More

    25 ಲಕ್ಷ ರೂ.ಗಾಗಿ 6 ಲಕ್ಷ ಕಳೆದುಕೊಂಡ ವೃದ್ಧ !

    ಶಿವಮೊಗ್ಗ: ಮಗಳ ಮದುವೆಗೆ ಆಸ್ತಿ ಮಾರಾಟಕ್ಕೆ ಮುಂದಾದ ವೃದ್ಧನಿಗೆ ವಂಚಕನೊಬ್ಬ ಬರೋಬ್ಬರಿ 6 ಲಕ್ಷ ರೂ. ಪಂಗನಾಮ ಹಾಕಿ ಪರಾರಿಯಾಗಿದ್ದಾರೆ. ಗಾಡಿಕೊಪ್ಪದ 70 ವರ್ಷದ ವೃದ್ಧ ವಂಚನೆಗೆ ಒಳಗಾಗಿದ್ದು ಸುಂದರ್ ಎಂಬಾತ ಮೋಸ ಮಾಡಿದ ಆರೋಪಿ.
    ವೃದ್ಧನಿಗೆ ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳದಲ್ಲಿ ಒಂದು ಎಕರೆ ಜಮೀನಿದ್ದು ವೃದ್ಧನ ಕುಟುಂಬ ಗಾಡಿಕೊಪ್ಪದಲ್ಲಿ ವಾಸವಿದೆ. ಇತ್ತೀಚೆಗೆ ಕಾರ್ಕಳದಲ್ಲಿರುವ ಜಮೀನು ಮಾರಾಟ ಮಾಡಿ, ಅದರಿಂದ ಬಂದ ಹಣದಲ್ಲಿ ಮಗಳ ಮದುವೆ ಮಾಡಲು ಆಲೋಚಿಸಿದ್ದರು. ಅದಕ್ಕಾಗಿ ಜಾಹೀರಾತನ್ನೂ ನೀಡಿದ್ದರು.
    ಆ ಜಾಹೀರಾತು ನೋಡಿ ವೃದ್ಧನ ಮನೆಗೆ ಬಂದ ಸುಂದರ್ ಮತ್ತು ಮಹೇಶ್ ಎಂಬುವರು ಜಮೀನು ಮಾರಾಟ ಮತ್ತು ಖರೀದಿ ಮಾಡುವ ಬಗ್ಗೆ ಚರ್ಚೆ ನಡೆಸಿ ಪರಿಚಯ ಮಾಡಿಕೊಂಡು ಮೊಬೈಲ್ ನಂಬರ್ ಪಡೆದಿದ್ದರು. ಆನಂತರ ಮತ್ತೊಂದು ದಿನ ಫೋನ್ ಮಾಡಿದ ಸುಂದರ್ ಜಮೀನು ಮಾರಾಟ ಮಾಡುವ ಅಗತ್ಯವಿಲ್ಲ. 6 ಲಕ್ಷ ರೂ. ಕೊಟ್ಟರೆ 25 ಲಕ್ಷ ರೂ. ಕೊಡಿಸುತ್ತೇನೆ. ಅದೇ ಹಣದಿಂದ ಮಗಳ ಮದುವೆ ಮಾಡಬಹುದು ಎಂದು ನಂಬಿಸಿದ್ದರು.
    ಅದರಂತೆ ವೃದ್ಧನನ್ನು ನ.30ರಂದು ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಕರೆಸಿದ್ದ ಆರೋಪಿ ಸುಂದರ್ ಕಾರಿನಲ್ಲಿ ಕರೆದೊಯ್ದು ಖಾಲಿ ನೋಟು(ಬ್ಲಾಂಕ್ ನೋಟು)ಗಳನ್ನು ಕೆಮಿಕಲ್‌ಗೆ ಅದ್ದಿ 500 ರೂ. ಮುಖಬೆಲೆಯ 1,500 ರೂ. ಅಸಲಿ ನೋಟು ಕೊಟ್ಟು ನಂಬಿಸಿದ್ದ. ಬಳಿಕ 6 ಲಕ್ಷ ರೂ. ಸಿದ್ದಪಡಿಸಿಕೊಳ್ಳುವಂತೆ ಹೇಳಿ ವಾಪಸ್ ಕಳುಹಿಸಿದ್ದರು. ಅಲ್ಲಿಂದ ಬಂದ ಮರುದಿನವೇ ವೃದ್ಧ ಮನೆಯಲ್ಲಿದ್ದ ಬಂಗಾರವನ್ನು ಖಾಸಗಿ ಫೈನಾನ್ಸ್‌ನಲ್ಲಿ ಇರಿಸಿ 6 ಲಕ್ಷ ರೂ. ಹೊಂದಿಸಿಕೊಂಡು ಸುಂದರ್‌ಗೆ ಕರೆ ಮಾಡಿದ್ದರು.
    ಡಿ.2ರಂದು ಕಾರಿನಲ್ಲಿ ಮನೆಗೆ ಬಂದ ಸುಂದರ್, ವೃದ್ಧನನ್ನು ಕೂರಿಸಿಕೊಂಡು ಎಂಆರ್‌ಎಸ್‌ಗೆ ತೆರಳಿದ್ದ. ಅಲ್ಲಿಂದ ಶಾಪ್‌ವೊಂದಕ್ಕೆ ತೆರಳಿ ನೋಟು ತಯಾರಿಸುವ ಕೆಮಿಕಲ್ ಖಾಲಿಯಾಗಿದೆ. ಬೆಂಗಳೂರಿಗೆ ಹೋಗಿ ತರಬೇಕೆಂದು ನಂಬಿಸಿ ವೃದ್ಧನನ್ನು ಕಾರಿಂದ ಇಳಿದ ಜಾಗ ಖಾಲಿ ಮಾಡಿದ್ದಾನೆ. ಇದೀಗ ವಂಚನೆ ಆಗಿರುವುದು ಅರಿವಿಗೆ ಬಂದಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts