More

    ಗಲಭೆ ತಪ್ಪಿಸಲು ವಾರದೊಳಗೆ ಸಭೆ

    ಶಿವಮೊಗ್ಗ: ಕರೊನಾ, ಹರ್ಷನ ಕೊಲೆ, ಹಿಜಾಬ್ ಬಳಿಕ ಫ್ಲೆಕ್ಸ್ ಮತ್ತು ಚಾಕು ಇರಿತ ವಿವಾದದಿಂದ ಶಿವಮೊಗ್ಗದ ಬ್ರಾೃಂಡ್ ಕುಸಿದಿದೆ. ಎಂಟು ತಿಂಗಳಲ್ಲೇ ನಾಲ್ಕು ಬಾರಿ ನಿಷೇಧಾಜ್ಞೆ ಜಾರಿಯಿಂದ ವ್ಯಾಪಾರ-ವಹಿವಾಟಿನ ಮೇಲೆ ಪರಿಣಾಮ ಬೀರಿದೆ. ಪದೇಪದೆ ಅಂಗಡಿ-ಮುಂಗಟ್ಟು ಬಂದ್ ಮಾಡುವುದರಿಂದ ಕೋಟ್ಯಂತರ ರೂ. ನಷ್ಟ ಸಂಭವಿಸುತ್ತಿದ್ದು ತೆರಿಗೆದಾರರ ಆರ್ಥಿಕ ಹೊರೆ ತಗ್ಗಿಸುವ ಸಲುವಾಗಿ ವಾರದೊಳಗೆ ಜಿಲ್ಲೆಯ ಜನಪ್ರತಿನಿಧಿಗಳು, ಧರ್ಮಗುರುಗಳು ಮತ್ತು ಅಧಿಕಾರಿಗಳ ಸಭೆ ಕರೆದು ಚರ್ಚಿಸಲು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ನಿರ್ಧರಿಸಿತು.
    ಸಂಘದ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ವಿವಿಧ ಉದ್ಯಮಗಳ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಕೆಲ ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಈ ವೇಳೆ ವರ್ತಕರು, ವ್ಯಾಪಾರಿಗಳ ಸಮಸ್ಯೆಗಳನ್ನು ಮನದಟ್ಟು ಮಾಡುವ ನಿಟ್ಟಿನಲ್ಲಿ ಶೀಘ್ರ ಸಭೆ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
    ವರ್ತಕರು, ಉದ್ಯಮಿಗಳು, ಮಾಧ್ಯಮ ಪ್ರತಿನಿಧಿಗಳ ಸಲಹೆ ಕ್ರೋಡೀಕರಿಸಿ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಜಿಲ್ಲಾಡಳಿತ 144 ಸೆಕ್ಷನ್ ಅಥವಾ ಕರ್ಫ್ಯೂ ಬಗ್ಗೆ ಸ್ಪಷ್ಟನೆ ನೀಡಬೇಕು. ಜನರಲ್ಲಿ ಗೊಂದಲ ಮತ್ತು ಆತಂಕಕ್ಕೆ ಕಾರಣವಾಗುವುದನ್ನು ತಪ್ಪಿಸಬೇಕು ಎಂದು ಹೇಳಿದರು. ವ್ಯಾಪಾರ-ವಹಿವಾಟಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಬೇಕು. ಒಂದು ವಾರದೊಳಗೆ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಆಡಳಿತ ವರ್ಗದವರನ್ನು ಒಟ್ಟಿಗೆ ಸೇರಿಸಿ ಚಿಂತನ-ಮಂಥನ ನಡೆಸಲಾಗುವುದು ಎಂದರು.
    ನಗರದ ವರ್ತಕರು ಹಾಗೂ ನಾಗರಿಕರು ಶಾಂತಿ, ನೆಮ್ಮದಿಯಿಂದ ಇರುವ ವಾತಾವರಣ ಸೃಷ್ಟಿಗೆ ಪ್ರಯತ್ನಿಸಬೇಕಿದೆ. ಆ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಿದೆ. ಜತೆಗೆ ಪ್ರಸ್ತುತ ಯವ ಸಮೂಹದ ಪಾತ್ರದ ಬಗ್ಗೆಯೂ ಗಂಭೀರವಾಗಿ ಆಲೋಚನೆ ಮಾಡಬೇಕಿದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts