More

    ವಿಶ್ವಾಸ ಗೆದ್ದ ಶಿಂಧೆ ಸರ್ಕಾರ!; ಅನರ್ಹತೆ ಭೀತಿ ಕಾರಣ ಮತ ಚಲಾಯಿಸದ ಹಲವು ಶಾಸಕರು..

    ನವದೆಹಲಿ: ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಿವಸೇನೆಯ ಏಕನಾಥ ಶಿಂಧೆ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸರ್ಕಾರ, ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಯಲ್ಲೂ ಗೆದ್ದು ಬೀಗಿದೆ. ಈ ಮೂಲಕ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ, ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷ ಒಳಗೊಂಡ ವಿರೋಧಿ ಬಣವನ್ನು ವಿಧಾನಸಭೆ ಅಂಗಳದಲ್ಲೂ ಸೋಲಿಸಿದಂತಾಗಿದೆ.

    ಸರ್ಕಾರದ ಪರ 164 ಶಾಸಕರು ಮತ ಹಾಕಿದರೆ ವಿರೋಧ ಪಕ್ಷದ ಪರ 99 ಶಾಸಕರು ಮತ ಹಾಕಿದ್ದರು. ಸ್ಪೀಕರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಿರೋಧಿ ಪಾಳಯಕ್ಕೆ 107 ಮತಗಳು ಬಿದ್ದಿದ್ದವು. ಆದರೆ, ಸೋಮವಾರದ ವಿಶ್ವಾಸಮತಕ್ಕೆ 8 ಶಾಸಕರ ಮತ ಕಡಿಮೆಯಾಗಿರುವುದು ಗಮನಾರ್ಹ. ಉದ್ಧವ್ ಬಣದ ಒಬ್ಬ ಶಾಸಕ ಶಿಂಧೆ ಸರ್ಕಾರದ ಪರ ಮತ ಹಾಕಿದರೆ ಕೆಲವರು ಅನರ್ಹತೆ ಭಯದಿಂದ ಮತ ಚಲಾಯಿಸಲು ಮುಂದಾಗಲಿಲ್ಲ ಎನ್ನಲಾಗಿದೆ.

    ಈಗ ನಾವು 165 ಶಾಸಕರಿದ್ದು, ಮುಂದಿನ ಬಾರಿ ಇದು 200ಕ್ಕೇರಲಿದೆ. ಈ ಭರವಸೆಯನ್ನು ನಾನು ಈಡೇರಿಸದಿದ್ದರೆ ಹಳ್ಳಿಗೆ ಹಿಂತಿರುಗಿ ನನ್ನ ಮೊಮ್ಮಗನೊಂದಿಗೆ ಕೃಷಿ ಪ್ರಾರಂಭಿಸುತ್ತೇನೆ ಎಂದು ಸಿಎಂ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿಶ್ವಾಸಮತ ಬಳಿಕ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.

    ಏತನ್ಮಧ್ಯೆ, ಪಕ್ಷದ ಹಲವು ಶಾಸಕರಿಗೆ ವಿಧಾನಸಭೆ ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ. ಕಾಂಗ್ರೆಸ್ ಶಾಸಕರು ಒಟ್ಟಾಗಿ ವಿಧಾನಭವನದಲ್ಲಿ ಲಾಬಿಯಲ್ಲಿದ್ದೇವೆ ಆದರೆ ನಾವು ಪ್ರವೇಶಿಸುವ ಕೆಲವು ನಿಮಿಷಗಳ ಮೊದಲು ಗೇಟ್​ಗಳನ್ನು ಮುಚ್ಚಿದ್ದರಿಂದ ಪ್ರವೇಶಿಸಲು ಮತ್ತು ಮತ ಚಲಾಯಿಸಲು ಅವಕಾಶ ಸಿಗಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್​ನ 10 ಸದಸ್ಯರು ಮತದಾನದ ವೇಳೆ ಹಾಜರಾಗಿರಲಿಲ್ಲ. ಕಾಂಗ್ರೆಸ್​ನ ಇಬ್ಬರು ಪ್ರಮುಖ ಶಾಸಕರಾದ ಅಶೋಕ್ ಚವಾಣ್ ಮತ್ತು ವಿಜಯ್ ವಡೆತ್ತಿವಾರ್ ವಿಧಾನಸಭೆ ತಡವಾಗಿ ಬಂದಿದ್ದು ಕೂಡ ಚರ್ಚೆಗೆ ಗ್ರಾಸವಾಗಿದೆ.

    ಕಣ್ಣೀರು ಹಾಕಿದ ಸಿಎಂ ಶಿಂಧೆ: ಸದನವನ್ನುದ್ದೇಶಿಸಿ ತಮ್ಮ ಹೋರಾಟದ ಬದುಕಿನ ಬಗ್ಗೆ ಮಾತನಾಡುತ್ತಾ ಶಿಂಧೆ ತಮ್ಮ ಇಬ್ಬರು ಮಕ್ಕಳಾದ ದೀಪೇಶ್, ಶುಭದಾ ಅವರನ್ನು 2000ರಲ್ಲಿ ದೋಣಿ ಅಪಘಾತದಲ್ಲಿ ಕಳೆದುಕೊಂಡ ಆಘಾತಕಾರಿ ಘಟನೆ ನೆನೆದು ಕಣ್ಣೀರು ಹಾಕಿದರು. ಗುರು ಆನಂದ್ ದಿಘ ಅವರ ಪೋ›ತ್ಸಾಹ, ನೆರವನ್ನು ನೆನೆದ ಶಿಂಧೆ, ಕಣ್ಣೀರನ್ನು ಒರೆಸಿ, ಮಾನಸಿಕವಾಗಿ ಬಲಗೊಳಿಸಿದ್ದಲ್ಲದೆ, ಪ್ರಬಲ ಮತ್ತು ಪರಿಣಾಮಕಾರಿ ರಾಜಕಾರಣಿಯನ್ನಾಗಿ ಮಾಡಿದ್ದೇ ಅವರು ಎಂದರು. ಜೂನ್ 2, 2000 ನನ್ನ ಜೀವನದ ಕರಾಳ ದಿನವಾಗಿತ್ತು. ನನ್ನೊಳಗೆ ಏನೂ ಉಳಿದಿರಲಿಲ್ಲ, ಮಾನಸಿಕವಾಗಿ ದಣಿದಿದ್ದೆ. ಆನಂದ್ ದಿಘ ಸಾಹೇಬರು ಪ್ರತಿದಿನ ನನ್ನ ಮನೆಗೆ ಬಂದು ಸಮಾಧಾನಪಡಿಸುತ್ತಿದ್ದರು. ನಾನು ಮುಂದೆ ಏನು ಮಾಡುತ್ತೇನೆ ಎಂದು ಕೇಳಿದಾಗ, ಕುಟುಂಬಕ್ಕೆ ನನ್ನ ಅಗತ್ಯವಿದೆ ಎಂದೆ. ಆಗ ದಿಘ ಸಾಹೇಬರು, ಶಿವಸೇನೆಯಲ್ಲಿ ಒಂದು ದೊಡ್ಡ ಕುಟುಂಬ ನಿಮಗಾಗಿ ಕಾದಿದೆ ಎಂದು ಧೈರ್ಯ ತುಂಬಿದರು ಎಂದರು.

    ಇಂಧನ ತೆರಿಗೆ ಇಳಿಕೆ: ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗುವುದು ಎಂದು ಸಿಎಂ ಏಕನಾಥ ಶಿಂಧೆ ಘೋಷಣೆ ಮಾಡಿದ್ದಾರೆ. ಯಾವ ಪ್ರಮಾಣದಲ್ಲಿ ತೆರಿಗೆ ಕಡಿತ ಮಾಡಬೇಕು ಎಂಬುದನ್ನು ಮುಂದಿನ ಸಂಪುಟ ಸಭೆಯಲ್ಲಿ ತೀರ್ವನಿಸಲಾಗುತ್ತದೆ ಎಂದಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ಎರಡು ಬಾರಿ ಇಂಧನ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿದೆ. ಆದರೆ ಶಿವಸೇನೆ ನೇತೃತ್ವದ ಸರ್ಕಾರ ತೆರಿಗೆ ಇಳಿಕೆ ಮಾಡಿರಲಿಲ್ಲ.

    ಉಲ್ಟಾ ಹೊಡೆದ ಶಾಸಕ: ರಾಜಕೀಯದಲ್ಲಿ ಯಾರು ಯಾವಾಗ ಎಲ್ಲಿರುತ್ತಾರೆ ಎಂಬುದು ಊಹಿಸಲಸಾಧ್ಯ. ಅದಕ್ಕೆ ಉದಾಹರಣೆ ಎಂಬಂತೆ; ಉದ್ಧವ್ ಠಾಕ್ರೆಗೆ ಅನ್ಯಾಯ ಮಾಡಿದರೆಂದು ಠಾಕ್ರೆ ಬೆಂಬಲಿಸಿ ವಾರದ ಹಿಂದೆ ಕಣ್ಣೀರು ಹಾಕಿದ್ದ ಶಿವಸೇನೆ ಶಾಸಕ ಸಂತೋಷ್ ಬಂಗಾರ್ ಅಚ್ಚರಿ ಎಂಬಂತೆ ವಿಶ್ವಾಸಮತ ಪರೀಕ್ಷೆಯಲ್ಲಿ ಶಿಂಧೆ ಸರ್ಕಾರದ ಪರ ಮತ ಹಾಕಿದ್ದಾರೆ. ಕಳೆದ ರಾತ್ರಿ ಸಿಎಂ ಶಿಂಧೆ ಉಳಿದುಕೊಂಡಿದ್ದ ಹೊಟೇಲ್ ಗೆ ಭೇಟಿ ನೀಡಿದ್ದ ಬಂಗಾರ್, ಒಂದೇ ರಾತ್ರಿಯಲ್ಲಿ ತಮ್ಮ ನಿಲುವು ಬದಲಿಸಿದ್ದಾರೆ!

    ಆದಿತ್ಯ ಠಾಕ್ರೆ ವಿಪ್ ಉಲ್ಲಂಘನೆ: ವಿಶ್ವಾಸಮತ ಹಿನ್ನೆಲೆಯಲ್ಲಿ ಶಿವಸೇನೆಯ ಎಲ್ಲ ಶಾಸಕರಿಗೆ ಸರ್ಕಾರದಿಂದ ವಿಪ್ ಜಾರಿ ಮಾಡಲಾಗಿತ್ತು. ಆದರೆ ವಿಪ್ ಉಲ್ಲಂಘಿಸಿ ಸರ್ಕಾರದ ವಿರುದ್ಧ ಮತಹಾಕಿದ್ದಾರೆಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಸೇರಿ ವಿರೋಧಿ ಬಣದ ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಶಿಂಧೆ ಬಣ ಹೊಸ ಸ್ಪೀಕರ್ ರಾಹುಲ್ ನಾರ್ವೆಕರ್ ಅವರಿಗೆ ಮನವಿ ಮಾಡಿದೆ. ಈ ನಡುವೆ ಪಕ್ಷಕ್ಕೆ ಹೊಸ ವಿಪ್ ಆಯ್ಕೆ ಮಾಡುವ ಹೊಸ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಠಾಕ್ರೆ ತಂಡ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅರ್ಜಿ ವಿಚಾರಣೆ ಬಾಕಿಯಿದೆ. ಅಲ್ಲದೆ, ಶಿಂಧೆ ಬಣದ 15 ಶಾಸಕರನ್ನು ಅನರ್ಹಗೊಳಿಸುವ ಬಗ್ಗೆಯೂ ನ್ಯಾಯಾಲಯ ನಿರ್ಧರಿಸಬೇಕಿದೆ.

    ನಮ್ಮದು ಇ.ಡಿ. ಸರ್ಕಾರ!: ಕೆಲವರು ನಮ್ಮದು ಇಡಿ (ಏಕನಾಥ-ದೇವೇಂದ್ರ) ಸರ್ಕಾರ ಎಂದು ಲೇವಡಿ ಮಾಡುತ್ತಾರೆ. ಹೌದು, ಇಡಿ ಸರ್ಕಾರ’ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು (ಇಡಿ) ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪಗಳೆದ್ದಿರುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಲೇವಡಿ ಮಾಡಲು ವಿಪಕ್ಷಗಳು ಈ ಪದ ಪ್ರಯೋಗ ಮಾಡುತ್ತಿವೆ. ವಿಶ್ವಾಸ ಮತ ವೇಳೆ ಏಕನಾಥ ಶಿಂಧೆ ಸರ್ಕಾರದ ಪರ ಶಿವಸೇನೆ ಬಂಡಾಯ ಶಾಸಕರು ಮತ ಹಾಕಿದ ವೇಳೆ ಇತರೆ ವಿಪಕ್ಷಗಳ ಶಾಸಕರು ಇಡಿ, ಇಡಿ ಎಂದು ಬೊಬ್ಬಿಡುತ್ತಾ ವ್ಯಂಗ್ಯವಾಡಿದರು.

    ಸಾಕ್ಷ್ಯಚಿತ್ರದಲ್ಲಿ ‘ಕಾಳಿ’ಗೆ ಅವಮಾನ; ಚಿತ್ರ ಪ್ರದರ್ಶನ ಮಾಡದಂತೆ ಸೂಚನೆ…

    ಸಮುದ್ರದೊಳಕ್ಕೇ ಹೊಕ್ಕಿದ್ದ ಕಾರು; ನಾಪತ್ತೆಯಾಗಿದ್ದವನ ಶವ ಇಂದು ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts