್ಪನವರ್, ಯಮುನಾ ರಂಗೇಗೌಡ, ಕೆ.ರಂಗನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net