More

    ಫೆ.1, 2ಕ್ಕೆ ಶಿವಮೊಗ್ಗ ಜಿಲ್ಲಾ 17ನೇ ಕನ್ನಡ ಸಾಹಿತ್ಯ ಸಮ್ಮೇಳನ

    ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ 1 ಮತ್ತು 2ರಂದು ಚಾಲುಕ್ಯನಗರದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದು ನಾಡಿನ ಹಿರಿಯ ಸಾಹಿತಿ, ರಿಪ್ಪನ್‌ಪೇಟೆ ಸಮೀಪದ ಲಕ್ಷ್ಮಣ ಕೊಡಸೆ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
    ಸಾಹಿತ್ಯ ಗ್ರಾಮದ ಮಹಾಮಂಟಪದಲ್ಲಿ ಪಿ.ಲಂಕೇಶ್ ಮಹಾ ವೇದಿಕೆ ನಿರ್ಮಾಣಗೊಳ್ಳಲಿದೆ. ಜತೆಗೆ ಎಂ.ಕೆ.ಇಂದಿರಾ, ಡಾ. ಹಾ.ಮಾ.ನಾಯ್ಕ, ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನ ಮಹಾದ್ವಾರಗಳನ್ನೂ ನಿರ್ಮಿಸಲಾಗಿದೆ. ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿವಿಧ ವಾಣಿಜ್ಯ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ಸೋಮವಾರ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಎರಡು ದಿನಗಳ ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು ಮೂರು ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಲು ಹಳ್ಳ ಹರಿಯಲಿ, ಸಮ್ಮೇಳನಾಧ್ಯಕ್ಷರ ಬದುಕು-ಬರಹ, ಜಾನಪದ-ಮರು ಓದು, ಜಿಲ್ಲೆಯ ಕೈಗಾರಿಕೆ-ಕಾರ್ಮಿಕರ ತಲ್ಲಣಗಳು ವಿಚಾರವಾಗಿ ಗೋಷ್ಠಿಗಳು ನಡೆಯಲಿವೆ. ಫೆ.1ರಂದು ಬೆಳಗ್ಗೆ 9.30ಕ್ಕೆ ಡಿಡಿಪಿಐ ಪಿ.ಆರ್.ಪರಮೇಶ್ವರಪ್ಪ ಅವರು ಧ್ವಜಾರೋಹಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಅವರು ನಾಡಧ್ವಜಾರೋಹಣ ನೆರವೇರಿಸುವರು ಎಂದರು.
    ಸಮ್ಮೇಳನದ ಪ್ರತಿನಿಧಿಗಳಾಗಿ ಭಾಗವಹಿಸುವ ಎಲ್ಲ ತಾಲೂಕುಗಳ ಸರ್ಕಾರಿ ನೌಕರರಿಗೆ ಒಒಡಿ ಸೌಲಭ್ಯವಿದೆ. ಈಗಾಗಲೇ ಒಂದು ಸಾವಿಕ್ಕೂ ಹೆಚ್ಚು ಆಸಕ್ತರು ಪ್ರತಿನಿಧಿಗಳಾಗಿ ನೋಂದಾಯಿಸಿಕೊಂಡಿದ್ದಾರೆ. ಸಮ್ಮೇಳನದಲ್ಲಿ ವಿಶೇಷವಾಗಿ ಬೆಳಗಾವಿಯ ರವೀಂದ್ರ ತೊಟಗೆರೆ ತಂಡದಿಂದ ಗಡಿ ಸಮಸ್ಯೆ ಕುರಿತಾದ ವಾಸ್ತವಿಕ ವಿಚಾರಗಳ ಒಳಗೊಂಡ ದಾಖಲೆ ಮತ್ತು ಚಿತ್ರಗಳ ಪ್ರದರ್ಶನದ ವ್ಯವಸ್ಥೆ ಮಾಡಲಾಗುವುದು ಎಂದರು. ಪ್ರಮುಖರಾದ ಯು.ಮಧುಸೂದನ್ ಐತಾಳ್, ಎಂ.ನವೀನ್‌ಕುಮಾರ್, ಭಾರತಿ ರಾಮಕೃಷ್ಣ, ಸೋಮಿನಕಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts